ಕೋಳಿಕೋಡ್, ಜುಲೈ 21: ನಿಫಾ ವೈರಸ್ ಸೋಂಕಿಗೆ ಒಳಗಾಗಿದ್ದ 14 ವರ್ಷದ ಕೇರಳ ಬಾಲಕ ಹೃದಯಸ್ತಂಭನದಿಂದ ಮೃತಪಟ್ಟಿರುವುದಾಗಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಇಂದು ಭಾನುವಾರ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಪ್ರಕಾರ ಬಾಲಕ ಇಂದು ಬೆಳಗ್ಗೆ ಕೋಳಿಕ್ಕೋಡ್ನ ಮೆಡಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಬೆಳಗ್ಗೆ 11:30ರ ಸಮಯದಲ್ಲಿ ಕೊನೆಯುಸಿರೆಳೆದಿರುವುದು ಗೊತ್ತಾಗಿದೆ. ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್ನ ನಿವಾಸಿಯಾದ ಆ ಹುಡುಗನಿಗೆ ನಿಪಾ ವೈರಸ್ ಸೋಂಕು ತಗುಲಿರುವುದು ನಿನ್ನೆ ಶನಿವಾರ ದೃಢಪಟ್ಟಿತ್ತು.
‘ಆ ಬಾಲಕ ವೆಂಟಿಲೇಟರ್ನಲ್ಲಿದ್ದ. ಇಂದು ಬೆಳಗ್ಗೆ ಆತನ ಮೂತ್ರ ವಿಸರ್ಜನೆ ಪ್ರಮಾಣ ಕಡಿಮೆ ಆಗಿತ್ತು. 10:50ರಲ್ಲಿ ತೀವ್ರವಾಗಿ ಹೃದಯ ಸ್ತಂಭನ ಉಂಟಾಯಿತು. ಆ ಬಳಿಕ ಪುನಶ್ಚೇತನಗೊಳಿಸಲು ಮಾಡಿದ ಪ್ರಯತ್ನಗಳು ವಿಫಲವಾದವು. ಬೆಳಗ್ಗೆ 11:30ಕ್ಕೆ ಮೃತಪಟ್ಟ… ಅಂತಾರಾಷ್ಟ್ರೀಯ ನಿಯಮಗಳ ಅನುಸಾರವಾಗಿ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲಾಗುವುದು,’ ಎಂದು ಸಚಿವೆ ವೀಣಾ ಜಾರ್ಜ್ ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ಕರ್ನಾಟಕಕ್ಕೆ ಡೆಂಗ್ಯೂ ಆತಂಕದ ಜೊತೆ ನಿಫಾ ಕಂಟಕ
ಕೇರಳದಲ್ಲಿ ಈ ಸೀಸನ್ನಲ್ಲಿ ಇದು ಮೊದಲ ನಿಪಾ ವೈರಸ್ ಪ್ರಕರಣವಾಗಿದೆ. ಇದೇ ಕೋಳಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಮೂವರು ವ್ಯಕ್ತಿಗಳನ್ನು ಐಸೋಲೇಶನ್ನಲ್ಲಿ ಇಡಲಾಗಿದೆ. ಇವರಿಗೆ ನಿಪಾ ವೈರಸ್ ಸೋಂಕು ಇದೆಯಾ ಎಂಬುದು ಇನ್ನೂ ದೃಢಪಟ್ಟಿಲ್ಲ.
ನಿಫಾ ವೈರಸ್ ಕೇರಳಕ್ಕೆ ಆಗಾಗ್ಗೆ ಬಾಧಿಸುತ್ತಿರುತ್ತದೆ. ಬಾವುಲಿ ಮತ್ತು ಹಂದಿಗಳ ಮೈನಲ್ಲಿರುವ ದ್ರವದ ಮೂಲಕ ಮನುಷ್ಯರಿಗೆ ನಿಫಾ ವೈರಸ್ ಹರಡುತ್ತದೆ. ಇದು ಮನುಷ್ಯರಿಂದ ಮನುಷ್ಯರಿಗೂ ಹರಡುವ ಸೋಂಕು ರೋಗವಾಗಿದೆ. ಕೋವಿಡ್ ಸೋಂಕಿನಂತೆ ಈ ನಿಫಾ ವೈರಸ್ ಸೋಂಕು ಗುಣಪಡಿಸಲು ಯಾವ ಚಿಕಿತ್ಸೆ ಇಲ್ಲ. ಮರಳ ಪ್ರಮಾಣ ಶೇ. 70ರಷ್ಟಿದೆ. ಅಂದರೆ ಸೋಂಕಿತರಲ್ಲಿ ಶೇ. 70ರಷ್ಟು ಜನರು ಬದುಕುವುದಿಲ್ಲ.
ಇದನ್ನೂ ಓದಿ: ಕುವೈತ್ನಲ್ಲಿ ಅಗ್ನಿ ಅವಘಡ: ರಜೆ ಮುಗಿಸಿ ವಾಪಾಸ್ ಆಗಿದ್ದ ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ಸಾವು
ನಿಫಾ ವೈರಸ್ ಸೋಂಕು ತಗುಲಿದ ವ್ಯಕ್ತಿಗೆ ಮೊದಲಿಗೆ ಜ್ವರ ಬರುತ್ತದೆ. ತಲೆನೋವು, ವಾಂತಿ, ಉಸಿರಾಟ ತೊಂದರೆ ಕಾಣಿಸುತ್ತದೆ. ಮಿದುಳು ಉರಿಯೂತ, ಸ್ನಾಯು ಸೆಳೆತ ಇತ್ಯಾದಿ ಬಾಧೆ ಬರಬಹುದು. ರೋಗಿ ಕೋಮಾ ಸ್ಥಿತಿಗೆ ಜಾರಿ, ಮೃತಪಡಬಹುದು ಎಂದು ವೈದ್ಯರು ಹೇಳುತ್ತಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ