ಕಾಳಿ ಡಾಕ್ಯುಮೆಂಟರಿ ಪೋಸ್ಟರ್ (Kaali Poster Row) ವಿವಾದದ ನಡುವೆಯೇ ಅಯೋಧ್ಯೆ ಪುರೋಹಿತರೊಬ್ಬರು ನಿರ್ದೇಶಕಿ ಲೀನಾ ಮಣಿಮೇಕಲೈ(Leena Manimekalai) ಅವರಿಗೆ ಶಿರಚ್ಛೇದ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಲೀನಾ ಮತ್ತು ಅವರ ಡಾಕ್ಯುಮೆಂಟರಿ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಪರಿಣಾಮ ಎದುರಿಸಬೇಕಾದೀತು ಎಂದು ಅವರು ಬೆದರಿಕೆ ನೀಡಿದ್ದಾರೆ. ಜೂನ್ ತಿಂಗಳಲ್ಲಿ ಲೀನಾ ತಮ್ಮ ಡಾಕ್ಯುಮೆಂಟರಿ ‘ಕಾಳಿ’ಯ (Kaali) ಪೋಸ್ಟರ್ ಶೇರ್ ಮಾಡಿದ್ದರು. ಹಿಂದುತ್ವವಾದಿಗಳು ಆ ಪೋಸ್ಟರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಗರೇಟ್ ಸೇದುವ ಕಾಳಿ ಕೈಯಲ್ಲಿ LGBTQ ಸಂಕೇತದ ಪ್ರೈಡ್ ಫ್ಲಾಗ್ ಹಿಡಿದಿರುವ ಪೋಸ್ಟರ್ ಇದಾಗಿದೆ. ಈ ಪೋಸ್ಟರ್ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪ ಮಾಡಲಾಗಿದ್ದು ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ಈಗಾಗಲೇ ಲೀನಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಹೊತ್ತಲ್ಲೇ ಅಯೋಧ್ಯೆಯಲ್ಲಿರುವ ಹನುಮಾನ್ ಗಾರ್ಹಿ ಮಂದಿರದ ಪುರೋಹಿತ ರಾಜು ದಾಸ್ ಲೀನಾ ಅವರಿಗೆ ಬೆದರಿಕೆಯೊಡ್ಡಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಈ ಡಾಕ್ಯುಮೆಂಟರಿಯನ್ನು ನಿಷೇಧಿಸಬೇಕು ಮತ್ತು ಲೀನಾ ವಿಕರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜು ಒತ್ತಾಯಿಸಿದ್ದಾರೆ.
ನೂಪುರ್ ಶರ್ಮಾ ಅವರ ಹೇಳಿಕೆ ಖಂಡಿಸಿ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಇಡೀ ಪ್ರಪಂಚದಲ್ಲಿ ಭೂಮಿ ಕಂಪಿಸಿತ್ತು. ನೀವೀಗ ಹಿಂದೂ ಆಚಾರ, ಧರ್ಮ, ಸಂಸ್ಕೃತಿಯನ್ನು ಲೇವಡಿ ಮಾಡಲು ಹೊರಟಿದ್ದೀರಾ ? ನೀವೇನು ಬಯಸುತ್ತೀರಿ? ನಾವು ನಿಮ್ಮ ರುಂಡ ಮುಂಡವನ್ನು ಬೇರೆ ಬೇರೆ ಮಾಡಬಹುದು. ಅದನ್ನು ನೀವು ಬಯಸುತ್ತೀರಾ? ಇದಾಗದಂತೆ ಮಾಡಲು ಡಾಕ್ಯುಮೆಂಟರಿಯನ್ನು ನಿಷೇಧಿಸಬೇಕು. ಡಾಕ್ಯುಮೆಂಟರಿ ಬಿಡುಗಡೆಯಾದರೆ ಪರಿಣಾಮ ಗಂಭೀರವಾಗಿರುತ್ತದೆ ಎಂದು ರಾಜು ಹೇಳಿದ್ದಾರೆ. ಲೀನಾ ಅವರ ಕಾಳಿ ಡಾಕ್ಯುಮೆಂಟರಿ ಈಗಾಗಲ ಕೆನಡಾ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡಿದೆ.