ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ (Kallakurichi) ಜಿಲ್ಲೆಗೆ ಸೇರಿದ 48 ಜನರು ‘ಮೆಥೆನಾಲ್ ಮಿಶ್ರಿತ ಮದ್ಯ’ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಗುರುವಾರ ಹೇಳಿದ್ದಾರೆ. ಹಾಗೇ, ಕಲ್ಲಕುರಿಚಿ ಕಳ್ಳಭಟ್ಟಿ ದುರಂತಕ್ಕೆ (Hooch Tragedy) ಸಂಬಂಧಿಸಿದಂತೆ ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಗುರುವಾರ ಕಲ್ಲಕುರಿಚಿ ಕಳ್ಳಭಟ್ಟಿ ದುರಂತದಲ್ಲಿ ಮೃತರ ಕುಟುಂಬಗಳಿಗೆ ಮತ್ತು ಚಿಕಿತ್ಸೆಯಲ್ಲಿರುವವರಿಗೆ ಪರಿಹಾರ ಘೋಷಿಸಿದ್ದಾರೆ. ತಮಿಳುನಾಡಿನಲ್ಲಿ ‘ಮೆಥೆನಾಲ್ ಮಿಶ್ರಿತ ಮದ್ಯ’ ಸೇವಿಸಿ 48 ಮಂದಿ ಸಾವನ್ನಪ್ಪಿದ್ದಾರೆ. ಅಕ್ರಮ ಮದ್ಯ ಸೇವಿಸಿ ಮೃತಪಟ್ಟವರ ಕುಟುಂಬಗಳಿಗೆ ಸಿಎಂ ಸ್ಟಾಲಿನ್ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಹೆಚ್ಚುವರಿಯಾಗಿ, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ 50,000 ರೂ. ನೀಡಲಾಗುತ್ತದೆ.
VIDEO | Kallakurichi Hooch Tragedy: Three accused produced before the court.
(Full video available on PTI Videos – https://t.co/dv5TRARJn4) pic.twitter.com/d2yJgkrRZF
— Press Trust of India (@PTI_News) June 21, 2024
ತಮಿಳುನಾಡು ಕಾಂಗ್ರೆಸ್ ಶಾಸಕ ಇವಿಕೆಎಸ್ ಇಳಂಗೋವನ್ ಅವರು, ಅಕ್ರಮ ಮದ್ಯದಿಂದ ಜನರು ಸಾಯುತ್ತಿದ್ದರು. ಕಲ್ಲಕುರಿಚಿಯಲ್ಲಿ ನಡೆದ ಈ ಘಟನೆ ನಿಜವಾದ ದುರಂತವಾಗಿದೆ. ಜಿಲ್ಲಾಧಿಕಾರಿ ಮತ್ತು ಎಸ್ಪಿಯನ್ನು ವರ್ಗಾವಣೆ ಮಾಡುವ ಮೂಲಕ ಸಿಎಂ ಸ್ಟಾಲಿನ್ ಸರಿಯಾದ ಹೆಜ್ಜೆ ಇಟ್ಟಿದ್ದಾರೆ. ಇತರ ಜಿಲ್ಲೆಗಳಲ್ಲಿಯೂ ಇಂತಹ ಅಕ್ರಮ ಮದ್ಯದ ಬಗ್ಗೆ ತೀವ್ರ ಶೋಧ ನಡೆಯುವಂತೆ ನೋಡಿಕೊಳ್ಳಬೇಕು ಎಂದು ನಾನು ಸಿಎಂ ಎಂ.ಕೆ. ಸ್ಟಾಲಿನ್ ಅವರನ್ನು ವಿನಂತಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: Hooch Tragedy: ತಮಿಳುನಾಡು ಕಳ್ಳಭಟ್ಟಿ ದುರಂತ; ಕಲ್ಲಕುರಿಚಿಯಲ್ಲಿ ಅಕ್ರಮ ಮದ್ಯ ಸೇವಿಸಿ 10 ಜನ ಸಾವು
ಇಂತಹ ಘಟನೆಗಳು ಮರುಕಳಿಸದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಲು ಮತ್ತು ಕಲ್ಲಕುರಿಚಿ ಸಾವಿನ ಕಾರಣಗಳನ್ನು ಪರಿಶೀಲಿಸಲು ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಗೋಕುಲದಾಸ್ ನೇತೃತ್ವದ ಏಕವ್ಯಕ್ತಿ ಆಯೋಗಕ್ಕೆ ಸೂಚಿಸುವಂತೆ ಸಿಎಂ ಸ್ಟಾಲಿನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
VIDEO | Tamil Nadu CM MK Stalin (@mkstalin) addresses the state Assembly over the issue of #Kallakurichi hooch tragedy.
(Full video available om PTI Videos – https://t.co/n147TvqRQz) pic.twitter.com/kXtTVEshLa
— Press Trust of India (@PTI_News) June 21, 2024
ವಿಷಪೂರಿತ ಮದ್ಯ ಮಾರಾಟದಲ್ಲಿ ತೊಡಗಿದ್ದ ನಾಲ್ವರನ್ನು ಇದುವರೆಗೆ ಬಂಧಿಸಲಾಗಿದ್ದು, ಅಕ್ರಮ ಮದ್ಯ ಸೇವಿಸಿ ಮೃತಪಟ್ಟ 48 ಮಂದಿಯ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ನೆರವು ನೀಡುವುದಾಗಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ. ತಮಿಳುನಾಡು ರಾಜ್ಯ ಗೃಹ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ಪರಿಶೀಲನೆಯ ನಂತರ ಕಳ್ಳಭಟ್ಟಿ ದುರಂತದ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.
ಕಳ್ಳಭಟ್ಟಿ ದುರಂತದ ಬಗ್ಗೆ ಸಮಗ್ರ ತನಿಖೆಯನ್ನು ಖಚಿತಪಡಿಸಿಕೊಳ್ಳಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ಕಲ್ಲಕುರಿಚಿಯಲ್ಲಿ ಕಲಬೆರಕೆಯ ಮದ್ಯ ಸೇವಿಸಿ ಜನರು ಸಾವನ್ನಪ್ಪಿದ ಸುದ್ದಿ ಕೇಳಿ ನನಗೆ ಆಘಾತವಾಗಿದೆ. ಈ ಅಪರಾಧದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ. ಈ ದುರಂತವನ್ನು ತಡೆಯುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಇಂತಹ ಅಪರಾಧಗಳಲ್ಲಿ ಭಾಗಿಯಾದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಈಗಾಗಲೇ ತಮಿಳುನಾಡು ಸರ್ಕಾರದ ಜಿಲ್ಲಾಧಿಕಾರಿ ಶ್ರವಣಕುಮಾರ್ ಜಾತಾವತ್ ಅವರನ್ನು ವರ್ಗಾವಣೆ ಮಾಡಿದೆ. ಕಲ್ಲಕುರಿಚಿ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಎಂ.ಎಸ್. ಪ್ರಶಾಂತ್ ನೇಮಕಗೊಂಡಿದ್ದಾರೆ. ಅಲ್ಲದೆ, ಕಲ್ಲಕುರಿಚಿ ಎಸ್ಪಿ ಸಮಯಸಿಂಗ್ ಮೀನಾ ಅವರನ್ನು ಅಮಾನತುಗೊಳಿಸಲಾಗಿದೆ. ಅವರ ಜಾಗಕ್ಕೆ ಸರ್ಕಾರ ರಜತ್ ಚತುರ್ವೇದಿ ಅವರನ್ನು ನೂತನ ಎಸ್ಪಿಯನ್ನಾಗಿ ನೇಮಿಸಿದೆ. ಅಲ್ಲದೆ, ಕಲ್ಲಕುರಿಚಿ ಜಿಲ್ಲೆಯ ನಿಷೇಧಿತ ವಿಭಾಗದ ಅಧಿಕಾರಿಗಳು ಸೇರಿದಂತೆ 9 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ