AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಂತರ್ ಮಂತರ್​ನಲ್ಲಿ ಪ್ರತಿಭಟನೆ ಅಡ್ಡಿಪಡಿಸಲು ಜೆಇಎಂ ಶಂಕಿತ ಉಗ್ರನ ಸಂಚು: ಪೊಲೀಸರ ಸಮವಸ್ತ್ರ ಧರಿಸಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ವೇಳೆ, ಪೊಲೀಸ್ ಸಮವಸ್ತ್ರ ಧರಿಸಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ಜೈಶ್-ಎ-ಮೊಹಮ್ಮದ್ (JeM) ಶಂಕಿತ ಉಗ್ರ ಸಂಚು ರೂಪಿಸಿದ್ದ. ಪಶ್ಚಿಮ ಬಂಗಾಳದಲ್ಲಿ ಬಂಧಿತನಾದ ಮೊಹಮ್ಮದ್ ಹಮೀಮ್ ಮೊಂಡಲ್, ಪ್ರಮುಖ ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಲು ಯೋಜಿಸಿದ್ದ. ಐಎಸ್​ಐನೊಂದಿಗೆ ಸಂಪರ್ಕ ಹೊಂದಿದ್ದ ಈ ಜಾಲದ ಬಗ್ಗೆ ಎಸ್‌ಟಿಎಫ್ ತೀವ್ರ ತನಿಖೆ ನಡೆಸುತ್ತಿದೆ.

ಜಂತರ್ ಮಂತರ್​ನಲ್ಲಿ ಪ್ರತಿಭಟನೆ ಅಡ್ಡಿಪಡಿಸಲು ಜೆಇಎಂ ಶಂಕಿತ ಉಗ್ರನ ಸಂಚು: ಪೊಲೀಸರ ಸಮವಸ್ತ್ರ ಧರಿಸಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್
ಪ್ರತಿಭಟನೆ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 02, 2026 | 10:52 AM

Share

ಕೋಲ್ಕತ್ತಾ, ಆಗಸ್ಟ್ 02: ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್(NEET)’ ಪರೀಕ್ಷಾ ಅಕ್ರಮ ಖಂಡಿಸಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ‘ಜೈಶ್-ಎ-ಮೊಹಮ್ಮದ್’ (JeM) ಸಂಘಟನೆಯ ಶಂಕಿತ ಭಯೋತ್ಪಾದಕ ಮೊಹಮ್ಮದ್ ಹಮೀಮ್ ಮೊಂಡಲ್ ಸಂಚು ರೂಪಿಸಿದ್ದ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ವಿಶೇಷ ಕಾರ್ಯಪಡೆ (STF) ಈ ವಾರದ ಆರಂಭದಲ್ಲಿ ಬರ್ಧಮಾನ್‌ನಲ್ಲಿ ಮೊಂಡಲ್‌ನನ್ನು ಬಂಧಿಸಿದ್ದು, ತನಿಖೆಯ ವೇಳೆ ಈ ಸ್ಫೋಟಕ ಸತ್ಯಗಳು ಹೊರಬಂದಿವೆ.

ಪ್ರತಿಭಟನೆಯ ವೇಳೆ ಸಾರ್ವಜನಿಕರ ಹಾಗೂ ಭದ್ರತಾ ಪಡೆಗಳ ಕಣ್ಣು ತಪ್ಪಿಸಲು ಪೊಲೀಸ್ ಸಮವಸ್ತ್ರವನ್ನು ಪಡೆದುಕೊಂಡು ಪ್ರತಿಭಟನಾನಿರತರ ಮಧ್ಯೆ ತೂರಿಬಂದು ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಸಂಚು ರೂಪಿಸಲಾಗಿತ್ತು. ಜಂತರ್ ಮಂತರ್ ಪ್ರತಿಭಟನೆಯನ್ನು ಅಡ್ಡಿಪಡಿಸುವುದಲ್ಲದೆ, ಪ್ರಮುಖ ರಾಜಕಾರಣಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯೋಜಿಸಲಾಗಿತ್ತು ಎಂದು ಎಸ್‌ಟಿಎಫ್ ಐಜಿಪಿ ಗೌರವ್ ಶರ್ಮಾ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರನ್ನು ಗುರಿಯಾಗಿಸಲು ಮೊಂಡಲ್ ಯೋಜಿಸಿದ್ದ. ಜಾರ್ಖಂಡ್‌ನ ಸಾಹಿಬ್‌ಗಂಜ್‌ನಿಂದ ಬಂಧಿತಳಾದ ಅರ್ಪಿತಾ ಸರ್ಕಾರ್ ಜೊತೆ ಸೇರಿ ಹೌರಾದ ಹಿರಿಯ ರಾಜಕಾರಣಿಯೊಬ್ಬರ ಮಗನನ್ನು ‘ಹನಿಟ್ರ್ಯಾಪ್’ ಮಾಡಿ ಅಪಹರಿಸಲು ಹಾಗೂ ಭಾರಿ ಹಣ ಸುಲಿಗೆ ಮಾಡಲು ಯೋಜಿಸಲಾಗಿತ್ತು.

ಮತ್ತಷ್ಟು ಓದಿ: ನೋಂದಣಿ ಆಯ್ತು ‘ದಿ ಆಕ್ಸಿಡೆಂಟಲ್ ಕಾಕ್ರೋಚ್ ಪಾರ್ಟಿ’ ಸಿನಿಮಾ ಟೈಟಲ್

ಮೊಂಡಲ್ ಆರಂಭದಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ತನ್ನ ಹ್ಯಾಂಡ್ಲರ್‌ಗಳನ್ನು ಸಂಪರ್ಕಿಸಿ, ನಂತರ ವಾಟ್ಸಾಪ್ ಮತ್ತು ಟೆಲಿಗ್ರಾಮ್‌ನಂತಹ ಎನ್‌ಕ್ರಿಪ್ಟೆಡ್ ಆಪ್‌ಗಳ ಮೂಲಕ ಸಂಭಾಷಣೆ ಮುಂದುವರೆಸಿದ್ದ. ಈತನ ಮೊಬೈಲ್ ಚಾಟ್ ಇತಿಹಾಸವನ್ನು ಪರಿಶೀಲಿಸಿದಾಗ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’ (ISI) ಮತ್ತು ಶಹಜಾದ್ ಭಟ್ಟಿ ಗ್ಯಾಂಗ್‌ನ ರಾಣಾ, ಉಜೈರ್, ಅಬಿದ್ ಜಟ್ 333 ಮತ್ತು ಹಮದ್ ಎಂಬ ರಹಸ್ಯ ಹ್ಯಾಂಡ್ಲರ್‌ಗಳ ಜೊತೆ ಸಂಪರ್ಕದಲ್ಲಿರುವುದು ದೃಢಪಟ್ಟಿದೆ.

ಜುಲೈ 25ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದಿದ್ದ ವಿದ್ಯಾರ್ಥಿ ಪ್ರತಿಭಟನೆಯು ದಿಢೀರ್ ಹಿಂಸಾರೂಪಕ್ಕೆ ತಿರುಗಿ, ದೆಹಲಿ ಪೊಲೀಸ್ ಅಧಿಕಾರಿಗಳ ಮೇಲೆ ರೊಚ್ಚಿಗೆದ್ದ ಗುಂಪು ದಾಳಿ ನಡೆಸಿತ್ತು. ಇದೀಗ ಈ ಉಗ್ರ ಜಾಲದ ಪ್ಲಾನ್ ಬೆಳಕಿಗೆ ಬಂದಿರುವುದು, ಅಂದಿನ ಹಿಂಸಾಚಾರದಲ್ಲಿ ಸಮಾಜಘಾತಕ ಶಕ್ತಿಗಳು ಭಾಗಿಯಾಗಿದ್ದವು ಎಂಬ ಶಂಕೆಗೆ ಮತ್ತಷ್ಟು ಪುಷ್ಟಿ ನೀಡಿದೆ.

ಈ ಭಯೋತ್ಪಾದನಾ ಜಾಲದಇತರ ಶಂಕಿತ ಸದಸ್ಯರನ್ನು ಗುರುತಿಸಲು ಹಾಗೂ ಪೂರ್ವ ಭಾರತದಲ್ಲಿ ಇವರ ರಹಸ್ಯ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಎಸ್‌ಟಿಎಫ್ ಪಡೆಗಳು ತನಿಖೆ ತೀವ್ರಗೊಳಿಸಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us