ಪಾಟ್ನಾ: ರಾಜಕೀಯ, ಚುನಾವಣೆ, ಮತದಾನ ಇವೆಲ್ಲವೂ ಅತ್ಯಂತ ಸೂಕ್ಷ್ಮ ವಿಚಾರಗಳು. ಎಷ್ಟೋ ಬಾರಿ ಚುನಾವಣೆಗಳು ನಡೆದ ನಂತರ ಅವ್ಯವಹಾರಗಳು ಬಯಲಿಗೆ ಬಂದ ನಿದರ್ಶನಗಳಿವೆ. ಇತ್ತೀಚೆಗೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಕೂಡ ಗೊಂದಲದ ಗೂಡಾಗಿದ್ದನ್ನು ನಾವು ಗಮನಿಸಿದ್ದೇವೆ.
ಈಗಷ್ಟೇ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆ ಇವೆಲ್ಲದಕ್ಕೂ ಅಪವಾದ. ಬಿಹಾರದಲ್ಲಿ ರಾಜಕೀಯ ವೈರತ್ವ, ಪರಸ್ಪರ ಕಿತ್ತಾಟ, ಗೊಂದಲಗಳು ಎಷ್ಟೇ ಇದ್ದರೂ ಅವುಗಳ ಕರಿನೆರಳು ಚುನಾವಣೆಯ ಮೇಲೆ ಬೀಳದಂತೆ ನೋಡಿಕೊಳ್ಳಲಾಗಿದೆ. ಕೊರೊನಾ, ಮಳೆ, ಪ್ರವಾಹ ಇತ್ಯಾದಿ ಗಲಾಟೆಗಳ ನಡುವೆಯೂ ಅತಿ ಹೆಚ್ಚು ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ಇಡೀ ರಾಜ್ಯದಲ್ಲಿ ಒಂದೇ ಒಂದು ಬೂತ್ನಲ್ಲಿಯೂ ಮತಗಳ ಮರು ಎಣಿಕೆಯಾಗಿಲ್ಲ, ಯಾವುದೇ ಅಕ್ರಮಗಳು ನಡೆದಿಲ್ಲ. ಇಷ್ಟು ಶಿಸ್ತುಬದ್ಧವಾದ ಚುನಾವಣೆಯನ್ನು ನೋಡಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಬಿಹಾರದ ಚುನಾವಣಾಧಿಕಾರಿಗಳನ್ನು ಪ್ರಶಂಸಿಸಿದ್ದಾರೆ.
ಬಿಹಾರ ಚುನಾವಣೆಯ ಈ ಗೆಲುವು ಕರ್ನಾಟಕಕ್ಕೂ ಹೆಮ್ಮೆ ತರುವಂತಹದ್ದು ಎಂದರೆ ನಿಮಗೆ ಅಚ್ಚರಿಯಾಗಬಹುದು. ಹೌದು, ಬಿಹಾರ ಚುನಾವಣೆಯ ಯಶಸ್ಸಿನ ಹಿಂದೆ ಇರುವ ಮಾಸ್ಟರ್ ಮೈಂಡ್ ಕರ್ನಾಟಕ ಮೂಲದ ವ್ಯಕ್ತಿ. ಚಿತ್ರದುರ್ಗದ ಎಚ್.ಆರ್.ಶ್ರೀನಿವಾಸ್ ತಮ್ಮ ಎಂಜಿನಿಯರಿಂಗ್ ಪದವಿಯನ್ನು ಸುರತ್ಕಲಿನ ಎನ್ಐಟಿಕೆ ಕಾಲೇಜಿನಿಂದ ಪಡೆದು ನಂತರ ಐಎಎಸ್ ಅಧಿಕಾರಿಯಾದವರು. ಪ್ರಸ್ತುತ ಬಿಹಾರ ರಾಜ್ಯದ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್.ಆರ್.ಶ್ರೀನಿವಾಸ್ ತಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ಪ್ರಾಮಾಣಿಕ ಹಾಗೂ ನಿಷ್ಠಾವಂತ ಅಧಿಕಾರಿ ಎಂಬ ಹೆಸರು ಗಳಿಸಿದ್ದಾರೆ.
ಮೊದಲಿನಿಂದಲೂ ತಾನು ಮಾಡುವ ಕೆಲಸದ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ವಹಿಸುವ ಎಚ್.ಆರ್.ಶ್ರೀನಿವಾಸ್ ಶುರುವಿನಲ್ಲಿ ಇಂಗ್ಲಿಷ್ ಮಾತನಾಡಲು ಕಷ್ಟಪಡುತ್ತಿದ್ದರಂತೆ. ಆದರೆ, ಅದಕ್ಕೆ ಹಿಂಜರಿಯದೇ ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದ ಶ್ರೀನಿವಾಸ್ ನಂತರದ ವರ್ಷಗಳಲ್ಲಿ ಸೃಷ್ಟಿಸಿದ್ದು ಇತಿಹಾಸ. ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆಯ ಪ್ರಕರಣ ಬೆಳಕಿಗೆ ಬಂದಾಗ ಅದನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ರಚಿಸಿದ ತಂಡದಲ್ಲಿ ಶ್ರೀನಿವಾಸ್ ಸಹ ಒಬ್ಬರಾಗಿದ್ದರು ಎನ್ನುವುದು ಗಮನಾರ್ಹ ಸಂಗತಿ.
ಎಚ್.ಆರ್.ಶ್ರೀನಿವಾಸ್ ಅವರ ಕಾರ್ಯವೈಖರಿಯನ್ನು ಗಮನಿಸಿದ ಕರ್ನಾಟಕ ಸರ್ಕಾರ 1996ನೇ ಬ್ಯಾಚಿನ ಬಿಹಾರ್ ಕೆಡರಿನ ಐಎಎಸ್ ಅಧಿಕಾರಿಯಾದ ಶ್ರೀನಿವಾಸ್ ಅವರ ಅಂತರ್ ಕೆಡರ್ ವರ್ಗಾವಣೆಯನ್ನು ಸಹ ಬಯಸಿತ್ತು. ತಾನು ಕಾರ್ಯ ನಿರ್ವಹಿಸಿದಲ್ಲೆಲ್ಲಾ ಉತ್ತಮ ಹೆಸರು ಗಳಿಸಿರುವ ಶ್ರೀನಿವಾಸ್ ಅವರು ಅಕ್ರಮ ಗುತ್ತಿಗೆಯ ವಿರುದ್ಧ ಹೋರಾಡಿ ಅದನ್ನು ಮಟ್ಟ ಹಾಕಿರುವುದನ್ನು ಸಿಇಸಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ವರದಿಯಲ್ಲಿ ಪ್ರಶಂಸಿಸಿದೆ. ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ಇಡೀ ದೇಶವೇ ತಿರುಗಿ ನೋಡುವಂಥ ಕೆಲಸ ಮಾಡಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯ.
Published On - 3:23 pm, Tue, 17 November 20