ರಾಜ್ಯದ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಎದ್ದಿರುವ ಜಿಜಾಬ್ (Hijab) ವಿವಾದ ರಾಷ್ಟ್ರಮಟ್ಟದಲ್ಲಿ ಭರ್ಜರಿ ಸುದ್ದಿ ಮಾಡುತ್ತಿದೆ. ಈ ಬಗ್ಗೆ ಇಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ(Rahul Gandhi), ವಿದ್ಯಾರ್ಥಿಗಳ ಶಿಕ್ಷಣದ ದಾರಿಯಲ್ಲಿ ಅವರು ಧರಿಸುವ ಹಿಜಾಬ್ನ್ನು ಅಡ್ಡ ತರುತ್ತಿರುವುದು ಖೇದಕರ. ಈ ಮೂಲಕ ನಮ್ಮ ದೇಶದ ಹೆಣ್ಣುಮಕ್ಕಳ ಭವಿಷ್ಯವನ್ನೇ ಲೂಟಿ ಮಾಡಲಾಗುತ್ತಿದೆ. ತಾಯಿ ಸರಸ್ವತಿ ಪ್ರತಿಯೊಬ್ಬರಿಗೂ ಜ್ಞಾನ ನೀಡುತ್ತಾಳೆ. ಯಾರಿಗೂ ಬೇಧಭಾವ ಮಾಡಲಾರಳು ಎಂದು ಹೇಳಿದ್ದರು. ರಾಹುಲ್ ಗಾಂಧಿಯವರ ಈ ಟ್ವೀಟ್ಗೆ ಕರ್ನಾಟಕ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಶಿಕ್ಷಣ ಪಡೆಯಲು ಹಿಜಾಬ್ ಅಷ್ಟೊಂದು ಅತ್ಯಗತ್ಯವಾಗಿದ್ದರೆ, ನಿಮ್ಮ ಸರ್ಕಾರವಿದ್ದಾಗ ಯಾಕೆ ಅದನ್ನು ಕಡ್ಡಾಯಗೊಳಿಸಲಿಲ್ಲ ಎಂದು ಪ್ರಶ್ನಿಸಿದೆ. ಅಷ್ಟೇ ಅಲ್ಲ, ರಾಹುಲ್ ಗಾಂಧಿಯವರು ಈಗ ಶಿಕ್ಷಣದಲ್ಲಿ ಕೋಮುವಾದ ಸೃಷ್ಟಿಸುತ್ತಿದ್ದಾರೆ ಎಂದೂ ಆರೋಪಿಸಿದೆ.
ರಾಹುಲ್ ಗಾಂಧಿಯವರ ಟ್ವೀಟ್ನ್ನು ರೀಶೇರ್ ಮಾಡಿಕೊಂಡಿರುವ ಕರ್ನಾಟಕ ಬಿಜೆಪಿ, ಕಾಂಗ್ರೆಸ್ನ ಸಹ ಮಾಲೀಕರಾದ ರಾಹುಲ್ ಗಾಂಧಿಯವರು ಶಿಕ್ಷಣದಲ್ಲೂ ಕೋಮುವಾದ ಸೃಷ್ಟಿಸುವ ಮೂಲಕ, ತಾವು ಈ ದೇಶದ ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅಷ್ಟಕ್ಕೂ ಶಿಕ್ಷಣದಲ್ಲಿ ಹಿಜಾಬ್ ಅಷ್ಟೊಂದು ಮಹತ್ವ ಎಂದಾಗಿದ್ದರೆ, ಕಾಂಗ್ರೆಸ್ ಆಡಳಿತವಿದ್ದಾಗ ರಾಹುಲ್ ಗಾಂಧಿಯವರೇ ಅದನ್ನು ಕಡ್ಡಾಯಗೊಳಿಸಬಹುದಿತ್ತಲ್ಲ? ಎಂದು ಬಿಜೆಪಿ ಟ್ವೀಟ್ನಲ್ಲಿ ಪ್ರಶ್ನಿಸಿದೆ.
By communalising education, CONgress co-owner @RahulGandhi has once again proved that he is dangerous to the future of India.
If Hijab is very much essential to get educated, why doesn’t Rahul Gandhi make it mandatory in States ruled by CONgress?#CommunalCONgress https://t.co/MnVoVSJKEm
— BJP Karnataka (@BJP4Karnataka) February 5, 2022
ಕರ್ನಾಟಕದಲ್ಲಿ ಈ ಹಿಜಾಬ್ ವಿವಾದ ದಿನೇದಿನೆ ಹೆಚ್ಚುತ್ತಿದೆ. ರಾಜ್ಯದ ರಾಜಕೀಯ ನಾಯಕರು ಪರ-ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಮಧ್ಯೆ ಶುಕ್ರವಾರ ಬಸವರಾಜ ಬೊಮ್ಮಾಯಿ ಸಭೆ ಕೂಡ ನಡೆಸಿದ್ದಾರೆ. ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಶಿಕ್ಷಣ ಪಡೆಯಲು ಸಮವಸ್ತ್ರ ಧರಿಸಿ ಬರಬೇಕು. ನೀವು ಮನಸೋ ಇಚ್ಛೆ ವರ್ತಿಸುತ್ತೀರಿ ಎಂದಾದರೆ ಅದಕ್ಕಾಗಿ ಮದರಸಾ ಇದೆ. ಎಲ್ಲರೂ ಜಾಬ್ಗಾಗಿ ಕಾಲೇಜಿಗೆ ಹೋಗುತ್ತೀವಿ ಎಂದರೆ, ಇವರು ಹಿಜಾಬ್ಗಾಗಿ ಹೋಗ್ತೇವೆ ಎನ್ನುತ್ತಾರೆ ಎಂದು ಕಟು ಮಾತುಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲ, ನಿಮ್ಮಿಷ್ಟದಂತೆ ನಡೆಯುತ್ತೀರಿ ಎಂದಾದರೆ, ನಾವು 1947ರಲ್ಲಿಯೇ ಒಂದು ಪ್ರತ್ಯೇಕ ರಾಷ್ಟ್ರವನ್ನೇ ನೀಡಿದ್ದೇವೆ ಅಲ್ಲಿಗೆ ಹೋಗಿ ಎಂದು ಹೇಳಿದ್ದಾರೆ.