ಕೇದಾರನಾಥ ದೇವಾಲಯದ ಗರ್ಭಗುಡಿಯ ಗೋಡೆಗಳಿಗೆ ಚಿನ್ನದ ಲೇಪನಕ್ಕೆ ಅರ್ಚಕರ ವಿರೋಧ

| Updated By: ವಿವೇಕ ಬಿರಾದಾರ

Updated on: Sep 17, 2022 | 11:08 PM

ಹಿಂದುಗಳ ಪವಿತ್ರ ಯಾತ್ರಾ ಸ್ಥಳವಾದ ಕೇದಾರನಾಥ ದೇವಾಲಯದ ಗರ್ಭಗುಡಿಯೊಳಗಿನ ಗೋಡೆಗಳಿಗೆ ಚಿನ್ನದ ಲೇಪನಕ್ಕೆ ಅರ್ಚಕರ ಒಂದು ವರ್ಗ ವಿರೋಧಿಸುತ್ತಿದೆ.

ಕೇದಾರನಾಥ ದೇವಾಲಯದ ಗರ್ಭಗುಡಿಯ ಗೋಡೆಗಳಿಗೆ ಚಿನ್ನದ ಲೇಪನಕ್ಕೆ ಅರ್ಚಕರ ವಿರೋಧ
ಕೇದಾರನಾಥ
Follow us on

ಉತ್ತರಕಾಂಡ: ಹಿಂದುಗಳ ಪವಿತ್ರ ಯಾತ್ರಾ ಸ್ಥಳವಾದ ಕೇದಾರನಾಥ (Kedarnath) ದೇವಾಲಯದ ಗರ್ಭಗುಡಿಯೊಳಗಿನ ಗೋಡೆಗಳಿಗೆ ಚಿನ್ನದ ಲೇಪನಕ್ಕೆ ಅರ್ಚಕರ ಒಂದು ವರ್ಗ ವಿರೋಧಿಸುತ್ತಿದೆ. ಗರ್ಭಗುಡಿಯೊಳಗಿನ ಗೋಡೆಗಳಿಗೆ ಚಿನ್ನದ ಲೇಪನಕ್ಕೆ ದೊಡ್ಡ ಡ್ರಿಲ್ಲಿಂಗ್ ಯಂತ್ರಗಳನ್ನು ಬಳಸುವುದರಿಂದ ದೇವಾಲಯದ ಗೋಡೆಗಳಿಗೆ ಹಾನಿಯಾಗುತ್ತಿದೆ. ಇದರಿಂದ ದೇವಾಲಯ ಶತಮಾನಗಳಷ್ಟು ಹಳೆಯದಾದ ಸೊಬಗನ್ನು ಕಳೆದುಕೊಳ್ಳುತ್ತದೆ ಎಂದು ತೀರ್ಥ ಪುರೋಹಿತರು ಹೇಳುತ್ತಿದ್ದಾರೆ ಎಂದು ಇಂಡಿಯಾ ಡಾಟ್​ ಕಾಮ್​ ವರದಿ ಮಾಡಿದೆ.

ಮಹಾರಾಷ್ಟ್ರದ ಶಿವಭಕ್ತರೊಬ್ಬರು ಸ್ವಯಂಪ್ರೇರಿತರಾಗಿ ದೇವಸ್ಥಾನದ ಗರ್ಭಗುಡಿಯೊಳಗೆ ಚಿನ್ನದ ಲೇಪನ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ಮತ್ತು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಚಿನ್ನದ ಲೇಪನದಿಂದ ದೇವಾಲಯದ ಗೋಡೆಗಳಿಗೆ ಹಾನಿಯಾಗುತ್ತಿದೆ. ಈ ಉದ್ದೇಶಕ್ಕಾಗಿ ದೊಡ್ಡ ಡ್ರಿಲ್ಲಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ. ದೇವಸ್ಥಾನದ ಶತಮಾನಗಳ ಹಳೆಯ ಸಂಪ್ರದಾಯಗಳನ್ನು ಈ ರೀತಿ ಹಾಳು ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಸಂತೋಷ್ ತ್ರಿವೇದಿ ಎಂಬ ಯಾತ್ರಾರ್ಥಿ ಕೇದಾರನಾಥದಲ್ಲಿ ಹೇಳಿದ್ದಾರೆ.

ಆದರೆ, ಪ್ರಸ್ತುತ ದೇವಸ್ಥಾನದ ಗರ್ಭಗುಡಿಯೊಳಗೆ ನಡೆಯುತ್ತಿರುವ ಜೀರ್ಣೋದ್ಧಾರ ಕಾರ್ಯಕ್ಕೆ ಕೆಲವು ಹಿರಿಯ ಅರ್ಚಕರು ಒಲವು ತೋರಿದ್ದರಿಂದ ಅರ್ಚಕರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ದೇವಸ್ಥಾನದ ಹಿರಿಯ ಅರ್ಚಕ ಶ್ರೀನಿವಾಸ ಪೋಸ್ತಿ ಮತ್ತು ಕೇದಾರ ಸಭಾದ ಮಾಜಿ ಅಧ್ಯಕ್ಷ ಮಹೇಶ ಬಗವಾಡಿ ಮಾತನಾಡಿ, ದೇವಸ್ಥಾನವು ಸನಾತನ ನಂಬಿಕೆಯ ಪ್ರಮುಖ ಕೇಂದ್ರವಾಗಿದೆ ಮತ್ತು ಅದರ ಗೋಡೆಗಳಿಗೆ ಚಿನ್ನದ ಲೇಪನವು ಹಿಂದೂ ನಂಬಿಕೆ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿದೆ ಎಂದು ಹೇಳಿದ್ದಾರೆ.

ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್ ಮಾತನಾಡಿ, ದೇವಾಲಯದ ಗೋಡೆಗಳಿಗೆ ಚಿನ್ನದ ಲೇಪನವನ್ನು ವಿರೋಧಿಸುವುದು ಸಮರ್ಥನೀಯವಲ್ಲ, ಏಕೆಂದರೆ ಮೂಲ ರಚನೆಗೆ ಧಕ್ಕೆಯಾಗದಂತೆ ಸಂಪ್ರದಾಯಗಳಿಗೆ ಅನುಗುಣವಾಗಿ ಇದನ್ನು ಮಾಡಲಾಗುತ್ತಿದೆ. ಕಾಲಕಾಲಕ್ಕೆ ದೇವಾಲಯದ ಜೀರ್ಣೋದ್ಧಾರ ಮತ್ತು ಸುಂದರೀಕರಣವು ಸಾಮಾನ್ಯ ಅಭ್ಯಾಸವಾಗಿದೆ. ಬೆರಳೆಣಿಕೆಯ ಪುರೋಹಿತರು ಇದನ್ನು ವಿರೋಧಿಸಬಹುದು ಆದರೆ ಅವರ ಪ್ರಾತಿನಿಧಿಕ ಸಂಸ್ಥೆಗಳು ಅದನ್ನು ಎಂದಿಗೂ ವಿರೋಧಿಸಲಿಲ್ಲ ಎಂದು ಹೇಳಿದರು.

ಇದು “ವಿರೋಧದ ಪ್ರಚಾರ” ದ ಭಾಗ. ದೇಶದಾದ್ಯಂತ ಇರುವ ಹಿಂದೂ ದೇವಾಲಯಗಳು ಭವ್ಯತೆಯ ಸಂಕೇತಗಳಾಗಿವೆ. ಹಿಂದೂ ದೇವತೆಗಳನ್ನು ಚಿನ್ನ ಮತ್ತು ಆಭರಣಗಳಿಂದ ಅಲಂಕರಿಸುವುದು ನಮ್ಮ ಸಂಪ್ರದಾಯಗಳ ಭಾಗವಾಗಿದೆ. ದೇವಾಲಯದ ಗೋಡೆಗಳಿಗೆ ಚಿನ್ನದ ಲೇಪನ ಮಾಡುವುದು ಯಾವುದೇ ತಪ್ಪಿಲ್ಲ ಎಂದು ಬಿಕೆಟಿಸಿ ಅಧ್ಯಕ್ಷ ಅಜಯ್ ಹೇಳಿದರು. ದೇವಾಲಯದ ಗೋಡೆಗಳಿಗೆ ಚಿನ್ನದ ಲೇಪನ ಮಾಡುವ ಮೊದಲು ಬಿಕೆಟಿಸಿ ರಾಜ್ಯ ಸರ್ಕಾರದಿಂದ ಸೂಕ್ತ ಅನುಮತಿಯನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:08 pm, Sat, 17 September 22