ನೆರೆಯ ರಾಜ್ಯ ಕೇರಳದಲ್ಲಿ ಕೊರೊನಾ ಕೇಸುಗಳು ಸಂಖ್ಯೆ ವಿಪರೀತ ಹೆಚ್ಚಾಗುತ್ತಿದೆ. ಹೀಗಾಗಿ, ಕರ್ನಾಟಕದ (Karnataka) ಗಡಿ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಭಾರತದಲ್ಲಿ ಕೊವಿಡ್ (COVID-19) ನಿಯಂತ್ರಿಸಲು ಈಗಾಗಲೇ ಕೋವಿಶೀಲ್ಡ್ (Covishield), ಕೊವ್ಯಾಕ್ಸಿನ್ (Covaxin), ಸ್ಪುಟ್ನಿಕ್ (Sputnik-V) ಸೇರಿದಂತೆ ಹಲವು ಲಸಿಕೆಗಳನ್ನು ನೀಡಲಾಗುತ್ತಿದೆ. ಇದರ ನಡುವೆ ಕೇರಳದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದ್ದು, ಕೊವ್ಯಾಕ್ಸಿನ್ ಎರಡು ಡೋಸ್ ಲಸಿಕೆಗಳನ್ನು ಪಡೆದ ವ್ಯಕ್ತಿಯೋರ್ವ ತನಗೆ ಮತ್ತೆ ಕೋವಿಶೀಲ್ಡ್ ಲಸಿಕೆ ಹಾಕಬೇಕೆಂದು ಕೋರ್ಟ್ ಮೊರೆ ಹೋಗಿದ್ದಾನೆ.
ಯಾವುದೇ ಕೊರೊನಾ ಲಸಿಕೆ ಹಾಕಿಸಿಕೊಳ್ಳುವಾಗಲೂ ಎರಡನೇ ಡೋಸ್ ಕೂಡ ಅದೇ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂಬ ನಿಯಮವಿದೆ. ಒಮ್ಮೆ ಕೋವಿಶೀಲ್ಡ್ ಮತ್ತೊಮ್ಮೆ ಕೊವ್ಯಾಕ್ಸಿನ್ ಹಾಕಿಸಿಕೊಳ್ಳಲು ಅವಕಾಶವಿಲ್ಲ. ಕೇರಳದಲ್ಲಿ ಕೊವ್ಯಾಕ್ಸಿನ್ 2 ಡೋಸ್ ಪಡೆದ ವ್ಯಕ್ತಿಯೋರ್ವ ತನಗೆ ಮತ್ತೊಮ್ಮೆ ಕೋವಿಶೀಲ್ಡ್ ಲಸಿಕೆ ಹಾಕಬೇಕೆಂದು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಆದರೆ, ಈಗಾಗಲೇ ಎರಡು ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಮತ್ತೆ ಲಸಿಕೆ ಹಾಕಿಸಿಕೊಳ್ಳಲು ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಖಚಿತಪಡಿಸಿದೆ.
ಎರಡು ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡರೂ ಆ ವ್ಯಕ್ತಿಗೆ ಆರೋಗ್ಯದ ಸಮಸ್ಯೆಗಳು ಉಂಟಾಗಿತ್ತು. ಹೀಗಾಗಿ, ಆತ ಕೋವ್ಯಾಕ್ಸಿನ್ ಲಸಿಕೆಯಿಂದ ಏನೂ ಪ್ರಯೋಜನವಾಗಿಲ್ಲ ಎಂದು ಮತ್ತೆ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಹಾಕಬೇಕೆಂದು ಒತ್ತಾಯಿಸಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಆದರೆ, ಓರ್ವ ವ್ಯಕ್ತಿಗೆ ಎರಡು ಡೋಸ್ಗಿಂತ ಹೆಚ್ಚು ಕೊರೊನಾ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿರುವುದರಿಂದ ಆತನಿಗೆ ನಿರಾಸೆಯಾಗಿದೆ.
ಎರಡಕ್ಕಿಂತ ಹೆಚ್ಚು ಡೋಸ್ ಕೊರೊನಾ ಲಸಿಕೆಯನ್ನು ಪಡೆಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮತ್ತೊಮ್ಮೆ ಕೊರೊನಾ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇರಳದ 50 ವರ್ಷದ ಗಿರಿಕುಮಾರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದವರು. ನನಗೆ ಕೊವ್ಯಾಕ್ಸಿನ್ ಲಸಿಕೆಯಿಂದ ಆರೋಗ್ಯ ಸುಧಾರಿಸಿಲ್ಲ. ಸೌದಿ ಅರೇಬಿಯಾದಲ್ಲಿ ಕೆಲಸದಲ್ಲಿರುವ ನಾನು ಆಗಸ್ಟ್ 30ರೊಳಗೆ ಅಲ್ಲಿಗೆ ವಾಪಾಸ್ ಹೋಗಬೇಕು. ಇಲ್ಲವಾದರೆ ನನ್ನ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಸೌದಿ ಅರೇಬಿಯಾದಲ್ಲಿ ಕೊವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ಇಲ್ಲದ ಕಾರಣ ನನಗೆ ಕೋವಿಶೀಲ್ಡ್ ಲಸಿಕೆ ಹಾಕಿ ಎಂದು ಕೋರ್ಟ್ನಲ್ಲಿ ಅವರು ಮನವಿ ಮಾಡಿದ್ದಾರೆ.
ಕಳೆದ ಜನವರಿಯಲ್ಲಿ ಸೌದಿ ಅರೇಬಿಯಾದಿಂದ ಕೇರಳಕ್ಕೆ ಬಂದಿದ್ದ ಗಿರಿ ಕುಮಾರ್ ಕೊವ್ಯಾಕ್ಸಿನ್ ಲಸಿಕೆ ಪಡೆದಿದ್ದರು. ಆದರೆ, ಸೌದಿಯಲ್ಲಿ ಕೊವ್ಯಾಕ್ಸಿನ್ಗೆ ಮಾನ್ಯತೆ ಇಲ್ಲ ಎಂದು ಗೊತ್ತಾದ ಬಳಿಕ ಚಿಂತಿತರಾದ ಅವರು ಕೋವಿಶೀಲ್ಡ್ ಹಾಕಿಸಿಕೊಳ್ಳಲು ಮುಂದಾಗಿದ್ದರು.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ನೋಡೆಲ್ ಅಧಿಕಾರಿ ನೇಮಕ
MEA Helpline Number: ಅಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗೆ ಸಹಾಯವಾಣಿ ಆರಂಭ
(Kerala man files plea in High Court for Covishield after taking both doses of Covaxin Vaccine)