ಅಕ್ರಮ ಹಣ ವರ್ಗಾವಣೆ ಪ್ರಕರಣ; ಮಾಜಿ ಸಚಿವ ಅನಿಲ್ ದೇಶ್ಮುಖ್ಗೆ ನ. 19ರವರೆಗೆ ನ್ಯಾಯಾಂಗ ಬಂಧನ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ನವದೆಹಲಿ: 100 ಕೋಟಿ ವಸೂಲಿ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ (Anil Deshmukh) ಅವರನ್ನು ನ. 2ರಂದು ಜಾರಿ ನಿರ್ದೇಶನಾಲಯ (ED) ಬಂಧಿಸಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಅನಿಲ್ ದೇಶ್‌ಮುಖ್ ಅವರನ್ನು ಇಂದು ರಜಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನವೆಂಬರ್ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅನಿಲ್ ದೇಶ್‌ಮುಖ್ 100 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಆರೋಪಿಸಿದ್ದರು. 100 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆಂದು ಆರೋಪಿಸಿ ಪರಂಬೀರ್ ಸಿಂಗ್ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣ ಮುನ್ನೆಲೆಗೆ ಬಂದಿತ್ತು. ಬಳಿಕ ಈ ಆರೋಪದ ಹಿನ್ನೆಲೆಯಲ್ಲಿ ಅನಿಲ್ ದೇಶಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಮುಂಬೈನ ಹೋಟೆಲ್‌ಗಳು ಮತ್ತು ಬಾರ್‌ಗಳಿಂದ ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸುವಂತೆ ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜ್ ಅವರಿಗೆ ಅನಿಲ್ ದೇಶಮುಖ್ ನಿರ್ದೇಶನ ನೀಡಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಆರೋಪಿಸಿದ ನಂತರ ಸಿಬಿಐ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿತ್ತು.
Money laundering case | Hearing in the anticipatory bail application of Hrishikesh Deshmukh, son of former Maharashtra Home Minister Anil Deshmukh, adjourned till 12th November. No interim protection from arrest to him till then.
— ANI (@ANI) November 6, 2021
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಾಝ್ ಅವರನ್ನು ನವೆಂಬರ್ 13ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಅನಿಲ್ ದೇಶಮುಖ್ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. ಆದರೆ ಸಿಬಿಐ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದ ನಂತರ ಏಪ್ರಿಲ್‌ನಲ್ಲಿ ತಮ್ಮ ಗೃಹ ಸಚಿವ ಸ್ಥಾನಕ್ಕೆ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ತಮ್ಮ ವಕೀಲರೊಂದಿಗೆ ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿರುವ ಇಡಿ ಕಚೇರಿಗೆ ನವೆಂಬರ್ 1ರಂದು ಬೆಳಿಗ್ಗೆ ಹಾಜರಾಗಿದ್ದರು. ಇದಕ್ಕೂ ಮೊದಲು, ಐದು ಬಾರಿ ಸಮನ್ಸ್ ಜಾರಿ ಮಾಡಿದರೂ ಅವರು ಇಡಿ ಮುಂದೆ ವಿಚಾರಣೆಗೆ ಹಾಜರಾಗಿರಲಿಲ್ಲ. ಕಳೆದ ವಾರ ಮುಂಬೈ ಹೈಕೋರ್ಟ್ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿದ ನಂತರ ಅವರು ಇಡಿ ಮುಂದೆ ಹಾಜರಾಗಿದ್ದರು.
71 ವರ್ಷದ ಅನಿಲ್ ದೇಶ್‌ಮುಖ್ ಅವರನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದರು. ಪೊಲೀಸರ ಎದುರು ವಿಚಾರಣೆಗೆ ಹಾಜರಾಗುವ ಮುನ್ನ ವಿಡಿಯೊ ಸಂದೇಶ ಬಿಡುಗಡೆ ಮಾಡಿದ್ದ ಅನಿಲ್ ದೇಶ್‌ಮುಖ್, ‘ನಾನು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ವರದಿಗಳಿಗೆ ಆಧಾರವಿಲ್ಲ. ಹಿಂದೆಯೂ ಸಿಬಿಐ ಅಧಿಕಾರಿಗಳ ಎದುರು ಎರಡು ಬಾರಿ ಹಾಜರಾಗಿದ್ದೆ. ನನ್ನ ಅರ್ಜಿ ಈಗ ಸುಪ್ರೀಂ ಕೋರ್ಟ್‌ನಲ್ಲಿದೆ. ಅದಕ್ಕೆ ಇನ್ನಷ್ಟು ಸಮಯ ತಗಲುವ ಕಾರಣ ಈಗ ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆರಳುತ್ತಿದ್ದೇನೆ’ ಎಂದು ಹೇಳಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಸಚಿವ ಅನಿಲ್ ದೇಶ್ಮುಖ್ಗೆ ನವೆಂಬರ್ 6ರವರೆಗೆ ಇ ಡಿ ಕಸ್ಟಡಿ; ವಿಶೇಷ ಪಿಎಂಎಲ್‌ಎ ಕೋರ್ಟ್ ಆದೇಶ
Published On - 3:34 pm, Sat, 6 November 21