ಶ್ರೀನಗರ ಫೆಬ್ರುವರಿ 07: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಶ್ರೀನಗರ ಜಿಲ್ಲೆಯಲ್ಲಿ ಸ್ಥಳೀಯರಲ್ಲದ ವ್ಯಕ್ತಿಯೊಬ್ಬರನ್ನು ಭಯೋತ್ಪಾದಕರು (Terrorist) ಗುಂಡಿಕ್ಕಿ ಕೊಂದಿದ್ದಾರೆ. ಹತ್ಯೆಯಾದ ವ್ಯಕ್ತಿ ಒಣ ಹಣ್ಣು ಮಾರಾಟಗಾರ ಎನ್ನಲಾಗಿದೆ. ಇತ್ತೀಚಿನ ಘಟನೆಯಲ್ಲಿ ಇದು ಟಾರ್ಗೆಟ್ ಹತ್ಯೆಯಾಗಿದೆ. ಶ್ರೀನಗರದ ಹಬ್ಬಾ ಕಡಲ್ (Habba kadal) ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರದೇಶವನ್ನು ಸುತ್ತುವರಿಯಲಾಗಿದೆ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಪಂಜಾಬ್‌ನ ಅಮೃತಸರ ಮೂಲದ ಅಮೃತ್ ಪಾಲ್ ಎಂದು ಗುರುತಿಸಲಾಗಿದೆ. ಭಯೋತ್ಪಾದಕರು ಮತ್ತೊಬ್ಬ ವ್ಯಕ್ತಿ ರೋಹಿತ್ (25) ಎಂಬವರ ಮೇಲೆ ಗುಂಡು ಹಾರಿಸಿದ್ದು ಅವರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಬ್ಬರು ವ್ಯಕ್ತಿಗಳ ಮೇಲೆ ಉಗ್ರರು ಹತ್ತಿರದಿಂದಲೇ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬನನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. “ಶಹೀದ್ ಗುಂಜ್ ಶ್ರೀನಗರದಲ್ಲಿ ಅಮೃತಸರ ನಿವಾಸಿ ಅಮೃತಪಾಲ್ ಸಿಂಗ್ ಎಂದು ಗುರುತಿಸಲಾದ ಸ್ಥಳೀಯರಲ್ಲದವರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದರು, ತೀವ್ರ ಗಾಯಗೊಂಡಿದ್ದ ಅವರು ಸಾವಿಗೀಡಾದರು. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
#Terrorists fired upon a non-local identified as Amritpal Singh resident of Amritsar at Shaheed Gunj #Srinagar, who #succumbed to the injuries. One more person is grievously injured and evacuated for medical attention. Area has been #cordoned off. Further details shall follow.
— Kashmir Zone Police (@KashmirPolice) February 7, 2024
ರೋಹಿತ್ ಕೂಡ ಅಮೃತಸರ ಮೂಲದವರು. ಅವರ ಹೊಟ್ಟೆಗೆ ಗುಂಡು ತಗುಲಿದ್ದು, ಇಲ್ಲಿನ ಎಸ್‌ಎಂಎಚ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದು ಈ ವರ್ಷ ಕಾಶ್ಮೀರದಲ್ಲಿ ಸ್ಥಳೀಯರಲ್ಲದವರ ಮೇಲೆ ಭಯೋತ್ಪಾದಕರು ನಡೆಸಿದ ಮೊದಲ ದಾಳಿಯಾಗಿದೆ.
ಇದನ್ನೂ ಓದಿ: ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳನ್ನು ಬಲಪಡಿಸಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಮಿತ್ ಶಾ
ಕಳೆದ ವರ್ಷ, ಅನಂತನಾಗ್ ಮತ್ತು ಶೋಪಿಯಾನ್ ಜಿಲ್ಲೆಗಳು ಸೇರಿದಂತೆ ಕಣಿವೆಯಲ್ಲಿ ಸ್ಥಳೀಯೇತರ ಕಾರ್ಮಿಕರ ಮೇಲೆ ಭಯೋತ್ಪಾದಕರು ಹಲವಾರು ದಾಳಿಗಳನ್ನು ನಡೆಸಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದಕರ ಗುಂಡಿಗೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಸಾವಿಗೀಡಾಗಿದ್ದರು. ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿರುವ ಮಸೀದಿಯೊಂದರಲ್ಲಿ ನಮಾಝ್ ಸಲ್ಲಿಸುತ್ತಿದ್ದಾಗ ನಿವೃತ್ತ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಶಫಿ ಮೇಲೆ ಉಗ್ರರು ದಾಳಿ ನಡೆಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:00 pm, Wed, 7 February 24