ತಿರುವನಂತಪುರಂ: ಸಂಬಂಧಿಕರಿಗೆ ಸರ್ಕಾರಿ ನೌಕರಿ ನೀಡುವ ಮೂಲಕ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದ ಕೇರಳದ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರ ಸ್ವೀಕರಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅದನ್ನು ರಾಜ್ಯಪಾಲರಿಗೆ ಕಳಿಸಿಕೊಟ್ಟಿದ್ದರು. ಅಧಿಕಾರ ದುರ್ಬಳಕೆ ಮಾಡಿದ ಜಲೀಲ್ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯಲು ಅರ್ಹತೆ ಇಲ್ಲ ಎಂದು ಲೋಕಾಯುಕ್ತರು ಹೇಳಿದ್ದ ಬೆನ್ನಲ್ಲೇ ಜಲೀಲ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿರುವ ವಿಚಾರವನ್ನು ಜಲೀಲ್ ಅವರು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟದಿಂದ ರಾಜೀನಾಮೆ ನೀಡಿ ಹೊರ ನಡೆದಿರುವ 5ನೇ ಸಚಿವರಾಗಿದ್ದಾರೆ ಕೆ.ಟಿ.ಜಲೀಲ್. ಸಂಬಂಧಿಕರಿಗೆ ಸರ್ಕಾರಿ ನೌಕರಿ ನೀಡಿದ ಆರೋಪ ಕೇಳಿ ಬಂದು ಎರಡೂವರೆ ವರ್ಷಗಳ ನಂತರ ಸಚಿವರು ರಾಜೀನಾಮೆ ನೀಡಿದ್ದಾರೆ. ಅಲ್ಪ ಸಂಖ್ಯಾತರ ಅಭಿವೃದ್ಧಿ ಕಾರ್ಪರೇಷನ್ನಲ್ಲಿ ಟಿ.ಕೆ.ಅಬೀದ್ ಎಂಬವರಿಗೆ ಕೆಲಸ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಸಂಬಂಧಿಗೆ ನೌಕರಿ ನೀಡುವುದಕ್ಕಾಗಿ ಪ್ರಸ್ತುತ ಹುದ್ದೆಗೆ ಬೇಕಾಗಿರುವ ಅರ್ಹತೆಯಲ್ಲಿ ತಿದ್ದುಪಡಿ ಮಾಡಿದ್ದಾರೆ ಎಂಬುದು ಜಲೀಲ್ ಮೇಲಿರುವ ಆರೋಪ. ಯೂತ್ ಲೀಗ್ ರಾಜ್ಯ ಕಾರ್ಯದರ್ಶಿಯಾಗಿದ್ದ ಪಿ.ಕೆ.ಫಿರೋಜ್ 2018 ನವೆಂಬರ್ 2ರಂದು ಸಚಿವ ಜಲೀಲ್ ವಿರುದ್ಧ ಆರೋಪ ಮಾಡಿದ್ದರು.
ರಾಜ್ಯದ ಅಲ್ಪ ಸಂಖ್ಯಾತರ ಅಭಿವೃದ್ಧಿ ಕಾರ್ಪರೇಷನ್ ಜನರಲ್ ಮ್ಯಾನೇಜರ್ ಹುದ್ದೆಗೆ ಸಚಿವ ಕೆ.ಟಿ. ಜಲೀಲ್ ಅವರ ಸಂಬಂಧಿ ಕೆ.ಟಿ. ಅಬೀದ್ ಅವರನ್ನು ನೇಮಕ ಮಾಡಿದ್ದು ಕಾನೂನು ವಿರುದ್ಧ. ಹಾಗಾಗಿ ಜಲೀಲ್ ಸಚಿವ ಸ್ಥಾನದಲ್ಲಿ ಮುಂದುವರಿಯಲು ಅರ್ಹತೆ ಇಲ್ಲ ಎಂದು ತನಿಖೆ ನಡೆಸಿದ ಲೋಕಾಯುಕ್ತ ಹೇಳಿತ್ತು. ಅಬೀದ್ಗೆ ಈ ಹುದ್ದೆ ನೀಡುವುದಕ್ಕಾಗಿ ಜನರಲ್ ಮ್ಯಾನೇಜರ್ ಹುದ್ದೆಗಿರುವ ಶೈಕ್ಷಣಿಕ ಅರ್ಹತೆಯಲ್ಲಿ ತಿದ್ದುಪಡಿ ಮಾಡಿರುವುದಾಗಿ ಲೋಕಾಯಕ್ತ ಪತ್ತೆ ಹಚ್ಚಿತ್ತು. ಸಚಿವ ಸ್ಥಾನವನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ಜಲೀಲ್ ಪ್ರಮಾಣ ವಚನದ ಉಲ್ಲಂಘನೆ ಮಾಡಿದ್ದಾರೆ ಎಂದಿದೆ ಲೋಕಾಯುಕ್ತ.
ಯೂತ್ ಲೀಗ್ ನಾಯಕ ವಿ.ಕೆ.ಮುಹಮ್ಮದ್ ಶಾಫಿ ಅವರ ದೂರಿನ ಮೇರೆಗೆ ಲೋಕಾಯುಕ್ತ ಈ ಬಗ್ಗೆ ತನಿಖೆ ನಡೆಸಿತ್ತು. ಸೌತ್ ಇಂಡಿಯನ್ ಬ್ಯಾಂಕ್ನ ಮ್ಯಾನೇಜರ್ ಆಗಿದ್ದ ಅಬೀದ್ ಅವರನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಪರೇಷನ್ ನ ಜನರಲ್ ಮ್ಯಾನೇಜರ್ ಆಗಿ ನಿಯೋಜನೆ ಮಾಡಲಾಗಿತ್ತು.
ಕೇರಳ ಸಚಿವ ಸಂಪುಟದಲ್ಲಿ ರಾಜೀನಾಮೆ ನೀಡಿದ ಸಚಿವರು 5, ಆಮೇಲೆ ಮರಳಿ ಬಂದವರು ಇಬ್ಬರು
ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಸರ್ಕಾರದಿಂದ ರಾಜೀನಾಮೆ ನೀಡಿ ಹೊರ ಬಂದಿರುವ 5ನೇ ಸಚಿವರಾಗಿದ್ದಾರೆ ಕೆ.ಟಿ.ಜಲೀಲ್. ಸಚಿವ ಸಂಪುಟದಿಂದ ರಾಜೀನಾಮೆ ನೀಡಿ ಹೊರ ನಡೆದ ಮೊದಲ ಸಚಿವ ಇ.ಪಿ. ಜಯರಾಜನ್. ಪತ್ನಿಯ ಸಹೋದರಿ ಪಿ.ಕೆ.ಶ್ರೀಮತಿ ಅವರ ಮಗನಿಗೆ ವ್ಯವಸಾಯ ಇಲಾಖೆಯಲ್ಲಿ ನೌಕರಿ ನೀಡಿದ್ದಕ್ಕೆ ಇವರು ರಾಜೀನಾಮೆ ನೀಡಿದ್ದರು. 2016 ಅಕ್ಟೋಬರ್ 14ರಂದು ನಡೆದ ಸಿಪಿಎಂ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ರಾಜೀನಾಮೆ ಸ್ವೀಕರಿಸಿತ್ತು. ಈ ಬಗ್ಗೆ ಪ್ರಕರಣ ಮುಕ್ತಾಯಗೊಂಡ ನಂತರ ಜಯರಾಜನ್ ಮತ್ತೆ ಸಚಿವ ಸಂಪುಟಕ್ಕೆ ಮರಳಿದ್ದರು.
ಫೋನ್ ಸಂಭಾಷಣೆ ಪ್ರಕರಣ ಆರೋಪದಲ್ಲಿ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ರಾಜೀನಾಮೆ ನೀಡಿದ್ದರು. ಫೋನ್ ನಲ್ಲಿ ನಿರಂತರ ಅಶ್ಲೀಲ ಸಂಭಾಷಣೆ ಮಾಡುತ್ತಿದ್ದರು ಎಂದು ಸುದ್ದಿವಾಹಿನಿಯ ಪತ್ರಕರ್ತೆಯೊಬ್ಬರು ಆರೋಪಿಸಿದ್ದರು. ಆನಂತರ ದೂರುನೀಡಿದ ಮಹಿಳೆ ಪ್ರಕರಣ ವಾಪಸ್ ಪಡೆದುಕೊಂಡಿದ್ದು, ಆರೋಪ ಮುಕ್ತರಾದ ಸಚಿವರು ಮತ್ತೆ ಸಂಪುಟಕ್ಕೆ ಸೇರಿದ್ದರು.
ಶಶೀಂದ್ರನ್ ರಾಜೀನಾಮೆ ನೀಡಿದಾಗ ಅವರ ಸ್ಥಾನಕ್ಕೆ ಬಂದಿದ್ದ ಥಾಮಸ್ ಚಾಂಡಿ, ಕಾಲುವೆ ಸ್ವಾಧೀನ ಪ್ರಕರಣದಲ್ಲಿ ರಾಜೀನಾಮೆ ನೀಡಬೇಕಾಗಿ ಬಂತು. ಕೆ.ಕೃಷ್ಣನ್ ಕುಟ್ಟಿ ಅವರನ್ನು ಸಚಿವರನ್ನಾಗಿ ಮಾಡಲು ಜನತಾದಳದನಾಯಕರು ತೀರ್ಮಾನಿಸಿದ್ದರಿಂದ ಮ್ಯಾಥ್ಯೂ ಟಿ.ಥಾಮಸ್ ಅವರಿಗೆ ಜಲ ಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಇದೀಗ ಸಂಬಂಧಿಕರಿಗೆ ನೌಕರಿ ನೀಡಿದ ಪ್ರಕರಣದಲ್ಲಿ ಕೆ.ಟಿ.ಜಲೀಲ್ ರಾಜೀನಾಮೆ ನೀಡಿದ್ದಾರೆ.
Published On - 4:23 pm, Tue, 13 April 21