ಮುಂಬೈನಲ್ಲಿ ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂದ ಅಮೃತಾ ಫಡ್ನವೀಸ್; ಬೆಂಗಳೂರಿಗರು ಇದನ್ನು ಓದಬೇಡಿ ಎಂದ ಪ್ರಿಯಾಂಕಾ ಚತುರ್ವೇದಿ
ಇನ್ನೊಂದೆಡೆ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಕೂಡ ಅಮೃತಾ ಫಡ್ನವೀಸ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಟ್ರಾಫಿಕ್ ಕೂಡ ಡಿವೋರ್ಸ್ಗೆ ಕಾರಣವಾಗುತ್ತದೆ ಎಂದು ಅವರು ಹೇಳಿದ ಮಾತು ನಿಜಕ್ಕೂ ಅಚ್ಚರಿ ಮೂಡಿಸಿದೆ ಎಂದಿದ್ದಾರೆ.
ಮುಂಬೈನಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಟ್ರಾಫಿಕ್ (Divorces due to Traffic) ಕೂಡ ಕಾರಣವಂತೆ. ಇಂಥದ್ದೊಂದು ಅಚ್ಚರಿಯ ವಿಚಾರವನ್ನು ಮಹಾರಾಷ್ಟ್ರ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ (Devendra Fadnavis’ wife Amruta Fadnavis ) ಹೇಳಿದ್ದು, ಅದಕ್ಕೆ ಪ್ರತಿಯಾಗಿ ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ವ್ಯಂಗ್ಯವಾಡಿದ್ದಾರೆ. ಈ ವರ್ಷದ ಅತ್ಯುತ್ತಮ ಅತಾರ್ಕಿಕ ವಿಚಾರ ಇದು ಎಂದು ಹೇಳಿದ್ದಾರೆ. ಇನ್ನೊಂದೆಡೆ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಪ್ರತಿಕ್ರಿಯೆ ನೀಡಿ, ಇಂಥದ್ದೊಂದು ತರ್ಕವನ್ನು ಇದೇ ಮೊದಲ ಬಾರಿಗೆ ಕೇಳುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನು ನೆಟ್ಟಿಗರಂತೂ ಅಮೃತಾರನ್ನು ಸಿಕ್ಕಾಪಟೆ ಟ್ರೋಲ್ ಮಾಡುತ್ತಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮುಂಬೈನಲ್ಲಿನ ರಸ್ತೆ ದುಃಸ್ಥಿತಿ, ಟ್ರಾಫಿಕ್ ಬಗ್ಗೆ ಮಾತನಾಡಿದ ಅಮೃತಾ ಫಡ್ನವೀಸ್, ನಾನೊಬ್ಬಳು ಸಾಮಾನ್ಯ ನಾಗರಿಕಳಾಗಿ ಈ ವಿಚಾರ ಹೇಳುತ್ತಿದ್ದೇನೆ. ಮುಂಬೈನಲ್ಲಿ ಟ್ರಾಫಿಕ್ನಿಂದಾಗಿ ಅದೆಷ್ಟೋ ಜನರಿಗೆ ತಮ್ಮ ಕುಟುಂಬಕ್ಕೆ ಸಮಯಕೊಡಲು ಸಾಧ್ಯವಾಗುತ್ತಿಲ್ಲ. ಇದು ವಿಚ್ಛೇದನಕ್ಕೆ ಕಾರಣವಾಗುತ್ತಿದೆ. ವಾಣಿಜ್ಯ ನಗರಿಯಲ್ಲಿ ಶೇ.3ರಷ್ಟು ವಿಚ್ಛೇದನಗಳಿಗೆ ಟ್ರಾಫಿಕ್ ಕಾರಣವಾಗಿದೆ ಎಂದು ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು, ನಾನು ದೇವೇಂದ್ರ ಫಡ್ನವೀಸ್ ಪತ್ನಿಯಾಗಿ ಮಾತನಾಡುತ್ತಿಲ್ಲ. ನಾನೊಬ್ಬಳು ಸಾಮಾನ್ಯ ಮಹಿಳೆಯಾಗಿ ಹೇಳುತ್ತಿದ್ದೇನೆ. ನನಗಂತೂ ಮುಂಬೈ ರಸ್ತೆಯ ಗುಂಡಿಗಳು, ಟ್ರಾಫಿಕ್ ಸಹಿಸಿಕೊಂಡು ಸಾಕಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿಗರು ಇದನ್ನು ಓದಬೇಡಿ ! ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮೂಲಕ ಅಮೃತಾ ಫಡ್ನವೀಸ್ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ. ಅಮೃತಾ ಹೆಸರನ್ನು ಉಲ್ಲೇಖಿಸದೆ ಟ್ವೀಟ್ ಮಾಡಿದ ಅವರು, ಶೇ.3ರಷ್ಟು ಡಿವೋರ್ಸ್ಗಳು ಟ್ರಾಫಿಕ್ನಿಂದ ಆಗುತ್ತಿದೆ ಎಂದು ಹೇಳುತ್ತಿರುವ ಮಹಿಳೆಗೆ ಅತ್ಯುತ್ತಮ ಅತಾರ್ಕಿಕ ಪ್ರಶಸ್ತಿ ನೀಡಬೇಕು. ಹೀಗೆ ಬುದ್ಧಿಗೆ ಬ್ರೇಕ್ ನೀಡುವ ಬದಲು ರಜಾದಿನದ ಬ್ರೇಕ್ ತೆಗದುಕೊಂಡು ಮನಸು ಸರಿ ಮಾಡಿಕೊಳ್ಳಿ ಎಂದಿದ್ದಾರೆ. ಅಷ್ಟೇ ಅಲ್ಲ, ಬೆಂಗಳೂರಿನ ಕುಟುಂಬಗಳು ಈ ಸುದ್ದಿಯನ್ನು ಓದಬೇಡಿ. ನಿಮ್ಮ ಮದುವೆಗೆ ಮಾರಕವಾಗಬಹುದು ಎಂದೂ ಹೇಳಿದ್ದಾರೆ.
Best (il)logic of the day award goes to the lady who claims 3% Mumbaikars are divorcing due to traffic on roads. Please take a holiday break rather than having a mind on brake.. Bengaluru families please avoid reading this , can prove fatal for your marriages ?
— Priyanka Chaturvedi?? (@priyankac19) February 5, 2022
ಇನ್ನೊಂದೆಡೆ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಕೂಡ ಅಮೃತಾ ಫಡ್ನವೀಸ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಮೃತಾ ಅವರು ನಮ್ಮ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ. ಟ್ರಾಫಿಕ್ ಕೂಡ ಡಿವೋರ್ಸ್ಗೆ ಕಾರಣವಾಗುತ್ತದೆ ಎಂದು ಅವರು ಹೇಳಿದ ಮಾತು ನಿಜಕ್ಕೂ ಅಚ್ಚರಿ ಮೂಡಿಸಿದೆ. ವಿಚ್ಛೇದನಕ್ಕೆ ಹಲವು ಕಾರಣಗಳು ಇರಬಹುದು. ಅದರಲ್ಲಿ ಟ್ರಾಫಿಕ್ನಿಂದಲೂ ಡಿವೋರ್ಸ್ ಆಗುತ್ತದೆ ಎಂಬುದನ್ನು ಇದೇ ಮೊದಲ ಬಾರಿ ಕೇಳುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: India vs West Indies: ಯುವ ದಾಂಡಿಗನೊಂದಿಗೆ ಇನಿಂಗ್ಸ್ ಆರಂಭಿಸಲಿರುವ ರೋಹಿತ್ ಶರ್ಮಾ