ಸೋಮವಾರದ ಒಳಗೆ ಬರ ಪರಿಹಾರ ಬಿಡುಗಡೆ ಮಾಡಲು ಒಪ್ಪಿದ ಕೇಂದ್ರ

ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದರೂ ಕೂಡ ಕೇಂದ್ರ ಸರ್ಕಾರ ಇನ್ನೂ ಬರ ಪರಿಹಾರ ಘೋಷಣೆ ಮಾಡಿಲ್ಲ. ಹೀಗಾಗಿ ಬರ ಪರಿಹಾರ ಕೊಡಿಸುವಂತೆ ಸುಪ್ರೀಂ ಕೋರ್ಟ್​ನಲ್ಲಿ ಆರ್ಟಿಕಲ್ 32ರ ಅಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟ ಸರ್ಕಾರ ರಿಟ್ ಅರ್ಜಿ ಸಲ್ಲಿಸಿದೆ. ಇಂದು (ಏ.22) ಸುಪ್ರೀಂಕೋರ್ಟ್​ ಅರ್ಜಿ ವಿಚಾರಣೆ ನಡೆಸಿತು.

ಸೋಮವಾರದ ಒಳಗೆ ಬರ ಪರಿಹಾರ ಬಿಡುಗಡೆ ಮಾಡಲು ಒಪ್ಪಿದ ಕೇಂದ್ರ
ಕೇಂದ್ರ ಸರ್ಕಾರ
Edited By: ವಿವೇಕ ಬಿರಾದಾರ

Updated on: Apr 22, 2024 | 2:50 PM

ನವದೆಹಲಿ/ಬೆಂಗಳೂರು, ಏಪ್ರಿಲ್​ 22: ಸೋಮವಾರದ (ಏ.29)ರ ಒಳಗೆ ಬರ ಪರಿಹಾರ (Drought Relief Fund) ಬಿಡುಗಡೆ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ (Union Government) ಸುಪ್ರೀಂಕೋರ್ಟ್​ಗೆ (Supreme Court) ಹೇಳಿದೆ. ಕರ್ನಾಟಕಕ್ಕೆ ಬರ ಪರಿಹಾರ ನಿಧಿ ಬಂದಿಲ್ಲ, ಹೀಗಾಗಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯ ಕಾಂಗ್ರೆಸ್​ ಸರ್ಕಾರ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಸುಪ್ರೀಂಕೋರ್ಟ್​ನ ನ್ಯಾ.ಬಿ.ಆರ್.ಗವಾಯಿ ನೇತೃತ್ವದ ದ್ವಿಸದಸ್ಯ ಪೀಠ ಇಂದು (ಏ.22) ಅರ್ಜಿ ವಿಚಾರಣೆ ನಡೆಸಿತು. ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್​​​​ ವೆಂಕಟರಮಣಿ ವಾದ ಮಂಡಿಸಿದರು.

ಬರ ಪರಿಹಾರ ಸಂಬಂಧ ಚುನಾವಣಾ ಆಯೋಗದ ಅನುಮತಿ ಕೇಳಿದ್ದೇವೆ. ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಯಬಹುದು. ಸೋಮವಾರದ ಒಳಗೆ ಬರ ಪರಿಹಾರ ಬಿಡುಗಡೆ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್​​​​ ವೆಂಕಟರಮಣಿ ನ್ಯಾಯ ಪೀಠಕ್ಕೆ ಹೇಳಿದರು. ಇನ್ನು ಹಿರಿಯ ವಕೀಲರ ಅಲಭ್ಯತೆ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡುವಂತೆ ರಾಜ್ಯ ಸರಕಾರದ ಪರ ವಕೀಲರು ಕೇಳಿಕೊಂಡ‌ರು. ವಾದ-ಪ್ರತಿವಾದವನ್ನು ಆಲಿಸಿದ ದ್ವಿಸದಸ್ಯ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್​ 29ಕ್ಕೆ ಮುಂದೂಡಿತು.

ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿ ಏನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಭೈರೇಗೌಡ 2023ರ ಡಿಸೆಂಬರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ರಾಜ್ಯದಲ್ಲಿ 236 ರಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟ ಆಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಿದ್ದರು.

ಇದನ್ನೂ ಓದಿ: ಸರ್ಕಾರ ಪಾಪರ್‌ ಆಗಿರುವುದರಿಂದ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ: ಆರ್ ಅಶೋಕ

ಹೀಗಾಗಿ ಶೀಘ್ರವೇ 18,177.44 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಇದರಲ್ಲಿ 4663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,577 ಕೋಟಿ ರೂ. ತುರ್ತು ಪರಿಹಾರ ನೀಡುವಂತೆ ಕೋರಿದ್ದರು. 566 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಮನವಿ ಮಾಡಿದ್ದರು.

ಜೊತೆಗೆ ಎನ್‌.ಡಿ.ಆರ್‌.ಎಫ್. ನಿಂದ 4663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ ಒದಗಿಸುವಂತೆ ಮನವಿ ಮಾಡಿದ್ದರು. ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡಲು 2015-16 ರ ಕೃಷಿ ಗಣತಿಯನ್ನು ಪರಿಗಣಿಸಲಾಗುತ್ತಿದ್ದು, ಇದು 8 ವರ್ಷ ಹಳೆಯ ಮಾಹಿತಿಯಾಗಿದೆ. ಅಲ್ಲದೆ ರಾಜ್ಯದಲ್ಲಿ ರೈತರ ದತ್ತಾಂಶವನ್ನು ಫ್ರೂಟ್ಸ್‌ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು ಪಿಎಂ-ಕಿಸಾನ್‌ ಯೋಜನೆಗೆ ಇದನ್ನು ಪರಿಗಣಿಸಲಾಗುತ್ತಿದೆ. ಇದರನ್ವಯ ರಾಜ್ಯದಲ್ಲಿ 83 ಲಕ್ಷ ಜನ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಪರಿಹಾರ ವಿತರಣೆಗೆ ಈ ದತ್ತಾಂಶವನ್ನು ಪರಿಗಣಿಸುವಂತೆ ಮನವಿ ಮಾಡಿದ್ದರು. ಜೊತೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಬರಪೀಡಿತ ತಾಲೂಕುಗಳಲ್ಲಿ ಉದ್ಯೋಗದ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:08 pm, Mon, 22 April 24

ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us