ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಗೆ ಎಲ್ಡಿಎಫ್ ಚುನಾವಣೆ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ತಿರುವನಂತಪುರಂನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಕೇರಳ ಸಿಪಿಎಂ ಕಾರ್ಯದರ್ಶಿ ಎ.ವಿಜಯರಾಘವನ್, ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರಲಿದೆ. ರಾಜ್ಯದ ಜನರು ಕೂಡಾ ಎಲ್ಡಿಎಫ್ ಸರ್ಕಾರವನ್ನು ಬಯಸುತ್ತಿದ್ದು ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿದೆ ಎಂದಿದ್ದಾರೆ. ಧರ್ಮ ನಿರಪೇಕ್ಷ ಮೈತ್ರಿಕೂಟ ಆಗಿರುವುದರಿಂದಲೇ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ವಿಷಯದಲ್ಲಿ ಪಕ್ಷದ ನಿಲುವು ಪ್ರಣಾಳಿಕೆಯಲ್ಲಿ ಹೇಳಿಲ್ಲ ಎಂದು ಕಾನಂ ರಾಜೇಂದ್ರನ್ ತಿಳಿಸಿದರು. ಶಬರಿಮಲೆ ವಿಷಯದಲ್ಲಿ ಮುಖ್ಯಮಂತ್ರಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದು, ಸರ್ಕಾರದ ನಿಲುವು ಕೂಡಾ ಅದೇ ಎಂದು ಎ.ವಿಜಯರಾಘವನ್ ಹೇಳಿದ್ದಾರೆ.
ಈ ಬಾರಿ ಚುನಾವಣಾ ಪ್ರಣಾಳಿಕೆಯನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ.ಮೊದಲ ಭಾಗದಲ್ಲಿ 50 ಯೋಜನೆಗಳನ್ನು ಘೋಷಿಸಿದ್ದು, ಈ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ 900 ಸೂಚನೆಗಳನ್ನು ಎರಡನೇ ಭಾಗದಲ್ಲಿ ನೀಡಲಾಗಿದೆ. 40 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಯೋಜನೆಗೆ ಎಲ್ಡಿಎಫ್ ಹೆಚ್ಚು ಒತ್ತು ನೀಡಿದೆ. ಹೆಚ್ಚಿನ ನೇಮಕಾತಿ ಕಾರ್ಯಗಳನ್ನು ಪಿಎಸ್ ಸಿ (ಲೋಕಸೇವಾ ಆಯೋಗ) ಮಾಡಲಿದೆ. ಕೃಷಿ ಕ್ಷೇತ್ರದಲ್ಲಿ ಆದಾಯ ಶೇ.50ರಷ್ಟು ಏರಿಕೆ ಮಾಡಲಿರುವ ಕಾರ್ಯಯೋಜನೆ ಈ ಪ್ರಣಾಳಿಕೆಯಲ್ಲಿದೆ.
ಪ್ರಧಾನ ಭರವಸೆಗಳು
ಕಲ್ಯಾಣ ಪಿಂಚಣಿ ಹಂತ ಹಂತವಾಗಿ 2500 ರೂಪಾಯಿ ಆಗಿ ಏರಿಕೆ ಮಾಡಲಾಗುವುದು. ಗೃಹಿಣಿಯರಿಗೂ ಪಿಂಚಣಿ ನೀಡಲಾಗುವುದು. ₹60,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆ, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ರಾಜ್ಯದ ಜನರ ಶ್ರೇಯಾಭಿವೃದ್ಧಿಗೆ ಒತ್ತು ನೀಡಲಿದ್ದು, ರಬ್ಬರ್ ನ ಬೆಂಬಲ ಬೆಲೆ ಹಂತ ಹಂತವಾಗಿ 250 ಮಾಡಲಾಗುವುದು.
ಕರಾವಳಿ ಪ್ರದೇಶದ ಅಭಿವೃದ್ಧಿಗಾಗಿ ₹5000 ಕೋಟಿ ಮೊತ್ತದ ಪ್ಯಾಕೇಜ್. ಸಮುದ್ರದ ಹೊಣೆ ಮೀನುಗಾರರಿಗೆ ನೀಡಲಾಗುವುದು. ಸಮುದ್ರ ದಂಡೆಗಳ ಕೊರೆತ ತಡೆಯಲು ವೈಜ್ಞಾನಿಕ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು. ಹಿರಿಯ ನಾಗರಿಕರ ಸಮಸ್ಯೆಗಳಿಗೆ ಒತ್ತು ನೀಡಲಾಗುವುದು. ಮುಂದಿನ 5 ವರ್ಷಗಳಲ್ಲಿ ಒಂದೂವರೆ ಲಕ್ಷ ಮನೆ ನಿರ್ಮಾಣ ಮಾಡಲಾಗುವುದು. ಆದಿವಾಸಿ- ಪರಿಶಿಷ್ಟಜಾತಿಗೆ ಸೇರಿದ ಎಲ್ಲ ಕುಟುಂಬಗಳಿಗೆ ಮನೆ ನೀಡಲಾಗುವುದು.
ಐದು ವರ್ಷಗಳಲ್ಲಿ 10 ಸಾವಿರ ಕೋಟಿ ಹೂಡಿಕೆ ತರಲಾಗುವುದು. ಸಣ್ಣ ಮತ್ತು ಕಿರು ಉದ್ಯಮಗಳ ಸಂಖ್ಯೆ ಏರಿಕೆ ಮಾಡಲಾಗುವುದು. 1500 ಸ್ಟಾರ್ಟ್ ಅಪ್ ಆರಂಭಿಸಲಾಗುವುದು. ಒಂದು ಲಕ್ಷ ಜನರಿಗೆ ಹೊಸ ಉದ್ಯೋಗ ನೀಡಲಾಗುವುದು. ಇದಕ್ಕಾಗಿ ಕೌಶಲಭಿವೃದ್ಧಿ ತರಬೇತಿ ನೀಡಲಾಗುವುದು. ಸೋಷ್ಯಲ್ ಪೋಲಿಸಿಂಗ್ ಕ್ರಮ ಮತ್ತಷ್ಟು ಪ್ರಬಲಗೊಳಿಸಲಾಗುವುದು. ವಿದ್ಯುತ್ ಸಮಸ್ಯೆ ಪರಿಹರಿಸಲು ಟ್ರಾನ್ಸ್ ಗ್ರಿಡ್ ಪದ್ದತಿ. ಕೃಷಿ ಕ್ಷೇತ್ರದಲ್ಲಿ ಶೇ.50ರಷ್ಟು ಆದಾಯ ಏರಿಕೆ ಖಾತ್ರಿ. ಪ್ರತಿ ವರ್ಷ ಅಭಿವೃದ್ಧಿಯ ಮೌಲ್ಯಮಾಪನ ಮಾಡಲಾಗುವುದು.
ಕೇರಳ ಎಲೆಕ್ಟ್ರಾನಿಕ್- ಫಾರ್ಮಸ್ಯುಟಿಕಲ್ ಹಬ್
ದೇಶದ ಅತಿ ದೊಡ್ಡ ಎಲೆಕ್ಟ್ರಾನಿಕ್ ವ್ಯಾಪಾರ ವಲಯವನ್ನಾಗಿ ಕೇರಳವನ್ನು ಮಾಡಲಾಗುವುದು. ಅದೇ ರೀತಿ ಆರೋಗ್ಯ ಕ್ಷೇತ್ರದಲ್ಲಿ ಕೇರಳದ ಬ್ರಾಂಡ್ಗಳನ್ನು ಫಾರ್ಮಸ್ಯುಟಿಕಲ್ ವ್ಯಾಪಾರ ಅಭಿವೃದ್ಧಿಗಾಗಿ ಬಳಸಲಾಗುವುದುದು. ಕೇರಳವನ್ನು ಭಾರತದ ಪ್ರಧಾನ ಫಾರ್ಮಸ್ಯುಟಿಕಲ್ ಹಬ್ ಮಾಡಲಾಗುವುದು
ಬಡತನ ನಿರ್ಮೂಲನೆ
ಕಡುಬಡತನದಲ್ಲಿರುವ ಕುಟುಂಬಗಳ ಪಟ್ಟಿ ತಯಾರು ಮಾಡಲಾಗುವುದು. ಆ ಪಟ್ಟಿಯಲ್ಲಿರುವ ಪ್ರತಿಯೊಂದು ಕುಟುಂಬದ ಬಡತನ ನಿರ್ಮುೂಲನಕ್ಕಾಗಿ ಮೈಕ್ರೊಪ್ಲಾನ್ ಮಾಡಿ ಕಾರ್ಯರೂಪಕ್ಕೆ ತರಲಾಗುವುದು. 45 ಲಕ್ಷ ಕುಟುಂಬಗಳಿಗೆ ಇದೇ ರೀತಿ 1 ಲಕ್ಷದಿಂದ 15 ಲಕ್ಷದವರೆಗೆ ಸಹಾಯ ನೀಡಲಾಗುವುದು.
ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ಖಾತ್ರಿ ಪಡಿಸಲಾಗುವುದು. ನಾಲ್ಕರಲ್ಲಿ ಒಂದು ವಿದ್ಯಾರ್ಥಿ ಎ ಗ್ರೇಡ್ ತಲುಪುವಂತೆ ಮಾಡಲಾಗುವುದು. ಕಳೆದ 5 ವರ್ಷಗಳಲ್ಲಿ 6.8 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸೇರಿದ್ದು , ಮಂದಿನ ವರ್ಷ ವಿದ್ಯಾರ್ಥಿಗಳ ಸಂಖ್ಯೆ 10 ಲಕ್ಷ ಮಾಡುವ ಯೋಜನೆ.