ಸಮಾನತೆ ಮೂರ್ತಿ ಅನಾವರಣಕ್ಕೆ ಹೈದರಾಬಾದ್ಗೆ ತೆರಳಿದ ಪ್ರಧಾನಿ ಮೋದಿ; ಸ್ವಾಗತಿಸಲು ಏರ್ಪೋರ್ಟ್ಗೆ ಬಾರದ ಮುಖ್ಯಮಂತ್ರಿ ಕೆಸಿಆರ್
ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಹೋಗದ ಮುಖ್ಯಮಂತ್ರಿ ಕೆಸಿಆರ್ರನ್ನು ತೆಲಂಗಾಣ ಬಿಜೆಪಿ ಟೀಕಿಸಿದೆ. ಇದು ನಿಜಕ್ಕೂ ಮೂರ್ಖತನ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಹೇಳಿದೆ.
ಪ್ರಧಾನಿ ಯಾವುದೇ ರಾಜ್ಯಕ್ಕೆ ಹೋದಾಗ ಅಲ್ಲಿನ ಮುಖ್ಯಮಂತ್ರಿ ಅವರನ್ನು ಸ್ವಾಗತಿಸುವುದು ಶಿಷ್ಟಾಚಾರ. ಆದರೆ ಆ ಶಿಷ್ಟಾಚಾರವನ್ನು ಇಂದು ಹೈದರಾಬಾದ್ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಉಲ್ಲಂಘಿಸಿದ್ದಾರೆ. ಹೈದರಾಬಾದ್ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿಯ (PM Narendra Modi) ಸ್ವಾಗತಕ್ಕೆ ಅವರು ಏರ್ಪೋರ್ಟ್ಗೆ ಆಗಮಿಸಲಿಲ್ಲ. ಜನವರಿ ತಿಂಗಳಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ ಕೂಡ ಹೀಗೆ ಮಾಡಿದ್ದರು. ಬಳಿಕ ಅಲ್ಲಿ ಭದ್ರತಾ ಉಲ್ಲಂಘನೆ ಕಾರಣಕ್ಕೆ ಪ್ರಧಾನಿ ಮೋದಿ ವಾಪಸ್ ಬರುವಂತಾಗಿದ್ದು, ದೇಶಾದ್ಯಂತ ಸಂಚಲನ ಮೂಡಿಸಿದ ಸುದ್ದಿಯಾಗಿತ್ತು.
ಶ್ರೀರಾಮಾನುಜಾಚಾರ್ಯರ ಸಹಸ್ರಾಬ್ದಿ ಕಾರ್ಯಕ್ರಮ ನಡೆಯುತ್ತಿರುವ ಹೈದರಾಬಾದ್ನ ಹೊರವಲಯದಲ್ಲಿ ಇರುವ ಮುಂಚಿತ್ತಾಲ್ನಲ್ಲಿ ಎಂಬಲ್ಲಿ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪಂಚಲೋಹದ ಸಮಾನತೆ ಪ್ರತಿಮೆ ಅನಾವರಣಗೊಳಿಸಲು ಪ್ರಧಾನಿ ಮೋದಿ ತೆರಳಿದ್ದಾರೆ. ಹೈದರಾಬ್ ಏರ್ಪೋರ್ಟ್ನಲ್ಲಿ ಇಳಿದ ಪ್ರಧಾನಮಂತ್ರಿಯವರನ್ನು ರಾಜ್ಯಪಾಲೆ ತಮಿಳುಸಾಯಿ ಸೌಂದರ್ ರಾಜನ್ ಸ್ವಾಗತಿಸಿದ್ದಾರೆ. ಈ ವೇಳೆ ಕೇಂದ್ರ ಪ್ರವಾಸೋದ್ಯಮ ಇಲಾಖೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ, ತೆಲಂಗಾಣ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಇತರರು ಇದ್ದರು. ಸಿಎಂ ಕೆಸಿಆರ್ ಅವರು ಇತ್ತೀಚೆಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು. ಮೋದಿಯವರು ಚುನಾವಣೆಗಾಗಿ ಡ್ರೆಸ್ ಮಾಡಿಕೊಳ್ಳುತ್ತಾರೆ. ಅಂದರೆ ಆಯಾ ರಾಜ್ಯದ ಚುನಾವಣೆ ಹತ್ತಿರ ಬಂದಾಗ ಅದಕ್ಕೆ ತಕ್ಕಂತೆ ಪ್ರಧಾನಿ ಉಡುಪು ಇರುತ್ತದೆ. ಇನ್ನು ಅವರ ಬಜೆಟ್ನಲ್ಲಿ ಸತ್ವವೇ ಇಲ್ಲ ಎಂದು ಹೇಳಿದ್ದರು.
ವಾಸ್ತವದಲ್ಲಿ ಇಂದು ಕೆ.ಚಂದ್ರಶೇಖರ್ ರಾವ್ ಅವರು ಇಂದು ಏರ್ಪೋರ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿ, ಅವರೊಂದಿಗೆ ಒಂದೇ ಹೆಲಿಕಾಪ್ಟರ್ನಲ್ಲಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತೆರಳಬೇಕಿತ್ತು. ಸ್ವಲ್ಪ ದಿನಗಳ ಹಿಂದೆ ಈ ಬಗ್ಗೆ ಮಾತನಾಡಿದ್ದ ಕೆಸಿಆರ್, ಏರ್ಪೋರ್ಟ್ನಲ್ಲಿ ಸ್ವಾಗತಿಸುವುದು, ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುವುದೆಲ್ಲ ಶಿಷ್ಟಾಚಾರ. ಆದರೆ ರಾಜಕೀಯದಲ್ಲಿ ಅವರನ್ನು ನಾನು ಟೀಕಿಸಿಬಹುದು. ಮೋದಿಯವರೊಂದಿಗೆ ಹೆಲಿಕಾಪ್ಟರ್ನಲ್ಲಿ ಕುಳಿತಾಗಲೂ ನಾನು ಇದೇ ವಿಷಯ ಮಾತನಾಡಬಲ್ಲೆ ಎಂದು ಹೇಳಿದ್ದರು. ಆದರೆ ಅವರಿಂದು ಎಲ್ಲ ಶಿಷ್ಟಾಚಾರಗಳನ್ನೂ ಮುರಿದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಹೋಗದ ಮುಖ್ಯಮಂತ್ರಿ ಕೆಸಿಆರ್ರನ್ನು ತೆಲಂಗಾಣ ಬಿಜೆಪಿ ಟೀಕಿಸಿದೆ. ಇದು ನಿಜಕ್ಕೂ ಮೂರ್ಖತನ ಮತ್ತು ನಾಚಿಕೆಗೇಡಿನ ಸಂಗತಿ. ಕೆಸಿಆರ್ ಸಂವಿಧಾನವನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದೆ. ಆದರೆ ಕೆಸಿಆರ್ ಅಧಿಕೃತ ನಿವಾಸ ಪ್ರಗತಿ ಭವನ್ನಿಂದ ಹೇಳಿಕೆ ಹೊರಡಿಸಲಾಗಿದ್ದು, ಕೆ.ಚಂದ್ರಶೇಖರ್ ರಾವ್ ಆರೋಗ್ಯ ಸರಿಯಾಗಿ ಇಲ್ಲದ ಕಾರಣ ಪ್ರಧಾನಿಯನ್ನು ಸ್ವಾಗತಿಸಲು ಹೋಗಿಲ್ಲ. ಸಂಜೆ ಮುಂಚಿತ್ತಾಲ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳುವುದಿಲ್ಲ ಎಂದು ಹೇಳಲಾಗಿದೆ.
Published On - 5:31 pm, Sat, 5 February 22