ಕರ್ನಾಟಕಕ್ಕೆ ಡೆಂಗ್ಯೂ ಆತಂಕದ ಜೊತೆ ನಿಫಾ ಕಂಟಕ? ಕೇರಳದಲ್ಲಿ ಬಾಲಕನಿಗೆ ವೈರಸ್ ದೃಢ

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಕೇಸ್​ಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 486 ಡೆಂಗ್ಯೂ ಕೇಸ್ ದಾಖಲಾಗಿವೆ. ಇದರ ಮಧ್ಯೆ ಇದೀಗ ಕರ್ನಾಟಕಕ್ಕೆ ನಿಫಾ ಕಂಟಕ ಎದುರಾಗಿದೆ. ಪಕ್ಕದ ರಾಜ್ಯ ಕೇರಳದ ಮಲಪ್ಪುರಂನಲ್ಲಿ 14 ವರ್ಷದ ಬಾಲಕನಿಗೆ ನಿಫಾ ವೈರಸ್ ದೃಢವಾಗಿದೆ.

ಕರ್ನಾಟಕಕ್ಕೆ ಡೆಂಗ್ಯೂ ಆತಂಕದ ಜೊತೆ ನಿಫಾ ಕಂಟಕ? ಕೇರಳದಲ್ಲಿ ಬಾಲಕನಿಗೆ ವೈರಸ್ ದೃಢ
ಕರ್ನಾಟಕಕ್ಕೆ ಡೆಂಗ್ಯೂ ಆತಂಕದ ಜೊತೆ ನಿಫಾ ಕಂಟಕ? ಕೇರಳದಲ್ಲಿ ಬಾಲಕನಿಗೆ ವೈರಸ್ ದೃಢ
Follow us
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ

Updated on: Jul 20, 2024 | 11:01 PM

ಬೆಂಗಳೂರು, ಜುಲೈ 20: ಕರಾವಳಿ, ಮಲೆನಾಡಿನಲ್ಲಿ ಮಳೆರಾಯ ಜನರ ಬದುಕನ್ನೇ ಕಸಿದಿದ್ದರೆ ಇತ್ತ ನಗರದಲ್ಲಿ ಡೆಂಗ್ಯೂ (Dengue) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಿಟಿ ಜಿಟಿ ಮಳೆಯಿಂದಾಗಿ ಡೆಂಗ್ಯೂ ತಾಂಡವವಾಡುತ್ತಿದೆ. ಇದೆಲ್ಲದರ ಮಧ್ಯೆ ಇದೀಗ ಕರ್ನಾಟಕಕ್ಕೆ ನಿಫಾ (Nipah virus) ಕಂಟಕ ಎದುರಾಗಿದೆ. ಪಕ್ಕದ ರಾಜ್ಯ ಕೇರಳದ ಮಲಪ್ಪುರಂನಲ್ಲಿ 14 ವರ್ಷದ ಬಾಲಕನಿಗೆ ನಿಫಾ ವೈರಸ್ ದೃಢವಾಗಿದೆ. ಹಾಗಾಗಿ ಸದ್ಯ ರಾಜ್ಯದಲ್ಲಿ ಡೆಂಗ್ಯೂ ಜೊತೆ ನಿಫಾ ವೈರಸ್ ಆತಂಕ ಶುರುವಾಗಿದೆ.

ನಿಫಾ ಇರೋದನ್ನ ಆರೋಗ್ಯ ಸಚಿವರು ದೃಢಪಡಿಸಿದ್ದಾರೆ. ನಿಫಾ ಸೋಂಕಿತ ಬಾಲಕನನ್ನು ಕೊಯಿಕ್ಕೋಡ್ ಆಸ್ಪತ್ರೆಯ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ಮನೆಯವರು ಮಾಸ್ಕ್ ಧರಿಸುವಂತೆ ನಿರ್ದೇಶನ ನೀಡಲಾಗಿದೆ. ಬಾಲಕನ ಭೇಟಿಗೆ ಯಾರಿಗೂ ಅವಕಾಶ ಕೊಡದೇ ಚಿಕಿತ್ಸೆ ಮುಂದುವರೆದಿದೆ.

ನಿಫಾ ವೈರಸ್ ಏನು ಎತ್ತ?

ಬಾವಲಿ ಮತ್ತು ಹಂದಿಗಳ ದೈಹಿಕ ದ್ರವದ ಮೂಲಕ ನಿಫಾ ವೈರಸ್ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೂ ವೈರಸ್ ಹರಡಿದ ಉದಾಹರಣೆ ಇದೆ. ನಿಫಾ ವೈರಸ್ ಸೋಂಕಿಗೆ ಸದ್ಯ ಯಾವುದೇ ಚಿಕಿತ್ಸೆ ಇಲ್ಲ. ಹಾಗಾಗಿ ಮರಣ ಪ್ರಮಾಣ ಶೇ.70ರಷ್ಟಿದೆ.

ಇದನ್ನೂ ಓದಿ: ಡೆಂಗ್ಯೂ ಬಗ್ಗೆ ರೀಲ್ಸ್ ಮಾಡಿದರೆ ಲಕ್ಷ ರೂಪಾಯಿ ಬಹುಮಾನ! ಬಿಬಿಎಂಪಿ ದುಂದುವೆಚ್ಚದ ನಡೆಗೆ ಸಾರ್ವಜನಿಕರ ವಿರೋಧ

ನಿಫಾ ವೈರಸ್ ತಗುಲಿದಾಗ ಮೊದಲಿಗೆ ಜ್ವರ ಕಾಣಿಸಿಕೊಳ್ಳುತ್ತೆ. ಉಸಿರಾಟದ ತೊಂದರೆ, ತಲೆನೋವು, ವಾಂತಿ ಆಗುತ್ತದೆ. ಮೆದುಳಿನ ಉರಿಯೂತ, ದೇಹದಲ್ಲಿ ಸೆಳೆತ ಉಂಟಾಗಬಹುದು. ಸೋಂಕಿತ ವ್ಯಕ್ತಿ ಕೋಮಾ ಸ್ಥಿತಿಗೆ ಜಾರಿ ಮೃತಪಡಬಹುದು.

ರಾಜ್ಯದಲ್ಲಿ 24 ಗಂಟೆಯಲ್ಲಿ 486 ಡೆಂಗ್ಯೂ ಕೇಸ್ ದಾಖಲು

ಇನ್ನು ರಾಜ್ಯದಲ್ಲಿ ದಿನೇದಿನೆ ಡೆಂಗ್ಯೂ ಕೇಸ್​ಗಳು ಹೆಚ್ಚುತ್ತಿವೆ. ಕಳೆದ 24 ಗಂಟೆಯಲ್ಲಿ 486 ಡೆಂಗ್ಯೂ ಕೇಸ್ ದಾಖಲಾಗಿದೆ. ಬೆಂಗಳೂರಲ್ಲಿ ಒಂದೇ ದಿನದಲ್ಲಿ 296 ಕೇಸ್ ದಾಖಲಾಗಿದ್ದು, ಆ ಮೂಲಕ ಒಟ್ಟು 486 ಕೇಸ್​ಗಳು ಸಕ್ರಿಯವಾಗಿವೆ. ರಾಜ್ಯದಲ್ಲಿ ಡೆಂಗ್ಯೂ ಕೇಸ್​ಗಳ ಸಂಖ್ಯೆ 13,754ಕ್ಕೆ ಏರಿಕೆ ಆಗಿದೆ.

ಆಗಸ್ಟ್ ವೇಳೆಗೆ ಡೆಂಘೀ ಮತಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಅಂತ ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.