ದೆಹಲಿ: ಭಾರತದಲ್ಲಿ ಅಕ್ಟೋಬರ್ ತಿಂಗಳಿಂದ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ಬಲಬರಲಿದೆ. ಅಮೆರಿಕ ಮೂಲದ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ(Johnson & Johnson)ಯ ಸಿಂಗಲ್ ಡೋಸ್ (ಏಕ ಡೋಸ್) ಲಸಿಕೆಯ ಬಳಕೆ ದೇಶದಲ್ಲಿ ಅಕ್ಟೋಬರ್ ತಿಂಗಳಿಂದ ಶುರುವಾಗಲಿದೆ ಎಂದು ರಾಯಿಟರ್ಸ್ ಸುದ್ದಿ ಮಾಧ್ಯಮ ವರದಿ ಮಾಡಿದೆ. ಭಾರತದಲ್ಲೀಗ ಬಳಕೆಯಾಗುತ್ತಿರುವ ಕೊವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ವಿ ಲಸಿಕೆಗಳೆಲ್ಲ ಎರಡು ಡೋಸ್ಗಳ ಲಸಿಕೆಗಳಾಗಿದ್ದು, ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ (Johnson & Johnson Covid 19 Vaccine)ಯ ಲಸಿಕೆ ಬಳಕೆ ಶುರುವಾದರೆ ಒಂದೇ ಡೋಸ್ನಲ್ಲಿಯೇ ಮುಗಿದುಹೋಗುತ್ತದೆ.
ಕೊವಿಡ್ 19 ಲಸಿಕೆಯನ್ನು ಸರಿಯಾಗಿ ಪ್ಯಾಕ್ ಮಾಡಿ, ಭಾರತಕ್ಕೆ ರವಾನಿಸಲಾಗುವುದು. ಮೊದಲ ಬಾರಿಗೆ ಸುಮಾರು 43.5 ಮಿಲಿಯನ್ ಡೋಸ್ಗಳನ್ನು ಕಳಿಸಲಾಗುವುದು. ಅಕ್ಟೋಬರ್ ಹೊತ್ತಿಗೆ 30 ಕೋಟಿ ಡೋಸ್ ಕೊರೊನಾ ಲಸಿಕೆ ಉತ್ಪಾದನೆ ಗುರಿ ಹೊಂದಿರುವ ಭಾರತಕ್ಕೆ ಇದರಿಂದ ಖಂಡಿತ ಸಹಾಯವಾಗುತ್ತದೆ ಎಂದು ಜಾನ್ಸನ್ ಆ್ಯಂಡ್ ಜಾನ್ಸನ್ ಹೇಳಿದೆ.
ಭಾರತದ ಜಗತ್ತಿನ ಅತಿದೊಡ್ಡ ಕೊರೊನಾ ಲಸಿಕೆ ಉತ್ಪಾದಕ ದೇಶವಾಗಿದೆ. ಭಾರತದ ಜನಸಂಖ್ಯೆಗೆ ಅನುಗುಣವಾಗಿ ಕೊರೊನಾ ಲಸಿಕೆ ಕೊರತೆ ಉಂಟಾಗಿದ್ದರಿಂದ ಮಾರ್ಚ್ ತಿಂಗಳಿಂದ ಲಸಿಕೆ ರಫ್ತನ್ನು ನಿಲ್ಲಿಸಿತ್ತು. ಆದರೀಗ ಮತ್ತೆ ಅಕ್ಟೋಬರ್ನಿಂದ ಅದನ್ನು ಮುಂದುವರಿಸಲು ನಿರ್ಧರಿಸಿದೆ. ಈ ಬಗ್ಗೆ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಾಹಿತಿ ನೀಡಿದ್ದಾರೆ. ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಕೊವಿಡ್ 19 ಲಸಿಕೆ ಒಂದೇ ಡೋಸ್ನದ್ದಾಗಿದೆ. ಇದನ್ನು ಭಾರತದಲ್ಲಿ ತುರ್ತು ಬಳಕೆ ಮಾಡಲು ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾ (ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ) ಕಳೆದ ತಿಂಗಳು (ಆಗಸ್ಟ್) ಅನುಮೋದನೆ ನೀಡಿತ್ತು. ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯು ಭಾರತದಲ್ಲಿ ಬಯೋಲಾಜಿಕಲ್ ಇ ಸಂಸ್ಥೆ ಮೂಲಕ ಲಸಿಕೆ ಉತ್ಪಾದನೆ ಮಾಡಲಿದೆ.
ಆಗಸ್ಟ್ 5ರಂದು ಜಾನ್ಸನ್ ಆ್ಯಂಡ್ ಜಾನ್ಸನ್ ಪ್ರೈವೇಟ್ ಲಿಮಿಟೆಡ್ ತನ್ನ ಸಿಂಗಲ್ ಡೋಸ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ (EUA) ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಈ ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ ಕೋವಿಡ್ ಲಸಿಕೆಯು ಕೊರೊನಾ ಸೋಂಕಿನ ವಿರುದ್ಧ ಶೇ.85 ರಷ್ಟು ಪರಿಣಾಮಕಾರಿಯಾಗಿದೆ ಎಂಬುದು ಪ್ರಯೋಗಗಳಿಂದ ಸಾಬೀತಾಗಿದೆ.
ಇದನ್ನೂ ಓದಿ: Bomb threats: ಇಂಗ್ಲೆಂಡ್ನಲ್ಲಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಬಾಂಬ್ ಬೆದರಿಕೆ
(Johnson and Johnson Covid 19 Vaccine doses likely to arrive India in October)