ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆದಿದ್ದು ಶೇ 76 ಮತದಾನವಾಗಿದೆ. ಕೋಟ್ಟಯಂ, ಎರ್ನಾಕುಳಂ, ತ್ರಿಶ್ಶೂರ್, ಪಾಲಕ್ಕಾಡ್, ವಯನಾಡ್ ಜಿಲ್ಲೆಗಳ ಜನರು ಗುರುವಾರ ಮತಚಲಾಯಿಸಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರಗೆ ಎಲ್ಲರಿಗೂ ಮತದಾನ ಮಾಡುವ ಅವಕಾಶ ಕಲ್ಪಿಸಿದ್ದು , 6 ಗಂಟೆಯಿಂದ 7 ಗಂಟೆವರೆಗೆ ಕೋವಿಡ್ ರೋಗಿಗಳಿಗೆ ಮತ್ತು ಕ್ವಾರಂಟೈನ್ ನಲ್ಲಿರುವವರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ.
ಸಂಜೆ 6.30ರವರೆಗೆ ಕೋಟ್ಟಯಂನಲ್ಲಿ ಶೇ 73.72, ಎರ್ನಾಕುಳಂನಲ್ಲಿ ಶೇ 76.74, ತ್ರಿಶ್ಶೂರ್ನಲ್ಲಿ ಶೇ 74.58, ಪಾಲಕ್ಕಾಡ್ನಲ್ಲಿ ಶೇ 77.53, ವಯನಾಡ್ನಲ್ಲಿ ಶೇ 79.22ರಷ್ಟು ಮತದಾನವಾಗಿದೆ. ಕೊಚ್ಚಿ, ತ್ರಿಶ್ಶೂರ್ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ಕ್ರಮವಾಗಿ ಶೇ 61.45, ಶೇ 63.39ರಷ್ಟು ಮತದಾನ ದಾಖಲಾಗಿದೆ.
ಎರಡನೇ ಹಂತದ ಮತದಾನದಲ್ಲಿ 47,28,489 ಪುರುಷರು, 51,28,361 ಮಹಿಳೆಯರು, 93 ಟ್ರಾನ್ಸ್ ಜೆಂಡರ್, 265-ಅನಿವಾಸಿ ಭಾರತೀಯರು ಸೇರಿದಂತೆ 98,57,208 ಮತದಾರರಿದ್ದರು. 12,643 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.