ಬಿಹಾರ: ಬಿಹಾರದ (Bihar) ಕಿಶನ್‌ಗಂಜ್ ಜಿಲ್ಲೆಯಲ್ಲಿ 7ನೇ ತರಗತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಬಿಹಾರ ಎಜುಕೇಶನ್ ಪ್ರಾಜೆಕ್ಟ್ ಕೌನ್ಸಿಲ್ ನಡೆಸಿದ ಸಮೀಕ್ಷೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕ ದೇಶ ಎಂದು ಹೇಳುವ ಮೂಲಕ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದ್ದಂತೆ ಬಿಹಾರದ ಸಿಎಂ ನಿತೀಶ್ ಕುಮಾರ್ (CM Nitish Kumar) ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇದೆಲ್ಲ ನಡೆಯುವುದು ಸೀಮಾಂಚಲ್‌ನಲ್ಲಿ ಮಾತ್ರ ಎಂದು ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಟೀಕಿಸಿದ್ದಾರೆ.
ಬಿಹಾರ ಸರ್ಕಾರವು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವೆಂದು ಪರಿಗಣಿಸುವುದಿಲ್ಲ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ. 7ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡಲಾದ ಪ್ರಶ್ನೆ ಪತ್ರಿಕೆಯಲ್ಲಿ ಈ ದೇಶಗಳ ಜನರನ್ನು ಏನೆಂದು ಕರೆಯುತ್ತಾರೆ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಅದರ ಕೆಳಗೆ ತಲಾ 2 ಅಂಕದಂತೆ 5 ಪ್ರಶ್ನೆಗಳನ್ನು ನೀಡಲಾಗಿತ್ತು. ಅದರಲ್ಲಿ ಚೀನಾ, ನೇಪಾಳ, ಇಂಗ್ಲೆಂಡ್ ಮತ್ತು ಭಾರತದೊಂದಿಗೆ ಕಾಶ್ಮೀರ ದೇಶದ ಜನರನ್ನು ಏನೆಂದು ಕರೆಯುತ್ತಾರೆ? ಎಂಬ ಆಯ್ಕೆಯನ್ನು ಸಹ ನೀಡಲಾಗಿತ್ತು. ಇದು ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: 9 ಜನರ ಸಾವಿಗೆ ಕಾರಣವಾದ ನರಭಕ್ಷಕ ಹುಲಿಯನ್ನು ಕೊಲ್ಲಲು ಬಿಹಾರ ಸರ್ಕಾರ ಆದೇಶ
ಇದಕ್ಕಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಡಾ. ಸಂಜಯ್ ಜೈಸ್ವಾಲ್ ಬಿಹಾರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಶುಕ್ರವಾರ ಸೀಮಾಂಚಲ್ ಪ್ರದೇಶದಾದ್ಯಂತ ಹಿಂದಿ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಈಗ ಈ 7ನೇ ತರಗತಿಯ ಮಕ್ಕಳಿಗೆ ನೇಪಾಳ, ಚೀನಾ, ಇಂಗ್ಲೆಂಡ್, ಹಿಂದೂಸ್ತಾನ್ ಮತ್ತು ಕಾಶ್ಮೀರದಲ್ಲಿ ಜನರನ್ನು ಏನು ಕರೆಯುತ್ತಾರೆ ಎಂದು ಕೇಳಲಾಗಿದೆ. ಬಿಹಾರ ಕಾಶ್ಮೀರವನ್ನು ಭಾರತದ ಭಾಗವೆಂದು ಒಪ್ಪಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.
ಬಿಹಾರ ಸರ್ಕಾರ ಮತ್ತು ಬಿಹಾರ ಸರ್ಕಾರದ ಸರ್ಕಾರಿ ಅಧಿಕಾರಿಗಳು ಕಾಶ್ಮೀರವನ್ನು ಭಾರತದ ಭಾಗವೆಂದು ಪರಿಗಣಿಸುವುದಿಲ್ಲ ಎಂಬುದು ಈ ಪ್ರಶ್ನೆಯಿಂದಲೇ ಸ್ಪಷ್ಟವಾಗಿದೆ ಎಂದು ಜೈಸ್ವಾಲ್ ಮಂಗಳವಾರ ತಮ್ಮ ಫೇಸ್‌ಬುಕ್ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ. ಚೀನಾ, ಇಂಗ್ಲೆಂಡ್, ಭಾರತ ಮತ್ತು ನೇಪಾಳ ಒಂದೇ ದೇಶವಾಗಿರುವಂತೆಯೇ ಕಾಶ್ಮೀರವೂ ಒಂದು ರಾಷ್ಟ್ರ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಡುವ 7ನೇ ತರಗತಿಯ ಬಿಹಾರ ಶಿಕ್ಷಣ ಯೋಜನಾ ಮಂಡಳಿಯ ಪ್ರಶ್ನಾವಳಿಯೇ ಇದಕ್ಕೆ ಸಾಕ್ಷಿ ಎಂದು ಅವರು ಟೀಕಿಸಿದ್ದಾರೆ.