ಕಾರ್ತಿ ಚಿದಂಬರಂಗೆ ರಿಲೀಫ್​; IT ಕಾನೂನು ಕ್ರಮಕ್ಕೆ ಹೈಕೋರ್ಟ್​ ತಡೆ

| Updated By: ಸಾಧು ಶ್ರೀನಾಥ್​

Updated on: Dec 12, 2020 | 4:21 PM

ಚೆನ್ನೈನ ಹೊರ ವಲಯ ಮುತ್ತುಕಾಡು ಗ್ರಾಮದಲ್ಲಿರುವ ಆಸ್ತಿಯನ್ನು ಕಾರ್ತಿ ಹಾಗೂ ಅವರ ಪತ್ನಿ ಶ್ರೀನಿಧಿ 2014-15ರಲ್ಲಿ ಮಾರಾಟ ಮಾಡಿದ್ದರು. ಈ ವಿಚಾರವನ್ನು ಬಹಿರಂಗ ಮಾಡದ ಅವರ ವಿರುದ್ಧ ಐಟಿ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗಿತ್ತು.

ಕಾರ್ತಿ ಚಿದಂಬರಂಗೆ ರಿಲೀಫ್​; IT ಕಾನೂನು ಕ್ರಮಕ್ಕೆ  ಹೈಕೋರ್ಟ್​ ತಡೆ
ಚಿದಂಬರಂ- ಕಾರ್ತಿ ಚಿದಂಬರಂ
Follow us on

ಚೆನ್ನೈ: ದೊಡ್ಡ ಮೊತ್ತದಲ್ಲಿ ನಡೆಸಿದ್ದ ಹಣದ ವ್ಯವಹಾರವನ್ನು ಬಹಿರಂಗ ಪಡಿಸದ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ. ಚಿಂದಂಬರಂ ಅವರ ಮಗ ಕಾರ್ತಿ ಚಿಂದಂಬರಂಗೆ ತಾತ್ಕಾಲಿಕ ರಿಲೀಫ್​ ಸಿಕ್ಕಿದೆ. ಈ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ್ದ ಕಾನೂನು ಪ್ರಕ್ರಿಯೆಗೆ ಮದ್ರಾಸ್ ಹೈಕೋರ್ಟ್​ ತಡೆ ನೀಡಿದೆ.

ಚೆನ್ನೈನ ಹೊರ ವಲಯ ಮುತ್ತುಕಾಡು ಗ್ರಾಮದಲ್ಲಿರುವ ಆಸ್ತಿಯನ್ನು ಕಾರ್ತಿ ಹಾಗೂ ಅವರ ಪತ್ನಿ ಶ್ರೀನಿಧಿ 2014-15ರಲ್ಲಿ ಮಾರಾಟ ಮಾಡಿದ್ದರು. ಮಾರಾಟದ ನಂತರ ಕಾರ್ತಿ 6.38 ಕೋಟಿ ರೂಪಾಯಿ ಹಾಗೂ ಶ್ರೀನಿಧಿ 1.35 ಕೋಟಿ ರೂಪಾಯಿ ನಗದು ಪಡೆದಿದ್ದರು. ಆದರೆ, ಈ ವಿಚಾರವನ್ನು ಅವರು ಬಹಿರಂಗ ಪಡಿಸಿರಲಿಲ್ಲ ಮತ್ತು ಇದಕ್ಕೆ ತೆರಿಗೆ ಕೂಡ ಕಟ್ಟಿರಲಿಲ್ಲ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಕಾರ್ತಿ ಹಾಗೂ ಅವರ ಪತ್ನಿ ವಿರುದ್ಧ ಆದಾಯ ಬಹಿರಂಗ ಮಾಡದ ಆರೋಪ ಹೊರಿಸಿ ಕಾನೂನು ಕ್ರಮಕ್ಕೆ ಮುಂದಾಗಿತ್ತು. ಇದನ್ನು ಕೋರ್ಟ್​ನಲ್ಲಿ ಕಾರ್ತಿ ಹಾಗೂ ಅವರ ಪತ್ನಿ ಪ್ರಶ್ನೆ ಮಾಡಿದ್ದರು.

ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​, 2014-15ನೇ ಸಾಲಿನಲ್ಲಿ ಕಾರ್ತಿ ಮನೆ ಮಾರಾಟ ಮಾಡಿರಬಹುದು. ಆದರೆ, ಪ್ರಕರಣ ದಾಖಲಿಸುವ ಮೊದಲು ನೀವು ಪ್ರಾಥಮಿಕ ತನಿಖೆ ನಡೆಸಬೇಕು. ಆ ವರದಿ ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಬೇಕು. ಆದರೆ, ಹೀಗೆ ಮಾಡದೇ ಅವರ ವಿರುದ್ಧ ನೇರವಾಗಿ ಪ್ರಕರಣ ದಾಖಲು ಮಾಡುವುದು ಸರಿಯಲ್ಲ ಎಂದು ಕೋರ್ಟ್​ ಹೇಳಿದೆ.

ಮತ್ತೊಮ್ಮೆ ಈ ಬಗ್ಗೆ ಮೌಲ್ಯ ಮಾಪನ ಮಾಡಿ. ಆಗ ಸೂಕ್ತ ಮಾಹಿತಿ ದೊರೆತರೆ ನೀವು ಮುಂದುವರಿಯಬಹುದು ಎಂದು ಕೋರ್ಟ್​ ಹೇಳಿದೆ. ಈ ಮೂಲಕ ಕಾರ್ತಿಗೆ ತಾತ್ಕಾಲಿಕ ರಿಲೀಫ್​ ನೀಡಿದೆ.

ED ವಿರೋಧದ ನಡುವೆ ಚಿದಂಬರಂಗೆ ಸಿಕ್ತು ಜಾಮೀನು, ತಿಹಾರ್ ಜೈಲುವಾಸ ಅಂತ್ಯ