ತಿರುವನಂತಪುರಂ: ತಿರುವನಂತಪುರಂನ ನೇಮಂ ಚುನಾವಣಾ ಕ್ಷೇತ್ರ ಸೇರಿದಂತೆ ಇತರ ಚುನಾವಣಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಪಕ್ಷ ನಿರ್ಧಾರ ಕೈಗೊಂಡಿದ್ದು, ಭಾನುವಾರ ಮಧ್ಯಾಹ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ನೇಮಂ ಚುನಾವಣಾ ಕ್ಷೇತ್ರದಲ್ಲಿ ಕೆ. ಮುರಳೀಧರನ್ ಸ್ಪರ್ಧೆಗಿಳಿಯುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಶನಿವಾರ ಮುರಳೀಧರನ್ ಜತೆ ಚರ್ಚೆ ನಡೆಸಿದೆ. ಇದೀಗ ಅಭ್ಯರ್ಥಿಗಳ ಪಟ್ಟಿಯನ್ನು ಸೋನಿಯಾ ಗಾಂಧಿ ಅವರಿಗೆ ಕಳುಹಿಸಿಕೊಟ್ಟಿದ್ದು, ಮಧ್ಯಾಹ್ನ ಅಧಿಕೃತ ಘೋಷಣೆ ಆಗಲಿದೆ. ಮುರಳೀಧರನ್ ಅವರ ಸ್ಪರ್ಧೆಯ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ನೇಮಂನಲ್ಲಿ ಮುರಳೀಧರ್ ಸ್ಪರ್ಧೆಗಿಳಿದರೆ ವಡಗರ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎಂಬುದಕ್ಕೆ ಸದ್ಯ ಉತ್ತರ ಸಿಕ್ಕಿಲ್ಲ.
ಕೊಲ್ಲಂನಲ್ಲಿ ಡಿಸಿಸಿ ಅಧ್ಯಕ್ಷೆ ಬಿಂದು ಕೃಷ್ಣ ಕಣಕ್ಕಿಳಿಯಲಿದ್ದಾರೆ. ವಿಷ್ಣುನಾಥ್ ಕುಂಡರದಲ್ಲಿ ಸ್ಪರ್ಧಿಸಲಿದ್ದಾರೆ. ತೃಪ್ಪೂಣಿತ್ತುರದಲ್ಲಿ ಮಾಜಿ ಸಚಿವ ಕೆ. ಬಾಬು ಸ್ಪರ್ಧಿಸಲಿದ್ದು, ಈ ಬಗ್ಗೆ ತನಗೆ ಸೂಚನೆ ಸಿಕ್ಕಿದೆ ಎಂದು ಮಾಧ್ಯಮದವರಲ್ಲಿ ಹೇಳಿದ್ದಾರೆ. ವಟ್ಟಿಯೂರ್ ಕಾವ್ ಕೇತ್ರದಲ್ಲಿ ಕೆ.ಪಿ.ಅನಿಲ್ ಕುಮಾರ್, ಆರನ್ಮುಳದಲ್ಲಿ ಕೆ.ಶಿವದಾಸನ್ ನಾಯರ್ ಮತ್ತು ಪುದುಪ್ಪಳ್ಳಿಯಲ್ಲಿ ಉಮ್ಮನ್ ಚಾಂಡಿ ಸ್ಪರ್ಧಿಸಲಿದ್ದಾರೆ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.
ನೇಮಂನಲ್ಲಿ ಯಾರು? ಕಾಂಗ್ರೆಸ್ ನಲ್ಲಿ ಹೈಡ್ರಾಮಾ
ನೇಮಂ ಚುನಾವಣಾ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎಂಬುದರ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಶನಿವಾರ ಹೈ ಡ್ರಾಮಾ ನಡೆದಿದೆ. ಸಂಸದ ಕೆ.ಮುರಳೀಧರನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಕರೆದಿದ್ದು, ನೇಮಂನಲ್ಲಿ ಸ್ಪರ್ಧೆಗಿಳಿಯುವ ಅಭ್ಯರ್ಥಿ ಮುರಳೀಧರನ್ ಎಂಬುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಪ್ರಕಟಿಸಲಿದೆ.
ಉಮ್ಮನ್ ಚಾಂಡಿ ಮತ್ತು ರಮೇಶ್ ಚೆನ್ನಿತ್ತಲ ಅವರು ನನಗೆ ಕರೆ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಹೇಳಿರುವುದಾಗಿ ಭಾನುವಾರ ಬೆಳಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮುರಳೀಧರನ್ ಹೇಳಿದ್ದಾರೆ. ನೇಮಂ ಅದ್ಭುತ ಸ್ಥಳವೇನೂ ಅಲ್ಲ, ಮೈತ್ರಿ ಪಕ್ಷದ ಅಭ್ಯರ್ಥಿಗೆ ಸ್ಪರ್ಧಿಸಲು ಅವಕಾಶ ಕೊಟ್ಟ ಕಾರಣ ಕಳೆದ ವರ್ಷ ಈ ಸೀಟು ನಷ್ಟವಾಗಿದ್ದು. ಈ ಬಾರಿ ನೇಮಂನಲ್ಲಿ ಸ್ಪರ್ಧಿಸಿದರೆ ಗೆಲ್ಲುತ್ತೇನೆ. ಸಿಪಿಎಂ- ಬಿಜೆಪಿ ನಡುವಿನ ಮೈತ್ರಿಯನ್ನು ಇಲ್ಲಿ ನಾನು ತೋರಿಸುತ್ತೇನೆ ಎಂದು ಮುರಳೀಧರನ್ ಹೇಳಿದ್ದಾರೆ.
ಸಂಸದರನ್ನು ಈ ಬಾರಿ ವಿಧಾನಸಭಾ ಚುನಾವಣೆ ಕಣಕ್ಕಿಳಿಸುವುದಿಲ್ಲ ಎಂದು ಹೈಕಮಾಂಡ್ ನಿರ್ಧರಿಸಿತ್ತು. ಆದರೆ ಮುರಳೀಧರನ್ ಗೆ ಅವಕಾಶ ನೀಡಬೇಕು ಎಂದು ರಾಜ್ಯದ ನಾಯಕರು ಹೈಕಮಾಂಡ್ ಗೆ ಒತ್ತಾಯಿಸಿದ್ದರು.
ಸಿಪಿಎಂ ಮತ್ತು ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣವಾದ ನೇಮಂ
ಕೇರಳದ ಆಡಳಿತಾರೂಢ ಎಲ್ಡಿಎಫ್ ಮತ್ತು ವಿಪಕ್ಷ ಕಾಂಗ್ರೆಸ್ಗೆ ನೇಮಂ ಪ್ರತಿಷ್ಠೆಯ ಕಣವಾಗಿದೆ . ರಾಜ್ಯದಲ್ಲಿ ಬಿಜೆಪಿಯ ಶಕ್ತಿಕೇಂದ್ರವಾಗಿರುವ ಚುನಾವಣಾ ಕ್ಷೇತ್ರಗಳಾಗಿವೆ ನೇಮಂ, ಕಳಕ್ಕೂಟ್ಟಂಂ, ವಟ್ಟಿಯೂರ್ ಕಾವ್ .ಈ ಪೈಕಿ ನೇಮಂನಲ್ಲಿ ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂಗಿಂತ ಹೆಚ್ಚು ಮತಗಳನ್ನು ಬಿಜೆಪಿಗಳಿಸಿತ್ತು. ನೇಮಂನಲ್ಲಿ ಬಿಜೆಪಿ ವಿರುದ್ಧ ಗೆಲುವು ಸಾಧಿಸಲು ಸಿಪಿಎಂ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದ್ದು, ಕಾಂಗ್ರೆಸ್ ಪಕ್ಷ ಅಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿತ್ತು. ನೇಮಂನಲ್ಲಿ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದು ಹೈಕಮಾಂಡ್ ಆದೇಶಿಸಿತ್ತು. ಹಾಗಾಗಿ ನೇಮಂನಲ್ಲಿ ಸ್ಪರ್ಧಿಸಲು ಉಮ್ಮನ್ ಚಾಂಡಿ, ರಮೇಶ್ ಚೆನ್ನಿತ್ತಲ ಅವರ ಹೆಸರು ಕೇಳಿ ಬಂದಿತ್ತು. ನೇಮಂನಲ್ಲಿ ಉಮ್ಮನ್ ಚಾಂಡಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಶನಿವಾರ ಹರಿದಾಡಿದ್ದು, ಇದು ಕೇಳಿ ಉಮ್ಮನ್ ಚಾಂಡಿ ಬೆಂಬಲಿಗರು ತಮ್ಮ ನಾಯಕ ಪುದುಪಳ್ಳಿಯಲ್ಲೇ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದಿದ್ದರು. ಬೆಂಬಲಿಗರ ಮನವಿಗೆ ಮನ್ನಣೆ ನೀಡಿ ಪುದುಪಳ್ಳಿಯಲ್ಲೇ ಸ್ಪರ್ಧಿಸಲು ಹೈಕಮಾಂಡ್ ಸೂಚಿಸಿದೆ ಎಂದು ಉಮ್ಮನ್ ಚಾಂಡಿ ಹೇಳಿದ್ದಾರೆ.
ಇದನ್ನೂ ಓದಿ: ಕೇರಳ ಚುನಾವಣೆಯಲ್ಲಿ ಮುಸ್ಲಿಂ ಲೀಗ್ನಿಂದ ಸ್ಪರ್ಧಿಸಲಿದ್ದಾರೆ ಮಹಿಳಾ ಅಭ್ಯರ್ಥಿ; 25 ವರ್ಷಗಳ ನಂತರ ಸಿಕ್ಕಿತು ಅವಕಾಶ
Kerala Assembly Elections 2021: ಕೇರಳದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು 35 ಸೀಟುಗಳು ಸಾಕು: ಕೆ.ಸುರೇಂದ್ರನ್
Published On - 11:24 am, Sun, 14 March 21