ತಿರುವನಂತಪುರ: ಏಪ್ರಿಲ್ 6ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ (UDF) ಇಂದು (ಮಾರ್ಚ್ 20) ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ವಿಶೇಷ ಎಂಬಂತೆ, ಪ್ರಣಾಳಿಕೆಯ ಹಲವು ಅಂಶಗಳೊಂದಿಗೆ ಯುಡಿಎಫ್, ‘ಸಂತೋಷದ ಸಚಿವಾಲಯ’ (Ministry of Happiness) ರಚಿಸುವುದಾಗಿ ಹೇಳಿಕೆ ನೀಡಿದೆ.
ಉದ್ಯಮಗಳಿಗೆ ಪ್ರೋತ್ಸಾಹ ನಿಟ್ಟಿನಲ್ಲಿಯೂ ಕಾಂಗ್ರೆಸ್ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವುದಾಗಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ಹೂಡಿಕೆದಾರರಿಗೆ ರಕ್ಷಣೆ ನೀಡುವ ಸಲುವಾಗಿ Investor Protection Act ತರುವುದಾಗಿ, ಜೊತೆಗೆ, ಯಾವುದೇ ವಿಧದ ಸ್ಟ್ರೈಕ್ಗಳು ಹಾಗೂ ಒತ್ತಾಯಪೂರ್ವಕವಾಗಿ ವ್ಯವಹಾರ ಮುಚ್ಚಿಸುವುದನ್ನು ನಿರ್ಬಂಧಿಸುವುದಾಗಿ ತಿಳಿಸಿದೆ.
ಯುಡಿಎಫ್ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್, ಇದು ಒಂದು ಸಂಯೋಜಿತ ಪ್ರಣಾಳಿಕೆಯಾಗಿದೆ. ವಾಣಿಜ್ಯ ವ್ಯವಹಾರಗಳಿಗೆ ನಾವು ತೆರೆದುಕೊಂಡಿದ್ದೇವೆ. ಹೂಡಿಕೆದಾರರಿಗೆ ರಕ್ಷಣೆಯನ್ನೂ ನೀಡುತ್ತೇವೆ. ಸಂತೋಷದ ಸಚಿವಾಲಯವನ್ನೂ ರಚಿಸುತ್ತೇವೆ ಎಂದು ಹೇಳಿದ್ದಾರೆ.
ಪ್ರಸ್ತುತ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಕೇರಳದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದೆ. ತನ್ನ ಪ್ರಣಾಳಿಕೆಯನ್ನು ಕಾಂಗ್ರೆಸ್, ಜನರ ಪ್ರಣಾಳಿಕೆ ಎಂದು ಕರೆದುಕೊಂಡಿದೆ. ಯುಡಿಎಫ್ ಚುನಾಯಿತವಾದರೆ, ಅರ್ಹ ಗೃಹಿಣಿಯರಿಗೆ ಪ್ರತಿ ತಿಂಗಳು ₹2,000 ಪಿಂಚಣಿ, 5 ಕೆ.ಜಿ. ಉಚಿತ ಅಕ್ಕಿ ಹಾಗೂ ಬಡವರಿಗೆ 5 ಲಕ್ಷ ಮನೆ ನಿರ್ಮಿಸಿ ಕೊಡುವುದಾಗಿ ತಿಳಿಸಿದೆ.
ಶಬರಿಮಲೆ ಸ್ವಾಮಿ ಅಯ್ಯಪ್ಪನ ಕ್ಷೇತ್ರದ ಸಂಪ್ರದಾಯಗಳನ್ನು ರಕ್ಷಿಸಲು ನೂತನ ಕಾನೂನನ್ನು ಜಾರಿಗೊಳಿಸುವುದಾಗಿ ಮತ್ತು ರಾಜಸ್ಥಾನದ ಮಾದರಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಇಲಾಖೆಯನ್ನು ತರುವುದಾಗಿ ಯುಡಿಎಫ್ ಭರವಸೆ ನೀಡಿದೆ.
ಮಹಿಳಾ ಮತದಾರರನ್ನು ಕೇಂದ್ರೀಕರಿಸಿ, ಸರ್ಕಾರಿ ನೌಕರಿ ಪರೀಕ್ಷೆಗಳಿಗೆ ಹಾಜರಾಗುವ ತಾಯಂದಿರಿಗೆ ಎರಡು ವರ್ಷಗಳ ಹೆಚ್ಚುವರಿ ಅವಕಾಶ ನೀಡುವುದಾಗಿ ಹೇಳಿದೆ. Nyay ಯೋಜನೆ ಅಡಿಯಲ್ಲಿ ಒಳಗೊಳ್ಳದ 40ರಿಂದ 60 ವರ್ಷದ ಗೃಹಿಣಿಯರಿಗೆ ಮಾಸಿಕ 2000 ರೂ. ಪಿಂಚಣಿ ನೀಡುವುದಾಗಿ ಘೋಷಿಸಿದೆ. ಕೊವಿಡ್-19ಗೆ ತುತ್ತಾದವರಿಗೆ ಉಚಿತ ಆಹಾರ ಕಿಟ್ ನೀಡುವ ವಿಶ್ವಾಸವನ್ನು ಕೂಡ ಕಾಂಗ್ರೆಸ್ ನೀಡಿದೆ.
Congress-led UDF releases election manifesto in Kerala’s Thiruvananthapuram
It’s an integrated manifesto. We’re open to businesses, there’ll be Investor Protection Act. Strikes, forced closures will be banned. There’ll be Ministry of Happiness as well: Congress MP Shashi Tharoor pic.twitter.com/v5GzBmzpxM
— ANI (@ANI) March 20, 2021
140 ವಿಧಾನಸಭಾ ಕ್ಷೇತ್ರಗಳಿಗೆ ಕೇರಳದಲ್ಲಿ ಏಪ್ರಿಲ್ 6ರಂದು ಮತದಾನ ನಡೆಯಲಿದೆ. ಮತ ಎಣಿಕೆ ಪ್ರಕ್ರಿಯೆಯು ಮೇ 2ರಂದು ನಡೆಯಲಿದೆ.
Published On - 3:35 pm, Sat, 20 March 21