AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆಂಗ್ಯೂ ಬಗ್ಗೆ ರೀಲ್ಸ್ ಮಾಡಿದರೆ ಲಕ್ಷ ರೂಪಾಯಿ ಬಹುಮಾನ! ಬಿಬಿಎಂಪಿ ದುಂದುವೆಚ್ಚದ ನಡೆಗೆ ಸಾರ್ವಜನಿಕರ ವಿರೋಧ

ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿವೆ. ಇತ್ತ ಡೆಂಗ್ಯೂಗೆ ಕಡಿವಾಣ ಹಾಕಬೇಕಿದ್ದ ನಗರ ಪಾಲಿಕೆ, ಸೂಕ್ತ ಕ್ರಮ ಕೈಗೊಳ್ಳುವ ಬದಲು ಜಾಗೃತಿ ನೆಪದಲ್ಲಿ ದುಂದುವೆಚ್ಚಕ್ಕೆ ಕೈ ಹಾಕಿದೆ. ಇದಕ್ಕೆ ಜನರ ವಿರೋಧ ವ್ಯಕ್ತವಾಗುತ್ತಿದೆ. ಡೆಂಗ್ಯೂ ಬಗ್ಗೆ ಅರಿವು ಮೂಡಿಸಲು ಹೊರಟಿರುವ ಪಾಲಿಕೆ, ಆ ವಿಷಯದಲ್ಲಿ ರೀಲ್ಸ್ ಮಾಡಿದವರಿಗೆ ಲಕ್ಷ ಲಕ್ಷ ಬಹುಮಾನ ಕೊಡಲು ಮುಂದಾಗಿದೆ!

ಡೆಂಗ್ಯೂ ಬಗ್ಗೆ ರೀಲ್ಸ್ ಮಾಡಿದರೆ ಲಕ್ಷ ರೂಪಾಯಿ ಬಹುಮಾನ! ಬಿಬಿಎಂಪಿ ದುಂದುವೆಚ್ಚದ ನಡೆಗೆ ಸಾರ್ವಜನಿಕರ ವಿರೋಧ
ಡೆಂಗ್ಯೂ ಬಗ್ಗೆ ರೀಲ್ಸ್ ಮಾಡಿದರೆ ಲಕ್ಷ ರೂಪಾಯಿ ಬಹುಮಾನ!
ಶಾಂತಮೂರ್ತಿ
| Updated By: Ganapathi Sharma|

Updated on: Jul 19, 2024 | 8:17 AM

Share

ಬೆಂಗಳೂರು, ಜುಲೈ 19: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು, ಗುರುವಾರ ಒಂದೇ ದಿನ ನಗರದಲ್ಲಿ 524 ಪ್ರಕರಣಗಳು ವರದಿಯಾಗಿವೆ. ಇತ್ತ ಡೆಂಗ್ಯೂಗೆ ಕಡಿವಾಣ ಹಾಕಲು ಮನೆ ಮನೆ ಸರ್ವೇ ಮಾಡುತ್ತೇವೆ ಎಂದು ಹೊರಟಿದ್ದ ಬಿಬಿಎಂಪಿ, ಇದೀಗ ಇದರ ಜೊತೆಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲು ಮುಂದಾಗಿದೆ. ಸದ್ಯ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ರೀಲ್ಸ್ ಮಾಡಿದವರಿಗೆ ಬಂಪರ್ ಬಹುಮಾನ ಘೋಷಿಸಿರುವ ಪಾಲಿಕೆ, ಆ ಮೂಲಕ ಜಾಗೃತಿ ಮೂಡಿಸಲು ಹೊರಟಿದೆ.

ಸೋಷಿಯಲ್ ಮೀಡಿಯಾದಲ್ಲಿ ಡೆಂಗ್ಯೂ ಕುರಿತ ರೀಲ್ಸ್​ಗಳನ್ನು ಆಹ್ವಾನಿಸಿರುವ ಪಾಲಿಕೆ, ಮೊದಲ ಐದು ಉತ್ತಮ ರೀಲ್ಸ್​ಗಳಿ ತಲಾ 25 ಸಾವಿರ ರೂಪಾಯಿ ಬಹುಮಾನ ಘೋಷಿಸಿದೆ. ಇನ್ನು ದ್ವೀತಿಯ ಬಹುಮಾನದಲ್ಲಿ ಐದು ಜನರಿಗೆ ತಲಾ 10 ಸಾವಿರ ರೂಪಾಯಿ ನಿಗದಿ ಮಾಡಿದ್ದು, ಯಾವ ಶಾಲೆ ಹೆಚ್ಚು ವಿದ್ಯಾರ್ಥಿಗಳ ಬಳಿ ರೀಲ್ಸ್ ಮಾಡಿಸುತ್ತದೆಯೋ ಆ ಶಾಲೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಅಲ್ಲದೇ ಮಕ್ಕಳಿಗೆ ಜಾಗೃತಿ ಮೂಡಿಸುವ ವಿಡಿಯೋ ಮಾಡಲು ಉತ್ತೇಜಿಸೋ ಶಿಕ್ಷಕಿಯರಿಗೂ 35 ಸಾವಿರ ರೂಪಾಯಿ ಬಹುಮಾನದ ಆಫರ್ ಕೊಟ್ಟಿದೆ.

ಇತ್ತ ಬಿಬಿಎಂಪಿಯ ಈ ರೀಲ್ಸ್ ಕಾಂಪಿಟೇಷನ್​ಗೆ ಸಾರ್ವಜನಿಕರಿಂದ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಪಾಲಿಕೆ ಡೆಂಗ್ಯೂ ಬಗ್ಗೆ ಅರಿವು ಮೂಡಿಸಲು ಹೊರಟಿರೋದೇನೋ ಸರಿ. ಆದ್ರೆ ನಗರದಲ್ಲಿ ಸರಿಯಾಗಿ ಸ್ವಚ್ಛತೆ ಕಾಪಾಡಬೇಕು, ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಮಕ್ಕಳಿಗೆ ಈ ರೀತಿ ರೀಲ್ಸ್ ಮಾಡಿಸುತ್ತಿರುವುದರಿಂದ ಏನೂ ಪ್ರಯೋಜನ ಇಲ್ಲ ಅಂತಾ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ರೀಲ್ಸ್ ಸ್ಪರ್ಧೆಗೆ ಸೋಷಿಯಲ್ ಮೀಡಿಯಾ ಬಳಸಿಕೊಳ್ಳುತ್ತಿರುವ ಪಾಲಿಕೆಯ ಆರೋಗ್ಯ ವಿಭಾಗ, ರೀಲ್ಸ್ ಹಂಚಿಕೊಂಡ ಪ್ರತಿಯೊಬ್ಬರಿಗೂ ಡೆಂಗ್ಯೂ ವಾರಿಯರ್ ಎಂಬ ಪಟ್ಟ ನೀಡುತ್ತಿದೆ.

ಇದನ್ನೂ ಓದಿ: ರಾಜ್ಯದ 55 ಕಡೆ ಲೋಕಾಯುಕ್ತ ದಾಳಿ, ಅಧಿಕಾರಿಗಳ ಮನೆಯಲ್ಲಿ ತಲಾಶ್​

ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಮುಂದಾಗಿರೋದು ಸರಿ, ಆದ್ರೆ ಈ ಕೆಲಸ ಬರೀ ರೀಲ್ಸ್​​ಗೆ ಸೀಮಿತವಾಗಬಾರದು. ಲಕ್ಷ ಲಕ್ಷ ಹಣವನ್ನ ರೀಲ್ಸ್ ಗೆ ಕೊಡುವ ಬದಲು ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜನರು ಸಲಹೆ ನೀಡುತ್ತಿದ್ದು, ಪಾಲಿಕೆಯ ಈ ರೀಲ್ಸ್ ಸ್ಪರ್ಧೆ ಡೆಂಗ್ಯೂ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆಯಾ ಅಥವಾ ಪಾಲಿಕೆ ಬೊಕ್ಕಸದ ಹಣ ಖಾಲಿ ಮಾಡಲು ದಾರಿಯಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ