ಉತ್ತರ ಪ್ರದೇಶ: ಟೈಮ್ ಮೆಷಿನ್​​ನಿಂದ ವಯಸ್ಸು ಕಡಿಮೆ ಮಾಡುತ್ತೇವೆ ಎಂದು ₹35 ಕೋಟಿ ಲಪಟಾಯಿಸಿದ ದಂಪತಿ

|

Updated on: Oct 04, 2024 | 12:46 PM

ದಂಪತಿಗಳಾದ ರಶ್ಮಿ ಮತ್ತು ರಾಜೀವ್ ದುಬೆ, ಕಾನ್ಪುರದ ಕಿದ್ವಾಯಿ ನಗರದಲ್ಲಿ 'ರಿವೈವಲ್ ವರ್ಲ್ಡ್' ಎಂಬ ಚಿಕಿತ್ಸಾ ಕೇಂದ್ರವನ್ನು ತೆರೆದು ಈ ವಂಚನೆ ನಡೆಸಿದ್ದಾರೆ. ವಯಸ್ಸಾದವರನ್ನು ಮತ್ತೆ ಯೌವನಕ್ಕೆ ತರುತ್ತೇವೆ. ಅದಕ್ಕಾಗಿ ಇಸ್ರೇಲ್‌ ನಿರ್ಮಿತ ಟೈಮ್ ಮೆಷೀನ್ ನಿಂದ "ಆಮ್ಲಜನಕ ಚಿಕಿತ್ಸೆ" ನೀಡುತ್ತೇವೆ ಎಂದು ಭರವಸೆ ನೀಡಿ ಗ್ರಾಹಕರನ್ನು ಆಕರ್ಷಿಸಿದ್ದಾರೆ.

ಉತ್ತರ ಪ್ರದೇಶ: ಟೈಮ್ ಮೆಷಿನ್​​ನಿಂದ ವಯಸ್ಸು ಕಡಿಮೆ ಮಾಡುತ್ತೇವೆ ಎಂದು ₹35 ಕೋಟಿ ಲಪಟಾಯಿಸಿದ ದಂಪತಿ
ಪ್ರಾತಿನಿಧಿಕ ಚಿತ್ರ
Follow us on

ಕಾನ್ಪುರ್ ಅಕ್ಟೋಬರ್ 04: ಕಾನ್ಪುರದಲ್ಲಿನ (Kanpur) ದಂಪತಿಗಳು ತಮ್ಮಲ್ಲಿ “ಇಸ್ರೇಲ್ ನಿರ್ಮಿತ ಟೈಮ್ ಮೆಷಿನ್” ಇದೆ ಎಂದು ಹೇಳಿ ಸುಮಾರು ಜನರಿಗೆ ಮಂಕುಬೂದಿ ಎರಚಿದ್ದಾರೆ. ಈ ದಂಪತಿ ಟೈಮ್ ಮೆಷಿನ್​​ನಿಂದ ನಿಮ್ಮ ವಯಸ್ಸು 25ಕ್ಕೆ ಮರಳುತ್ತದೆ ಎಂದು ವೃದ್ಧರಿಗೆ ಪೊಳ್ಳು ಭರವಸೆಗಳನ್ನು ನೀಡಿ ಅವರಿಂದ ₹ 35 ಕೋಟಿ ಲಪಟಾಯಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ದಂಪತಿಗಳಾದ ರಶ್ಮಿ ಮತ್ತು ರಾಜೀವ್ ದುಬೆ, ಕಾನ್ಪುರದ ಕಿದ್ವಾಯಿ ನಗರದಲ್ಲಿ ‘ರಿವೈವಲ್ ವರ್ಲ್ಡ್’ ಎಂಬ ಚಿಕಿತ್ಸಾ ಕೇಂದ್ರವನ್ನು ತೆರೆದು ಈ ವಂಚನೆ ನಡೆಸಿದ್ದಾರೆ. ವಯಸ್ಸಾದವರನ್ನು ಮತ್ತೆ ಯೌವನಕ್ಕೆ ತರುತ್ತೇವೆ. ಅದಕ್ಕಾಗಿ ಇಸ್ರೇಲ್‌ ನಿರ್ಮಿತ ಟೈಮ್ ಮೆಷೀನ್ ನಿಂದ “ಆಮ್ಲಜನಕ ಚಿಕಿತ್ಸೆ” ನೀಡುತ್ತೇವೆ ಎಂದು ಭರವಸೆ ನೀಡಿ ಗ್ರಾಹಕರನ್ನು ಆಕರ್ಷಿಸಿದ್ದಾರೆ.

ಈ ದಂಪತಿ ವಿಶೇಷವಾಗಿ ವಯಸ್ಸಾದವರನ್ನು ಗುರಿಯಾಗಿಸಿಕೊಂಡು ಕಾನ್ಪುರದಲ್ಲಿನ ಅತ್ಯಂತ ಹೆಚ್ಚಿನ ಮಟ್ಟದ ಮಾಲಿನ್ಯವು  ವಯಸ್ಸಾಗುವಂತೆ ಮಾಡಿದೆ. ಹಾಗಾಗಿ  “ಆಮ್ಲಜನಕ ಚಿಕಿತ್ಸೆ” ಮೂಲಕ  ವೃದ್ಧರನ್ನು ತಕ್ಷಣವೇ ಯುವಕರಾಗಿ ಕಾಣುವಂತೆ ಮಾಡುತ್ತದೆ ಎಂದು  ಹೇಳಿಕೊಂಡಿದ್ದಾರೆ.

ಟೈಮ್ ಮೆಷಿನ್‌ನಲ್ಲಿನ ಪ್ರತಿಯೊಂದು ಸೆಷನ್‌ಗಳ ಬೆಲೆ ₹ 90,000. ಸೇವೆಯು ಪಿರಮಿಡ್ ಯೋಜನೆಯಾಗಿ ಮಾರ್ಪಟ್ಟಿದೆ. ಅಲ್ಲಿ ಜನರು ಇತರರಿಗೆ ರೆಫರಲ್‌ಗಳಿಗಾಗಿ ರಿಯಾಯಿತಿಗಳನ್ನು ಪಡೆಯಬಹುದು ಮತ್ತು ಅವರ ಗ್ರಾಹಕರ ನೆಲೆಯನ್ನು ವಿಸ್ತರಿಸಬಹುದು ಎಂದು ಎಸಿಪಿ ಅಂಜಲಿ ವಿಶ್ವಕರ್ಮ ಅವರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ದೂರು ದಾಖಲಿಸಿದ ವಂಚನೆಗೆ ಒಳಗಾದ ಮೂವರಲ್ಲಿ ಒಬ್ಬರಾದ ರೇಣು ಸಿಂಗ್ ಚಾಂಡೆಲ್, ಇತರರಿಗೆ ಸೇವೆಯನ್ನು ಪರಿಚಯಿಸಿದರೆ ತನಗೆ ಉಚಿತ ಸೆಷನ್ ನೀಡಲಾಯಿತು ಮತ್ತು ಚಿಕಿತ್ಸೆಗಾಗಿ ಹಲವಾರು ಜನರನ್ನು ಕರೆತಂದಿದ್ದೇನೆ ಎಂದು ಹೇಳಿದ್ದಾರೆ. ವಯೋವೃದ್ಧರಿಂದ ಒಟ್ಟು ₹35 ಕೋಟಿ ದೋಚಲಾಗಿದ್ದು, ಇದುವರೆಗೆ 25 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಇನ್ನಷ್ಟು ಸಂತ್ರಸ್ತರು ಮುಂದೆ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ: ಹೊಸ ತನಿಖೆಗೆ ಸುಪ್ರೀಂಕೋರ್ಟ್​ ಆದೇಶ, 5 ಸದಸ್ಯರ ಸ್ವತಂತ್ರ ಎಸ್​ಐಟಿ ರಚನೆ

ಪೊಲೀಸರು ಇತರ ಸಂತ್ರಸ್ತರನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದು ರಾಜೀವ್ ಮತ್ತು ರಶ್ಮಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ, ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ಇಬ್ಬರು ದೇಶ ಬಿಟ್ಟು ಪರಾರಿಯಾಗಲು ಯತ್ನಿಸಿದರೆ ವಿಮಾನ ನಿಲ್ದಾಣಗಳಿಗೆ ಎಚ್ಚರಿಕೆ ನೀಡಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ