ICRISAT ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿದ ನರೇಂದ್ರ ಮೋದಿ; ಸಣ್ಣ ರೈತರತ್ತ ಹೆಚ್ಚು ಗಮನ ಎಂದ ಪ್ರಧಾನಿ
ಐಸಿಆರ್ಐಎಸ್ಎಟಿ ಸಂಸ್ಥೆಯು ಕಳೆದ 5 ದಶಕಗಳಿಂದಲೂ ಕೂಡ ಕೃಷಿಯನ್ನು ಸುಲಭ ಮತ್ತು ಸುಸ್ಥಿರಗೊಳಿಸಲು ಇತರ ದೇಶಗಳಿಗೆ ಸಹಾಯ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಹೈದರಾಬಾದ್ನ ಪತಂಚೆರುವಿನಲ್ಲಿ ಅರೆ-ಶುಷ್ಕ ಉಷ್ಣವಲಯದ ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ (International Crops Research Institute for Semi-Arid Tropics (ICRISAT)ಯ ಸುವರ್ಣಮಹೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದರು. ಇದೇ ವೇಳೆ ಪ್ರಧಾನಿ ಮೋದಿ, ಬೆಳೆಗಳ ಸಂಶೋಧನಾ ಸಂಸ್ಥೆಯ ಹೊಸ ಹವಾಮಾನ ಬದಲಾವಣೆ ಸೌಲಭ್ಯವನ್ನು ಅನಾವರಣಗೊಳಿಸಿದರು. ಅಷ್ಟೇ ಅಲ್ಲ, ಸುವರ್ಣ ಮಹೋತ್ಸವ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹವಾಮಾನ ಬದಲಾವಣೆಯೆಂಬುದು ನಮ್ಮ ರೈತರಿಗೆ ಅತ್ಯಂತ ದೊಡ್ಡ ಸವಾಲಾಗಿದೆ. ಕೃಷಿಯಲ್ಲಿ ಮೂಲಭೂತ ವಿಷಯಗಳಿಗೆ ಉತ್ತೇಜನ ನೀಡುವ ಜತೆ, ಭವಿಷ್ಯದೆಡೆಗೆ ಧಾವಿಸುವುದರತ್ತ ನಾವು ಗಮನ ನೆಟ್ಟಿದ್ದೇವೆ. ನಮ್ಮ ಅಗತ್ಯವನ್ನು ದೊಡ್ಡ ಮಟ್ಟದಲ್ಲಿ ಪೂರೈಸುವ ಈ ದೇಶದ ಶೇ.80ರಷ್ಟು ಸಣ್ಣ ರೈತರತ್ತ ನಾವು ಗಮನ ಕೇಂದ್ರೀಕರಿಸಿದ್ದೇವೆ. ಅದರ ಭಾಗವಾಗಿಯೇ ನಮ್ಮ ಕೇಂದ್ರ ಸರ್ಕಾರದ 2022-23ರ ಬಜೆಟ್ನಲ್ಲಿ ನೈಸರ್ಗಿಕ ಬೇಸಾಯ ಮತ್ತು ಡಿಜಿಟಲ್ ಕೃಷಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು. ಐಸಿಆರ್ಐಎಸ್ಎಟಿ ಸಂಸ್ಥೆಯು ಕಳೆದ 5 ದಶಕಗಳಿಂದಲೂ ಕೂಡ ಕೃಷಿಯನ್ನು ಸುಲಭ ಮತ್ತು ಸುಸ್ಥಿರಗೊಳಿಸಲು ಇತರ ದೇಶಗಳಿಗೆ ಸಹಾಯ ಮಾಡುತ್ತಿದೆ. ಹಾಗೇ, ಈ ಸಂಸ್ಥೆ ಭಾರತದ ಕೃಷಿ ವಲಯ ಬಲಪಡಿಸುವ ನಿಟ್ಟಿನಲ್ಲಿ ತಮ್ಮ ಸೇವೆಯನ್ನು ಮುಂದುವರಿಸುತ್ತದೆ ಎಂಬ ಭರವಸೆ ನನಗೆ ಇದೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
To save our farmers from climate challenge, our focus is on the fusion of both back to basics and march to future. Our focus is on more than 80% of small farmers of the country who need us the most. The Union Budget 2022-23 is focused on natural farming & digital agriculture: PM pic.twitter.com/9lASlJMaj8
— ANI (@ANI) February 5, 2022
ಇಂದು ಹೈದರಾಬಾದ್ನ ಮುಂಚಿತ್ತಾಲ್ನಲ್ಲಿ ನಡೆಯಲಿರುವ ಶ್ರೀರಾಮಾನುಜಾಚಾರ್ಯರ ಸಮಾನತೆ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲೂ ಸಹ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಹೈದರಾಬಾದ್ ಏರ್ಪೋರ್ಟ್ನಲ್ಲಿ ಇಳಿದ ಪ್ರಧಾನಿಯವರನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸ್ವಾಗತಿಸಲು ಹೋಗದೆ ವಿವಾದ ಸೃಷ್ಟಿಸಿದ್ದಾರೆ. ಕೆಸಿಆರ್ ಅಸಾಂವಿಧಾನಿಕ ನಡೆ ತೋರಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದರೆ, ಮುಖ್ಯಮಂತ್ರಿಗೆ ಆರೋಗ್ಯ ಸರಿಯಿಲ್ಲ ಎಂದು ಅವರ ಅಧಿಕೃತ ನಿವಾಸ ಪ್ರಗತಿ ಭವನ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ಹಿಜಾಬ್ ವಿವಾದ; ಕರ್ನಾಟಕದ ಶಾಲಾ- ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ಸರ್ಕಾರದಿಂದ ಆದೇಶ