ನವದೆಹಲಿ: ದೇಶದಲ್ಲಿ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದಲ್ಲಿ ಕೇರಳ ಮತ್ತೆ ದೇಶದಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷ ನಾಲ್ಕನೇ ಸ್ಥಾನ ಪಡೆದಿದ್ದ ಕರ್ನಾಟಕ ರಾಜ್ಯವು ಈ ಬಾರಿ 7ನೇ ಸ್ಥಾನಕ್ಕೆ ಕುಸಿದಿದೆ. ಕೇರಳ ಈ ವರ್ಷವೂ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದಲ್ಲಿ ನಂಬರ್ ಒನ್ ಸ್ಥಾನ ಪಡೆಯಲು ಕಾರಣವಾಗಿದ್ದೇನು? ಎನ್ನುವುದರ ವಿವರ ಇಲ್ಲಿದೆ ನೋಡಿ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಆಡಳಿತದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು ಪ್ರಕಟಿಸಲಾದ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದಲ್ಲಿ ಕೇರಳ ಮತ್ತೆ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ತಮಿಳುನಾಡು ಮತ್ತು ತೆಲಂಗಾಣ ಈ ಪಟ್ಟಿಯಲ್ಲಿ ಕೇರಳದ ನಂತರದ ಸ್ಥಾನದಲ್ಲಿವೆ. ಕಳೆದ ಬಾರಿ ನಾಲ್ಕನೇ ಸ್ಥಾನವನ್ನು ಪಡೆದಿದ್ದ ಕರ್ನಾಟಕ, ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ 2021ರಲ್ಲಿ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಉತ್ತರ ಪ್ರದೇಶವು 18ನೇ ಸ್ಥಾನದಲ್ಲಿ ಕೊನೆಯ ಸ್ಥಾನದಲ್ಲಿದ್ದರೆ, ಗುಜರಾತ್ ಐದನೇ ಸ್ಥಾನವನ್ನು ಪಡೆದುಕೊಂಡಿದೆ.
ಬೆಂಗಳೂರಿನ ಸಾರ್ವಜನಿಕ ವ್ಯವಹಾರಗಳ ಕೇಂದ್ರವು ಸಿದ್ಧಪಡಿಸಿದ ಸೂಚ್ಯಂಕದಲ್ಲಿ ರಾಜ್ಯಗಳನ್ನು ಶ್ರೇಣೀಕರಿಸಲು ಬೆಳವಣಿಗೆ, ಭಾಗವಹಿಸುವಿಕೆಯಲ್ಲಿ ಸಮಾನತೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಪರಿಗಣಿಸುತ್ತದೆ.
ಕೇರಳವು ಸೂಚ್ಯಂಕದಲ್ಲಿ ಗಮನಾರ್ಹವಾದ 1.618 ಅಂಕಗಳನ್ನು ಪಡೆದರೆ ತಮಿಳುನಾಡು 0.897 ಮತ್ತು ತೆಲಂಗಾಣ 0.891 ಅಂಕಗಳನ್ನು ಗಳಿಸಿತು. ಸೂಚ್ಯಂಕದಲ್ಲಿ ಛತ್ತೀಸ್‌ಗಢ 0.872, ಗುಜರಾತ್ 0.782, ಪಂಜಾಬ್ 0.643 ಮತ್ತು ಕರ್ನಾಟಕ 0.121 ಅಂಕ ಗಳಿಸಿವೆ. 2016ರಲ್ಲಿ ಶ್ರೇಯಾಂಕವು ಪ್ರಾರಂಭವಾದಾಗ ಉತ್ತರ ಪ್ರದೇಶವು 12ನೇ ಸ್ಥಾನದಲ್ಲಿತ್ತು. ಆದರೆ, ರಾಜ್ಯವು ವರ್ಷದಿಂದ ವರ್ಷಕ್ಕೆ ಆಡಳಿತದ ಗುಣಮಟ್ಟದಲ್ಲಿ ಕಳಪೆ ಪ್ರದರ್ಶನವನ್ನು ತೋರಿಸಿದೆ.
ಸೂಚ್ಯಂಕವನ್ನು ಪ್ರಕಟಿಸಿದ ಮೊದಲ ವರ್ಷದಿಂದ ಕೇರಳವು ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಯಕ್ರಮದಲ್ಲಿ ಕೇರಳದ ಉತ್ತಮ ಸಾಧನೆಯು 2021 ರಲ್ಲಿ ರಾಜ್ಯವನ್ನು ಮೊದಲ ಶ್ರೇಣಿಗೆ ಅರ್ಹಗೊಳಿಸಿದೆ.
ಸಣ್ಣ ರಾಜ್ಯಗಳ ವಿಭಾಗದಲ್ಲಿ ಸಿಕ್ಕಿಂ 1.617 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಗೋವಾ 1.144 ಅಂಕಗಳೊಂದಿಗೆ ಎರಡನೇ ಸ್ಥಾನ ಮತ್ತು ಮಿಜೋರಾಂ 1.123 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಪುದುಚೇರಿ 1.182 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಜಮ್ಮು ಮತ್ತು ಕಾಶ್ಮೀರ 0.705 ಅಂಕಗಳೊಂದಿಗೆ ಎರಡನೇ ಸ್ಥಾನ ಮತ್ತು 0.628 ಅಂಕಗಳೊಂದಿಗೆ ಛತ್ತೀಸ್‌ಗಢ ಮೂರನೇ ಸ್ಥಾನ ಗಳಿಸಿತು.
ಇದನ್ನೂ ಓದಿ: Karnataka Dams Water Level: ರಾಜ್ಯಾದ್ಯಂತ ಮತ್ತೆ ಮಳೆ ಅಬ್ಬರ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ