ಪಶ್ಚಿಮ ಬಂಗಾಳದಲ್ಲಿ ಮೂವರು ಜಾರ್ಖಂಡ್ ಶಾಸಕರ ಬಂಧನ: ಅಪಾರ ಹಣ ವಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 31, 2022 | 7:55 AM

ಕಾರಿನಲ್ಲಿದ್ದ ನಗದು ಅಪಾರ ಪ್ರಮಾಣದಲ್ಲಿದ್ದ ಕಾರಣ ಹಣ ಎಣಿಸುವ ಯಂತ್ರಗಳ ನೆರವಿನಿಂದ ಎಣಿಸಲಾಯಿತು. ಈ ಹಣ ಎಲ್ಲಿಂದ ಬಂತು ಮತ್ತು ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಶಾಸಕರನ್ನು ಪ್ರಶ್ನಿಸಲಾಯಿತು.

ಪಶ್ಚಿಮ ಬಂಗಾಳದಲ್ಲಿ ಮೂವರು ಜಾರ್ಖಂಡ್ ಶಾಸಕರ ಬಂಧನ: ಅಪಾರ ಹಣ ವಶ
ಸಾಂದರ್ಭಿಕ ಚಿತ್ರ
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಹೌರಾ ಸೇತುವೆ ಬಳಿ ಮೂವರು ಕಾಂಗ್ರೆಸ್ ಶಾಸಕರನ್ನು (Congress Workers) ಪೊಲೀಸರು ವಶಕ್ಕೆ ಪಡೆದುಕೊಂಡರು. ಈ ಶಾಸಕರಿದ್ದ ವಾಹನದಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್​ ಕಚ್ಚಪ್ ಮತ್ತು ನಮನ್ ಬಿಕ್ಸಲ್ ಕೊಂಗಾರಿ ಅವರಿದ್ದ ಕಾರನ್ನು ತಡೆದು ಪರಿಶೀಲಿಸಿದರು. ಇವರಿದ್ದ ಕಾರನ್ನು ರಾಷ್ಟ್ರೀಯ ಹೆದ್ದಾರಿ 16ರಲ್ಲಿ ತಡೆಯಲಾಯಿತು.

‘ಕಪ್ಪು ಕಾರಿನಲ್ಲಿ ದೊಡ್ಡಮಟ್ಟದ ಹಣವನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ನಮಗೆ ಬಂದಿತ್ತು. ನಂತರ ನಾವು ವಾಹನ ತಪಾಸಣೆ ಆರಂಭಿಸಿದೆವು. ಈ ವೇಳೆ ಜಾರ್ಖಂಡ್​ ಶಾಸಕರು ಪ್ರಯಾಣಿಸುತ್ತಿದ್ದ ಎಸ್​ಯುವಿ ತಡೆದು ಪರಿಶೀಲಿಸಿದೆವು. ಕಾರಿನಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾಯಿತು’ ಎಂದು ಹೌರಾ ಗ್ರಾಮೀಣ ವಲಯದ ಎಸ್​ಪಿ ಸ್ವಾತಿ ಭಂಗಾಲಿಯಾ ಮಾಹಿತಿ ನೀಡಿದರು.

ಕಾರಿನಲ್ಲಿದ್ದ ನಗದು ಅಪಾರ ಪ್ರಮಾಣದಲ್ಲಿದ್ದ ಕಾರಣ ಹಣ ಎಣಿಸುವ ಯಂತ್ರಗಳ ನೆರವಿನಿಂದ ಎಣಿಸಲಾಯಿತು. ಈ ಹಣ ಎಲ್ಲಿಂದ ಬಂತು ಮತ್ತು ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಶಾಸಕರನ್ನು ಪ್ರಶ್ನಿಸಲಾಯಿತು. ಶಾಸಕರೊಂದಿಗೆ ಇಬ್ಬರು ಇತರ ವ್ಯಕ್ತಿಗಳೂ ಕಾರಿನಲ್ಲಿದ್ದರು. ಈ ಕಾರಿನ ಮೇಲೆ ‘MLA Jamtara Jharkhand’ (ಶಾಸಕರು, ಜಮ್​ತಾರಾ, ಜಾರ್ಖಂಡ್) ಎನ್ನುವ ಫಲಕವಿತ್ತು. ಕಾಂಗ್ರೆಸ್​ನ ಚುನಾವಣಾ ಚಿಹ್ನೆಯೂ ಎದ್ದು ಕಾಣಿಸುವಂತಿತ್ತು ಎಂದು ಪೊಲೀಸರು ತಿಳಿಸಿದರು.

ಜಮ್​ತಾರಾ ಶಾಸಕ ಅನ್ಸಾರಿ, ರಾಂಚಿ ಜಿಲ್ಲೆ ಖಿರ್ಜಿ ಕ್ಷೇತ್ರದ ಶಾಸಕ ಕಚ್ಚಪ್ ಮತ್ತು ಸಿಮ್​ಡೆಗಾ ಜಿಲ್ಲೆ ಕೊಲೆಬಿರಾ ಶಾಸಕ ಕೊನ್​ಗಾರಿ ಪ್ರಸ್ತುತ ಪೊಲೀಸರ ವಶದಲ್ಲಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಾರ್ಖಂಡ್​ನ ಕಾಂಗ್ರೆಸ್​ ವಕ್ತಾರ ರಾಜೀವ್ ರಂಜನ್ ಪ್ರಸಾದ್, ಪ್ರಕರಣದ ಬಗ್ಗೆ ಪಕ್ಷವು ಮಾಹಿತಿ ಕಲೆಹಾಕುತ್ತಿದೆ ಎಂದು ಹೇಳಿದರು. ಜಾರ್ಖಂಡ್​ನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ವಕ್ತಾ ಸುಪ್ರಿಯೊ ಭಟ್ಟಾಚಾರ್ಯ ಮಾತನಾಡಿ, ‘ಈ ಪ್ರಕರಣದ ಬಗ್ಗೆ ಪಕ್ಷದ ಪ್ರತಿಕ್ರಿಯೆಯನ್ನು ನಾಳೆ ನೀಡಲಾಗುವುದು’ ಎಂದರು. ‘ಹಣದ ಮೂಲದ ಬಗ್ಗೆ ಶಾಸಕರು ವಿವರ ನೀಡಬೇಕು’ ಎಂದು ಬಿಜೆಪಿ ವಕ್ತಾರ ದೀಪಕ್ ಪ್ರಕಾಶ್ ಆಗ್ರಹಿಸಿದ್ದಾರೆ.

ಈ ನಡುವೆ ಘಟನೆ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಘಟಕವು, ‘ಜಾರ್ಖಂಡ್​ನಲ್ಲಿ ಕುದುರೆ ವ್ಯಾಪಾರದ ಮೂಲಕ ಸರ್ಕಾರ ಉರುಳಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಹಣದಿಂದ ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸಿತ್ತು. ಕೇಂದ್ರ ಸರ್ಕಾರದ ಯಾವುದಾದರೂ ತನಿಖಾ ಸಂಸ್ಥೆಯು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ಈ ಹಣದ ಮೂಲ ಯಾವುದು ಎಂದು ಪತ್ತೆಹಚ್ಚಲು ಮುಂದಾಗಬಹುದೇ’ ಎಂದು ಪ್ರಶ್ನಿಸಿದೆ.

Published On - 7:55 am, Sun, 31 July 22