Mann Ki Baat Live Updates: 91ನೇ ಮನ್ ಕಿ ಬಾತ್​ನಲ್ಲಿ ಸ್ವಾತಂತ್ರ್ಯ ಸಂಭ್ರಮದ ಅನುಭವ ಆಹ್ವಾನಿಸಿದ ಮೋದಿ

Mann Ki baat in Kannada Live News Updates: ಮನ್ ಕಿ ಬಾತ್ ಭಾಷಣದಲ್ಲಿ ಪ್ರಸ್ತಾಪಿಸಲೆಂದು ದೇಶದ ವಿವಿಧೆಡೆಗಳಿಂದ ಜನರು ಪ್ರಧಾನಿಗೆ ಮಾಹಿತಿ ಕಳುಹಿಸಿದ್ದಾರೆ.

Mann Ki Baat Live Updates: 91ನೇ ಮನ್ ಕಿ ಬಾತ್​ನಲ್ಲಿ ಸ್ವಾತಂತ್ರ್ಯ ಸಂಭ್ರಮದ ಅನುಭವ ಆಹ್ವಾನಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Image Credit source: All India Radio

| Edited By: Ghanashyam D M | ಡಿ.ಎಂ.ಘನಶ್ಯಾಮ

Jul 31, 2022 | 11:47 AM

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಜುಲೈ 31) ಬೆಳಿಗ್ಗೆ 11 ಗಂಟೆಗೆ ಪ್ರತಿ ತಿಂಗಳ ಜನಪ್ರಿಯ ಕಾರ್ಯಕ್ರಮ ‘ಮನ್ ಕಿ ಬಾತ್’ (Mann Ki Baat) ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಸಂಭ್ರಮವನ್ನು ಪ್ರಸ್ತಾಪಿಸಿದ ಅವರು, ಹಲವು ಸ್ವಾತಂತ್ರ್ಯ ಯೋಧರನ್ನು ನೆನಪಿಸಿಕೊಂಡರು. ಕೆಲ ರೈಲು ನಿಲ್ದಾಣಗಳಲ್ಲಿ ಅಳವಡಿಸಿರುವ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಅರಿಯಬೇಕೆಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕೋರಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ್ದ ‘ಅಮೃತ ಭಾರತಿಗೆ ಕನ್ನಡದ ಆರತಿ’ ಸರಣಿಯ ಪುಸ್ತಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮನ್​ ಕಿ ಬಾತ್​ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ ಪ್ರಮುಖ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ.

LIVE NEWS & UPDATES

The liveblog has ended.
 • 31 Jul 2022 11:33 AM (IST)

  Mann Ki Baat Live Updates: ಮುಂದಿನ ಮನ್​ ಕಿ ಬಾತ್​ನ ವಿಷಯ ಇಂದೇ ಹೇಳಿದ ಮೋದಿ

  ಇಂದು ನಾವು ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಮಾತಿನೊಂದಿಗೆ ಇಂದಿನ ಮನ್​ ಕಿ ಬಾತ್ ಆರಂಭಿಸಿದ್ದೆವು. ಮನ್​ ಕಿ ಬಾತ್​ನ ಮುಂದಿನ ಕಾರ್ಯಕ್ರಮದಲ್ಲಿ ಮುಂದಿನ 25 ವರ್ಷ ಹೇಗಿರಬೇಕು ಎನ್ನುವ ಬಗ್ಗೆ ಚಿಂತನೆ ನಡೆಸೋಣ. ನೀವು ಅಷ್ಟೇ, ನಿಮ್ಮ ಮನೆಗಳಲ್ಲಿ ಹೇಗೆ ಸ್ವಾತಂತ್ರ್ಯ ದಿನ ಆಚರಿಸಿದಿರಿ ಎನ್ನುವ ಬಗ್ಗೆ ನನ್ನೊಂದಿಗೆ ಮಾಹಿತಿ ಹಂಚಿಕೊಳ್ಳಿ ಎಂದು ನರೇಂದ್ರ ಮೋದಿ ಮಾತು ಮುಗಿಸಿದರು.

 • 31 Jul 2022 11:30 AM (IST)

  Mann Ki Baat Live Updates: ಕ್ರೀಡಾಕ್ಷೇತ್ರದಲ್ಲಿ ಮಹತ್ವದ ಸಾಧನೆ

  ಭಾರತೀಯ ಕ್ರೀಡಾಪಟುಗಳ ಪಾಲಿಗೆ ಇದು ಸಂಭ್ರಮದ ಕಾಲ. ನಮ್ಮ ಸ್ಪರ್ಧಿಗಳು ಹಲವು ಪ್ರಮುಖ ಕ್ರೀಡಾಕೂಟಗಳಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಹತ್ತಾರು ಪದಕಗಳನ್ನು ಗೆದ್ದಿದ್ದಾರೆ. ಅವರೆಲ್ಲರಿಗೂ ದೇಶದ ಪರವಾಗಿ ಅಭಿನಂದನೆಗಳು. ಫಿಫಾ ಮಹಿಳಾ ಫುಟ್​ಬಾಲ್ ವರ್ಲ್ಡ್​ಕಪ್​ನಲ್ಲಿಯೂ ಭಾರತ ಸೆಣೆಸಲಿದೆ.

 • 31 Jul 2022 11:28 AM (IST)

  Mann Ki Baat Live Updates: ಭಾರತೀಯ ಉತ್ಪಾದಕರ ಗೊಂಬೆಗಳನ್ನೇ ಖರೀದಿಸಿ

  ಬೆಂಗಳೂರಿನಲ್ಲಿ ಶುಮ್ಮಿ ಟಾಯ್ಸ್​ ಹೆಸರಿನ ಸ್ಟಾರ್ಟ್​ ಅಪ್​ ಪರಿಸರ ಸ್ನೇಹಿ ಗೊಂಬೆಗಳನ್ನು ತಯಾರಿಸುತ್ತಿದೆ. ಅದೇ ರೀತಿ ಪುಣೆಯ ಕಂಪನಿಯೊಂದು ಮಕ್ಕಳಿಗೆ ಇಷ್ಟವಾಗುವ ಫನ್ ಚಟುವಟಿಕೆಗಳ ಮೂಲಕ ಗಣಿತ-ವಿಜ್ಞಾನ ಕಲಿಸುವ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇವರೆಲ್ಲರಿಗೂ ನನ್ನ ಅಭಿನಂದನೆಗಳು. ನೀವು ದಯವಿಟ್ಟು ಭಾರತೀಯ ಉತ್ಪಾದಕರಿಂದಲೇ ಗೊಂಬೆ, ಫಜಲ್ಸ್​, ಗೇಮ್ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಎಲ್ಲ ಪೋಷಕರಲ್ಲಿ ಮನವಿ ಮಾಡುತ್ತೇನೆ.

 • 31 Jul 2022 11:23 AM (IST)

  Mann Ki Baat Live Updates: ಗೊಂಬೆ ಉದ್ಯಮದ ಶ್ರೇಷ್ಠ ಸಾಧನೆ

  ಭಾರತದ ಗೊಂಬೆ ಉದ್ಯಮಕ್ಕೆ ಹಲವು ಸಾಧ್ಯತೆಗಳಿವೆ. ನಮ್ಮ ಉದ್ಯಮಿಗಳು ವೋಕಲ್ ಫಾರ್ ಲೋಕಲ್ ಆಶಯವನ್ನು ಈ ಉದ್ಯಮದಲ್ಲಿ ಯಶಸ್ವಿಯಾಗಿ ಸಾಧಿಸಿ ತೋರಿಸಿದ್ದಾರೆ. ವಿದೇಶಗಳಿಂದ ಈ ಮೊದಲು 3000 ಕೋಟಿ ಮೌಲ್ಯದ ಬೊಂಬೆಗಳನ್ನು ದೇಶ ಆಮದು ಮಾಡಿಕೊಳ್ಳುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ನಾವು 2,600 ಕೋಟಿ ಮೌಲ್ಯಕ್ಕೂ ಹೆಚ್ಚು ಗೊಂಬೆಗಳನ್ನು ರಫ್ತು ಮಾಡಿದ್ದೇವೆ. ಇದೆಲ್ಲವೂ ಕೊರೊನಾ ಕಾಲದಲ್ಲಿ ಆಗಿದೆ ಎನ್ನುವುದು ಗಮನಾರ್ಹ. ಭಾರತೀಯ ಉತ್ಪಾದಕರು ಈಗ ಭಾರತದ ಇತಿಹಾಸ, ಪುರಾಣ ಕಥೆಗಳನ್ನು ಆಧರಿಸಿದ ಗೊಂಬೆಗಳನ್ನು ಮಾಡುತ್ತಿದ್ದಾರೆ. ಇದು ಶ್ಲಾಘನೀಯ ಕ್ರಮ.

 • 31 Jul 2022 11:19 AM (IST)

  Mann Ki Baat Live Updates: ಎಂಜಿನಿಯರ್ ನಿಮಿತ್ ಅವರ ಸಿಹಿ ಸಾಧನೆ

  ನಿಮಿತ್ ಅವರು ಜೇನುತುಪ್ಪ ಮತ್ತು ಜೇನು ಮೇಣದಿಂದ ಉತ್ತಮ ಆದಾಯ ಪಡೆಯುತ್ತಿದ್ದಾರೆ. ದೇಶವು ಇದೀಗ ರಾಷ್ಟ್ರೀಯ ಜೇನು ಸಾಕಣೆ ಮತ್ತು ಜೇನುತುಪ್ಪ ಅಭಿಯಾನ ನಡೆಸಿತ್ತು. ಅದರ ಫಲಿತಾಂಶ ಇದೀಗ ತಿಳಿಯುತ್ತಿದೆ. ಈ ಕ್ಷೇತ್ರದಲ್ಲಿ ಮತ್ತಷ್ಟು ಬೆಳವಣಿಗೆಗೆ ಅವಕಾಶವಿದೆ. ನಮ್ಮ ಯುವಕರು ಈ ಕ್ಷೇತ್ರದಲ್ಲಿ ಇರುವ ಹಲವು ಸಾಧ್ಯತೆಗಳನ್ನು ಸಾಕಾರಗೊಳಿಸಬೇಕು.

 • 31 Jul 2022 11:15 AM (IST)

  Mann Ki Baat Live Updates: ಮಧು ಸಂಗ್ರಹಿಸುವ ಮಧುಕೇಶ್ವರ

  ಮಧುಕೇಶ್ವರ ಹೆಗಡೆ ಅವರು ಭಾರತ ಸರ್ಕಾರದ ಅನುದಾನದಿಂದ ಜೇನು ಸಂಗ್ರಹ ಆರಂಭಿಸಿದರು. ಅವರು ತಮ್ಮ ಕೆಲಸದಲ್ಲಿ ಹಲವು ಆವಿಷ್ಕಾರಗಳನ್ನು ಮುಂದುವರಿಸಿದರು. ಅವರ ಯಶಸ್ಸು ಎಲ್ಲರಿಗೂ ಪ್ರೇರಣೆ. ಪ್ರಿಯ ಮಧುಕೇಶ್ವರ ಅವರು ನಿಮ್ಮ ಸಾಧನೆಯು ನಿಮ್ಮ ಹೆಸರನ್ನು ಸಾರ್ಥಕ ಗೊಳಿಸಿದೆ.

 • 31 Jul 2022 11:12 AM (IST)

  Mann Ki Baat Live Updates: ಔಷಧಿ ಸಂಶೋಧನೆಯಲ್ಲಿ ಹಲವು ಸಾಧನೆ

  ಕೊರೊನಾ ಸಂಕಷ್ಟವು ಭಾರತೀಯ ಪದ್ಧತಿಯ ಔಷಧಿಗಳ ಸಂಶೋಧನೆಯಲ್ಲಿಯೂ ಹಲವು ಮಹತ್ವದ ಮೈಲಿಗಲ್ಲುಗಳಿಗೆ ಕಾರಣವಾಯಿತು. ಆಯುಷ್​ ಇಲಾಖೆಯು ನಿರ್ವಹಿಸುವ ಚಿಕಿತ್ಸಾ ಪದ್ಧತಿಯ ಬಗ್ಗೆ ಇಡೀ ಜಗತ್ತು ಗಮನ ಹರಿಸಿತು. ಆಯುರ್ವೇದದ ಬಗ್ಗೆ ಎಲ್ಲರೂ ಗಮನಹರಿಸಲು ಆರಂಭಿಸಿದರು.

 • 31 Jul 2022 11:09 AM (IST)

  Mann Ki Baat Live Updates: ಸೋಷಿಯಲ್ ಮೀಡಿಯಾ ಪ್ರೊಫೈಲ್ ಚಿತ್ರದಲ್ಲಿ ರಾಷ್ಟ್ರಧ್ವಜ ಬರಲಿ

  2ನೇ ಆಗಸ್ಟ್​ನಿಂದ 15ನೇ ಆಗಸ್ಟ್​ವರೆಗೆ ನಾವೆಲ್ಲರೂ ನಮ್ಮ ಸೋಷಿಯಲ್ ಮೀಡಿಯಾ ಪ್ರೊಫೈಲ್ ಚಿತ್ರಗಳನ್ನು ಬದಲಿಸಿಕೊಳ್ಳೋಣವೇ? ತ್ರಿವರ್ಣದ ನಮ್ಮ ರಾಷ್ಟ್ರಧ್ವಜದೊಂದಿಗೆ ನಮ್ಮ ಪ್ರೊಫೈಲ್ ಚಿತ್ರ ಬರುವಂತೆ ಮಾಡೋಣ ಎಂದು ನರೇಂದ್ರ ಮೋದಿ ಕರೆ ನೀಡಿದರು.

 • 31 Jul 2022 11:08 AM (IST)

  Mann Ki Baat Live Updates: ರೈಲು ನಿಲ್ದಾಣಗಳಲ್ಲಿ ಸ್ವಾತಂತ್ರ್ಯ ಹೋರಾಟದ ಕಥೆ

  ಭಾರತದ ವಿವಿಧೆಡೆ ಹಲವು ರೈಲು ನಿಲ್ದಾಣಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ನಾಮಕಾರಣ ಮಾಡಲಾಗಿದೆ. ಇವು ದೇಶದ ಸ್ವಾತಂತ್ರ್ಯ ಹೋರಾಟದ ಕಥೆ ಹೇಳುತ್ತವೆ. ನಾನು ವಿದ್ಯಾರ್ಥಿಗಳನ್ನು ಇಂಥ ರೈಲು ನಿಲ್ದಾಣಗಳಿಗೆ ಕರೆದೊಯ್ಯಬೇಕೆಂದು ಶಿಕ್ಷಕರನ್ನು ಆಗ್ರಹಿಸುತ್ತೇನೆ. -ನರೇಂದ್ರ ಮೋದಿ

 • 31 Jul 2022 11:05 AM (IST)

  ಸಾಹಿತ್ಯ ಅಕಾಡೆಮಿ ಕಾರ್ಯ ಸ್ಮರಿಸಿದ ಪ್ರಧಾನಿ ಮೋದಿ

  ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ‘ಅಮೃತ ಭಾರತಿಗೆ ಕನ್ನಡದಾರತಿ’ ಹೆಸರಿನಲ್ಲಿ 75 ಪುಸ್ತಕಗಳನ್ನು ಅಲ್ಲಿನ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಇದು ಅತ್ಯಂತ ಹರ್ಷದಾಯಕವಾದ ಬೆಳವಣಿಗೆ ಎಂದು ನರೇಂದ್ರ ಮೋದಿ ಶ್ಲಾಘಿಸಿದರು.

 • 31 Jul 2022 11:04 AM (IST)

  Mann Ki Baat Live Updates: ಉಧಮ್ ಸಿಂಗ್​ಗೆ ನಮನ

  ಇಂದು ಅಂದರೆ ಜುಲೈ 31 ಉಧಮ್ ಸಿಂಗ್ ಅವರು ಹುತಾತ್ಮರಾದ ದಿನ. ದೇಶಕ್ಕಾಗಿ ಬಲಿದಾನ ಮಾಡಿದ ಎಲ್ಲ ಕ್ರಾಂತಿಕಾರಿಗಳನ್ನು ಈ ದಿನ ನಾನು ನೆನೆಯುತ್ತೇನೆ. ಆಜಾದಿ ಕಾ ಅಮೃತ್ ಮಹೋತ್ಸವ್ ಎನ್ನುವುದು ಜನಾಂದೋಲನವಾಗಿ ಪರಿವರ್ತಿತವಾಗಿದೆ. ಇದು ಖುಷಿಯ ವಿಚಾರ.

 • 31 Jul 2022 11:02 AM (IST)

  ಇದು ಅತ್ಯಂತ ವಿಶೇಷ ಕಾರ್ಯಕ್ರಮ

  ಈ ಮೊದಲು ನಾವು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದೆವು. ಆದರೆ ಈ ಬಾರಿಯ ಮನ್​ ಕಿ ಬಾತ್ ಅತ್ಯಂತ ವಿಶೇಷವಾದುದು. ಏಕೆಂದರೆ ನಾನು ಸ್ವಾತಂತ್ರ್ಯ ದಿನಾಚರಣೆಗೆ ಮೊದಲಿನ ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದೇನೆ. ಸ್ವಾತಂತ್ರ್ಯ ಪಡೆದ ದಿನ, ಪಾರತಂತ್ರ್ಯದ ಬೇಡಿ ತುಂಡರಿಸಿದ ದಿನ ದೇಶದ ಎಲ್ಲ ನಿವಾಸಿಗಳಿಗೆ ಸಂಭ್ರಮ ತರುತ್ತದೆ. - ನರೇಂದ್ರ ಮೋದಿ.

 • 31 Jul 2022 11:00 AM (IST)

  Mann Ki Baat Live Updates: ಮನದ ಮಾತಿಗೆ ಕ್ಷಣಗಣನೆ

  ಪ್ರಧಾನಿ ನರೇಂದ್ರ ಮೋದಿ ಅವರು ಮನದ ಮಾತು ಕಾರ್ಯಕ್ರಮ ಶೀಘ್ರದಲ್ಲಿಯೇ ಆರಂಭವಾಗಲಿದೆ. ಭಾಷಣ ಕೇಳಲು ಲಿಂಕ್ ಇಲ್ಲಿದೆ.

 • 31 Jul 2022 09:29 AM (IST)

  Mann Ki Baat Live Updates: ತಿಂಗಳಿಗೊಮ್ಮೆ ಮನದಮಾತು

  ಪ್ರಧಾನಿ ನರೇಂದ್ರ ಮೋದಿ ಅವರ ಮನ್​ ಕಿ ಬಾತ್ ಕಾರ್ಯಕ್ರಮದ ಮೊದಲ ಭಾಷಣವು ಅಕ್ಟೋಬರ್ 3, 2014ರಲ್ಲಿ ಪ್ರಸಾರವಾಗಿತ್ತು. ಪ್ರತಿ ತಿಂಗಳ ಕೊನೆಯ ಭಾನುವಾರ ಮೋದಿ ರೇಡಿಯೊ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ.

 • 31 Jul 2022 09:28 AM (IST)

  Mann Ki Baat Live Updates: ಮನ್​ ಕಿ ಬಾತ್ ಆಲಿಸಲು ಹೀಗೆ ಮಾಡಿ

  ಕಾರ್ಯಕ್ರಮವು ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ಕೇಂದ್ರಗಳಿಂದ ಏಕಕಾಲಕ್ಕೆ ಮರು ಪ್ರಸಾರಗೊಳ್ಳಲಿದೆ. ಆಕಾಶವಾಣಿಯ ನ್ಯೂಸ್ ವೆಬ್​ಸೈಟ್​ ಮತ್ತು ನ್ಯೂಸ್​ ಆನ್ ಏರ್ ಮೊಬೈಲ್ ಆ್ಯಪ್​ಗಳಲ್ಲಿಯೂ ಈ ಭಾಷಣವನ್ನು ಲೈವ್ ಆಗಿ ಕೇಳಬಹುದು. ಆಕಾಶವಾಣಿ, ದೂರದರ್ಶನ ಮತ್ತು ಪ್ರಧಾನಿ ಕಚೇರಿಯ ಯುಟ್ಯೂಬ್​ ಚಾನೆಲ್​ಗಳ ಮೂಲಕವೂ ಭಾಷಣವನ್ನು ಆಲಿಸಬಹುದಾಗಿದೆ.

 • 31 Jul 2022 09:26 AM (IST)

  Mann Ki Baat Live Updates: ಪ್ರಾದೇಶಿಕ ಭಾಷೆಗಳಲ್ಲಿಯೂ ಭಾಷಣ ಮರು ಪ್ರಸಾರವಾಗಲಿದೆ

  ಹಿಂದಿ ಭಾಷಣದ ಲೈವ್ ಪ್ರಸಾರದ ನಂತರ ಪ್ರಾದೇಶಿಕ ಭಾಷೆಗಳಲ್ಲಿಯೂ ಭಾಷಣ ಮರು ಪ್ರಸಾರವಾಗಲಿದೆ. ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲೆಂದು ದೇಶದ ವಿವಿಧೆಡೆಯಿಂದ ಜನರು ಪ್ರಧಾನಿಗೆ ಮಾಹಿತಿ ಕಳಿಸಿಕೊಡುತ್ತಾರೆ.

Published On - Jul 31,2022 9:19 AM

Follow us on

Related Stories

Most Read Stories

Click on your DTH Provider to Add TV9 Kannada