
ಜೋಧಪುರ, ಸೆಪ್ಟೆಂಬರ್ 23: ಜೋಧಪುರದಲ್ಲಿ (Jodhpur) ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ ಮುಖ್ಯಸ್ಥ, ಆಧ್ಯಾತ್ಮಿಕ ಗುರು ಮತ್ತು ವಿಶ್ವವಿಖ್ಯಾತ ಸಂತ ಬ್ರಹ್ಮಸ್ವರೂಪ್ ಮಹಾಂತ್ ಸ್ವಾಮಿ ಮಹಾರಾಜ್ ಶುಕ್ರವಾರ ಸಂಜೆ ರಾಜಸ್ಥಾನದ ಜೋಧಪುರಕ್ಕೆ ಭೇಟಿ ನೀಡಿದರು. ಅವರನ್ನು ಸ್ವಾಗತಿಸಲು ಸಾವಿರಾರು ಭಕ್ತರು ನೆರೆದಿದ್ದರು. ಅಮೆರಿಕದ ಅಕ್ಷರಧಾಮ ದೇವಾಲಯ ಮತ್ತು ಅಬುಧಾಬಿಯ ಬಿಎಪಿಎಸ್ ಹಿಂದೂ ದೇವಾಲಯದ ಸಂಸ್ಥಾಪಕ ಮಹಾಂತ್ ಸ್ವಾಮೀಜಿ ಮಹಾರಾಜ್ ಅವರು ಸೆಪ್ಟೆಂಬರ್ 25ರಂದು ಬಿಎಪಿಎಸ್ ಜೋಧಪುರ ಸ್ವಾಮಿನಾರಾಯಣ ದೇವಾಲಯದ ಪ್ರಾಣ ಪ್ರತಿಷ್ಠಾ ಮಹೋತ್ಸವವನ್ನು ನಡೆಸಲಿದ್ದಾರೆ.
ಸೆಪ್ಟೆಂಬರ್ 19ರಿಂದ 28ರವರೆಗೆ ನಡೆಯುವ ಈ ದೇವಾಲಯ ಉತ್ಸವದಲ್ಲಿ ರಾಜಸ್ಥಾನ ಮತ್ತು ಇತರ ರಾಜ್ಯಗಳಿಂದಲೂ, ಅಮೆರಿಕ, ಯುರೋಪ್, ಆಫ್ರಿಕಾ ಮತ್ತು ಆಸ್ಟ್ರೇಲಿಯಾದಂತಹ ಖಂಡಗಳಿಂದಲೂ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಲಿದ್ದಾರೆ. ಇಂದು (ಸೆಪ್ಟೆಂಬರ್ 23) ಮತ್ತು ಸೆಪ್ಟೆಂಬರ್ 24ರಂದು ಸ್ವಾಮೀಜಿ ಅಧ್ಯಕ್ಷತೆಯಲ್ಲಿ ವಿಶ್ವಶಾಂತಿ ಮಹಾಯಜ್ಞ ನಡೆಯಲಿದೆ. ಸೆಪ್ಟೆಂಬರ್ 24ರಂದು ಮಧ್ಯಾಹ್ನ 2 ಗಂಟೆಗೆ ಭವ್ಯ ನಗರ ಮೆರವಣಿಗೆ ನಡೆಯಲಿದೆ.
ಇದನ್ನೂ ಓದಿ: ಹುಬ್ಬಳ್ಳಿ ಶಬರಿಮಲೆ ರೈಲು: ಅಯ್ಯಪ್ಪ ಭಕ್ತರಿಗಾಗಿ ನೈಋತ್ಯ ರೈಲ್ವೇಸ್ ವಿಶೇಷ ಕೊಡುಗೆ
ಸೆಪ್ಟೆಂಬರ್ 25ರಂದು ಬೆಳಿಗ್ಗೆ 6.30 ರಿಂದ 9.30ರವರೆಗೆ ವಿಗ್ರಹ ಪ್ರತಿಷ್ಠಾಪನಾ ಸಮಾರಂಭ, ನಂತರ ಸಂಜೆ 5.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದಲ್ಲದೆ, ಸೆಪ್ಟೆಂಬರ್ 26ರಂದು ಮಧ್ಯಾಹ್ನ 1 ಗಂಟೆಗೆ ಮಹಿಳಾ ದಿನಾಚರಣೆ ಕಾರ್ಯಕ್ರಮ ಮತ್ತು ಸಂಜೆ 5.30ರಿಂದ ರಾತ್ರಿ 8ರವರೆಗೆ ಭಜನಾ ಸಂಧ್ಯಾ ನಡೆಯಲಿದೆ. ಸೆಪ್ಟೆಂಬರ್ 27ರಂದು ಸಂಜೆ ಸನ್ಮಾನ ಸಭೆ ಮತ್ತು ಸೆಪ್ಟೆಂಬರ್ 28ರಂದು ಸಂಸ್ಕೃತಿ ದಿನ ನಡೆಯಲಿದೆ. ಜೋಧ್‌ಪುರ ಚಿತ್ತಾರ್ ಕಲ್ಲುಗಳನ್ನು ಬಳಸಿ ನಿರ್ಮಿಸಲಾದ ಸಂಸ್ಥೆಯ ಮೊದಲ ದೇವಾಲಯ ಇದಾಗಿದೆ.
ಇದನ್ನೂ ಓದಿ: 524 ವರ್ಷ ಹಿಂದಿನ ತ್ರಿಪುರ ಸುಂದರಿ ದೇವಸ್ಥಾನದ ವಿಶೇಷತೆ, ಇತಿಹಾಸವೇನು?
ಈ ದೇವಾಲಯವನ್ನು 2018ರಲ್ಲಿ ಉದ್ಘಾಟಿಸಲಾಯಿತು. 42-ಬಿಘಾ ಆವರಣದಲ್ಲಿ ನಿರ್ಮಿಸಲಾದ ಈ ದೇವಾಲಯವು 281 ಭವ್ಯವಾದ ಕಂಬಗಳು, ಸಂತರು, ಭಕ್ತರು, ಧರ್ಮಗುರುಗಳು ಮತ್ತು ಅವತಾರಗಳ 151 ಕೆತ್ತಿದ ಪ್ರತಿಮೆಗಳನ್ನು ಹೊಂದಿದೆ. ಇದು ಸ್ವಾಮಿನಾರಾಯಣನ ಯೋಗ ರೂಪವಾದ ನೀಲಕಂಠವರ್ಣಿಗೆ ಸಮರ್ಪಿತವಾದ 11,551 ಚದರ ಅಡಿ ವಿಸ್ತೀರ್ಣದ ನೀಲಕಂಠವರ್ಣಿ ಅಭಿಷೇಕ ಮಂಟಪವನ್ನು ಸಹ ಹೊಂದಿದೆ. ಈ ದೇವಾಲಯವನ್ನು ಜೋಧಪುರ, ಜೈಪುರ, ಪಿಂಡ್ವಾರಾ, ಸಗ್ವಾರಾ ಮತ್ತು ಭರತ್‌ಪುರದ 500ಕ್ಕೂ ಹೆಚ್ಚು ಕುಶಲಕರ್ಮಿಗಳು ಜಂಟಿಯಾಗಿ ನಿರ್ಮಿಸಿದ್ದಾರೆ.
ಈ ವಿಗ್ರಹ ಪ್ರತಿಷ್ಠಾಪನಾ ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಅರ್ಜುನ್ ರಾಮ್ ಮೇಘವಾಲ್, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Tue, 23 September 25