ತಿರುವನಂತಪುರಂ: ಶಾರ್ಜಾದಿಂದ ತಿರುವನಂತಪುರಂಗೆ ಸಹ ಪೈಲಟ್ ಆಗಿ ಏರ್ ಅರೇಬಿಯಾ ಜಿ 9 449 ವಿಮಾನವನ್ನು ಹಾರಾಟ ನಡೆಸಬೇಕೆಂದು ತಿಳಿದಾಗ 23 ವರ್ಷದ ಜೆನಿ ಜೆರೋಮ್‌ಗೆ ಕನಸು ನನಸಾದ ಗಳಿಗೆ . ತಿರುವನಂತಪುರಂನ ಕರಾವಳಿ ಗ್ರಾಮವಾದ ಕೊಚ್ಚುತ್ತುರ ಮೂಲದ ಜೆನಿ ಪ್ರಸ್ತುತ ಅಜ್ಮಾನ್ ನಲ್ಲಿ ತಮ್ಮ ಹೆತ್ತವರೊಂದಿಗೆ ವಾಸವಾಗಿದ್ದಾರೆ. ವಿಮಾನ ಹಾರಾಟ ನಡೆಸಬೇಕೆಂಬುದು ಜೆನಿ ಅವರ ಆಸೆಯಾಗಿತ್ತು. ಕೊನೆಗೂ ಸಹ ಪೈಲಟ್ ಆಗಿ ತನ್ನ ಊರು ತಿರುವನಂತಪುರಂಗೆ ಬಂದಾಗ ನಾಡಿನ ಜನರು ಪ್ರೀತಿಯಿಂದ ಬರ ಮಾಡಿಕೊಂಡರು. ಸಾಮಾಜಿಕ ಮಾಧ್ಯಮಗಳಲ್ಲಿ ಜೆನಿ ಅವರ ಕನಸು ನನಸಾಗಿದ್ದಕ್ಕೆ ಮೆಚ್ಚುಗೆಯ ಸುರಿಮಳೆಯಾಗಿದೆ.
ತಿರುವನಂತಪುರಂ ಸಂಸದ ಮತ್ತು ಕಾಂಗ್ರೆಸ್ ನೇತಾರ ಶಶಿ ತರೂರ್ ಜೆನಿ ಅವರಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದು, ಅವಳು ಇಂದಿನ @airarabiagroup ವಿಮಾನವನ್ನು ಶಾರ್ಜಾದಿಂದ ತಿರುವನಂತಪುರಂಗೆ ಹಾರಿಸಿದ್ದಾರೆ. ಇದು ಒಂದು ಸಣ್ಣ ಮೀನುಗಾರಿಕಾ ಕುಗ್ರಾಮದಿಂದ ವಾಣಿಜ್ಯ ಪೈಲಟ್ ಆಗಬೇಕೆಂಬ ಹುಡುಗಿಯ ಬಾಲ್ಯದ ಕನಸು ನನಸಾದ ಕ್ಷಣ. ಇದು ನಿಜವಾದ ಸ್ಫೂರ್ತಿ ಎಂದಿದ್ದಾರೆ.
Congratulations to Jeni Jerome from Tvm’s Kochuthura on her maiden flight as co-pilot. When she flies today’s @airarabiagroup flight SHJ to TRV, it’s the realisation of a childhood dream of a girl from a small fishing hamlet to be a commercial pilot. A real inspiration! pic.twitter.com/0pJmXF2hoc
— Shashi Tharoor (@ShashiTharoor) May 22, 2021
ಜೆನಿ ಯಾವಾಗಲೂ ವಿಮಾನ ಹಾರಾಟವನ್ನು ಪ್ರೀತಿಸುತ್ತಿದ್ದರು. ಅವಳ ಬಾಲ್ಯದಿಂದ ಅವಳು ಕಂಡ ಕನಸು ಅದು. ವಾಸ್ತವವಾಗಿ, ಆಕೆಯ ತಂದೆ ಜೆರೋಮ್ ಕೂಡಾ ವಿಮಾನ ಹಾರಾಟದ ಬಗ್ಗೆ ಅಪಾರ ಒಲವುಳ್ಳವರಾಗಿದ್ದರು .ಅವರ ಕನಸು ಕೂಡಾ ಜೆನಿಯದ್ದೇ ಆಗಿತ್ತು ಎಂದು ಜೆನಿ ಅವರ ಸೋದರಸಂಬಂಧಿ ಶೆರಿನ್ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಜೆನಿಯ ಅಪ್ಪ ಜೆರೋಮ್ ಬ್ರಿಟಿಷ್ ಕಂಪನಿಯ ಲ್ಯಾಂಪ್ರೆಲ್ ನಲ್ಲಿ ಫ್ಯಾಬ್ರಿಕೇಶನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಾರೆ. ಪೋಷಕರು, ಜೆನಿ ಮತ್ತು ಅವಳ ಸಹೋದರ ಜೆಬಿ ಇಬ್ಬರೂ ಕಳೆದ 25 ವರ್ಷಗಳಿಂದ ಅಜ್ಮಾನ್ ನಲ್ಲಿಯೇ ನೆಲೆಸಿದ್ದಾರೆ. ತನ್ನ 12 ನೇ ಪರೀಕ್ಷೆಯ ನಂತರ, ಜೆನಿ ಏವಿಯೇಷನ್ ಅಕಾಡೆಮಿಗೆ ಸೇರಿದ್ದರು.
ಇದೀಗ ತರೂರ್ ಅವರ ಟ್ವೀಟ್ ವೈರಲ್ ಆಗಿದ್ದು, ಜೆನಿ ಅವರ ಸಾಧನೆಗಳಿಗಾಗಿ ಅನೇಕ ಜನರು ಅಭಿನಂದಿಸಿದ್ದಾರೆ.
ಜೆನಿಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿನಂದನೆ
ಕೇರಳದ ಹೆಮ್ಮೆಯಾಗಿ ಮಾರ್ಪಟ್ಟ ಜೆನಿ ಜೆರೋಮ್‌ಗೆ ಅಭಿನಂದನೆಗಳು. ತಿರುವನಂತಪುರಂ ಜಿಲ್ಲೆಯ ಕರಾವಳಿ ಹಳ್ಳಿಯಾದ ಕೊಚ್ಚುತುರಾ ಮೂಲದ ಜೆನಿ ಕೇರಳದ ಹೆಮ್ಮೆಯಾಗಿದ್ದಾರೆ. ಪರಿಸ್ಥಿತಿಗಳೊಂದಿಗದೆ ಹೋರಾಡಿ ತನ್ನ ಕನಸನ್ನು ನನಸಾಗಿಸಿದ ಜೆನಿಯ ಜೀವನ ಮಹಿಳೆಯರಿಗೆ ಮತ್ತು ಸಾಮಾನ್ಯ ಜನರಿಗೆ ದೊಡ್ಡ ಪ್ರೇರಣೆಯಾಗಿದೆ. ಇದು ಲಿಂಗ ಸಮಾನತೆಯ ಸಾಮಾಜಿಕ ಅರಿವನ್ನು ಸಹ ಸೃಷ್ಟಿಸುತ್ತದೆ. ಜೆನಿಯ ಆಶಯಗಳನ್ನು ಬೆಂಬಲಿಸಿದ ಕುಟುಂಬವು ಸಮುದಾಯಕ್ಕೆ ಆದರ್ಶಪ್ರಾಯವಾಗಿದೆ. ಬಾಲಕಿಯರಿಗೆ ಬೆಂಬಲ ನೀಡುವುದಕ್ಕೆ ಒಟ್ಟಾರೆ ಸಮುದಾಯ ಸಿದ್ಧರಾಗಿರಬೇಕು. ಜೆನಿ ಇನ್ನೂ ಹೆಚ್ಚಿನ ಸಾಧೆನೆಗೈಯ್ಯಲಿ ಎಂದು ನಾನು ಪ್ರಾಮಾಣಿಕವಾಗಿ ನಾನು ಹಾರೈಸುತ್ತೇನೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೇಸ್ಬುಕ್ ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಕೆ.ಕೆ ಶೈಲಜಾ ನಿರ್ವಹಿಸಿದ್ದ ಕೇರಳದ ಆರೋಗ್ಯ ಸಚಿವರ ಸ್ಥಾನಕ್ಕೆ ಮಾಜಿ ಪತ್ರಕರ್ತೆ ವೀಣಾ ಜಾರ್ಜ್
Published On - 1:23 pm, Mon, 24 May 21