ತಿರುವನಂತಪುರ: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಹೇಳಿಕೆ ನೀಡುವಂತೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರನ್ನು ಒತ್ತಾಯಿಸಲಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳ ವಿರುದ್ಧವೇ ಕೇರಳ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಸ್ವಪ್ನಾ ಸುರೇಶ್ ಅವರದು ಎನ್ನಲಾಗಿರುವ ಧ್ವನಿ ತುಣುಕೊಂದನ್ನು ತನಿಖೆ ನಡೆಸುತ್ತಿರುವ ಕ್ರೈಂ ವಿಭಾಗದ ಪೊಲೀಸರ ವರದಿ ಆಧರಿಸಿ ಎರಡು ದಿನಗಳ ಹಿಂದೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪ್ರಕರಣ ಏನಾದರೂ ಇದ್ದರೆ ಅದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ. ಪೊಲೀಸರು ದಾಖಲಿಸಿರುವ ಎಫ್ಐಆರ್ನ ವಿವರಗಳಂತೆ, ಕಳೆದ ವರ್ಷದ ಆಗಸ್ಟ್ 12 ಮತ್ತು 13ರಂದು ಸ್ವಪ್ನಾ ಸುರೇಶ್ರನ್ನು ಪ್ರಶ್ನಿಸಿರುವ ಜಾರಿ ನಿರ್ದೇಶನಾಲಯ, ಮುಖ್ಯಮಂತ್ರಿ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸಿದೆ. ಸುಳ್ಳು ಸಾಕ್ಷಿ ಸಿದ್ಧಪಡಿಸಲು ಜಾರಿ ನಿರ್ದೇಶನಾಲಯ ಹೀಗೆ ಮಾಡಿದೆ ಎಂದು ಹೇಳಲಾಗಿದೆ.
ಜಾರಿ ನಿರ್ದೇಶನಾಲಯ ವಿರುದ್ಧ ಸೆಕ್ಷನ್ 120-ಬಿ, 167, 192, 195-ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸದ್ಯ, 14.82 ಕೋಟಿ ಬೆಲೆಬಾಳುವ 30 ಕೆಜಿ ಚಿನ್ನ ಕಳ್ಳ ಸಾಗಾಣಿಕೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸ್ವಪ್ನಾ ಸುರೇಶ್ ಕೇರಳದಲ್ಲಿನ ಯುಎಇ ರಾಯಭಾರ ಕಚೇರಿಯ ಮಾಜಿ ಉದ್ಯೋಗಿಯಾಗಿದ್ದರು. ಕಳೆದ ಕೆಲವು ತಿಂಗಳ ಹಿಂದೆ ಹಂಚಿಕೆಯಾಗಿದ್ದ ಸ್ವಪ್ನಾ ಸುರೇಶ್ಗೆ ಸಂಬಂಧಿಸಿದ್ದು ಎನ್ನಲಾಗಿರುವ ಧ್ವನಿ ತುಣುಕಿನಲ್ಲಿ, ಇಡಿ ಅಧಿಕಾರಿಗಳು ಮುಖ್ಯಮಂತ್ರಿ ಹಾಗೂ ಇತರ ಕೆಲವು ಸಚಿವರ ವಿರುದ್ಧ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಅಷ್ಟೇ ಅಲ್ಲದೆ, ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದ ವೇಳೆ ಸ್ವಪ್ನಾ ಸುರೇಶ್ ಜೊತೆಗಿದ್ದ ಇಬ್ಬರು ಮಹಿಳಾ ಪೊಲೀಸರು ಕೂಡ, ವಿಜಯನ್ ಹೆಸರು ಹೇಳುವಂತೆ ಸ್ವಪ್ನಾರನ್ನು ಒತ್ತಾಯಿಸಿದ್ದನ್ನು ಕೇಳಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಜಾರಿ ನಿರ್ದೇಶನಾಲಯ ಜೊತೆಗೆ ರಾಷ್ಟ್ರೀಯ ತನಿಖಾ ದಳ (NIA) ಹಾಗೂ ಕಸ್ಟಮ್ಸ್ ಅಧಿಕಾರಿಗಳು ಕೂಡ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಕೇಂದ್ರದ ಏಜೆನ್ಸಿಗಳು ತಮ್ಮ ರಾಜ್ಯ ಸರ್ಕಾರವನ್ನು ಗುರಿಯಾಗಿಸಿ ಹೀಗೆ ಮಾಡುತ್ತಿದೆ ಎಂದು ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಕೇರಳ Gold Smuggling: ನೇರವಾಗಿ ಫೀಲ್ಡ್ ಗೆ ಇಳಿದ NIA
Kerala Gold Smuggling ಪ್ರಕರಣ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಕಚೇರಿ
Published On - 6:59 pm, Fri, 19 March 21