ರೈತನಿಗೆ ಅಪಮಾನ: ಬಿಬಿಎಂಪಿ ನೋಟಿಸ್ಗೆ ಜಿಟಿ ಮಾಲ್ ಉತ್ತರಿಸಿದ್ದು ಹೀಗೆ
ಪಂಚೆಯುಟ್ಟುಕೊಂಡು ಬಂದ ರೈತನಿಗೆ ಮಾಲ್ ಒಳಗಡೆ ಪ್ರವೇಶ ನೀಡದೆ ಜಿಟಿ ಮಾಲ್ನ ಸೆಕ್ಯೂರಿಟಿ ಅವಮಾನಿಸಿದ್ದನು. ಇದು ಜಿಟಿ ಮಾಲ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದ್ದು, 7 ದಿನ ಮಾಲ್ ಬಂದ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಬಿಬಿಎಂಪಿ ನೋಟಿಸಿಗೆ ಜಿಟಿ ಮಾಲ್ ಸಿಇಒ ಉತ್ತರ ನೀಡಿದ್ದಾರೆ.
ಬೆಂಗಳೂರು, ಜುಲೈ 19: ಪಂಚೆಯುಟ್ಟ ರೈತನಿಗೆ ಒಳಗಡೆ ಪ್ರವೇಶ ನೀಡದಿರಲು ಕಾರಣವೇನು ಎಂದು ಬಿಬಿಎಂಪಿ (BBMP) ಅಧಿಕಾರಿಗಳು ಜಿಟಿ ಮಾಲ್ಗೆ (GT Mall) ನೋಟಿಸ್ ನೀಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ನೋಟಿಸ್ಗೆ ಜಿಟಿ ಮಾಲ್ ಸಿಇಒ ಪ್ರಶಾಂತ್ ಆನಂದ್ ಉತ್ತರಿಸಿದ್ದು, “ಘಟನೆಯಿಂದ ನಮಗೂ ತೀವ್ರ ಬೇಸರವಾಗಿದೆ. ಪಂಚೆ ನಮ್ಮ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಉಡುಗೆಯಾಗಿದೆ. ಜಿಟಿ ಮಾಲ್ನಲ್ಲೂ ಸಾಕಷ್ಟು ಮಳಿಗೆಗಳಲ್ಲಿ ಪಂಚೆ ಮಾರಲಾಗುತ್ತಿದೆ. ರೈತನನ್ನು ಒಳಗೆ ಬಿಡದ ಭದ್ರತಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಪಂಚೆ ಧರಿಸುವವರಿಗೆ ಮಾಲ್ ಪ್ರವೇಶವಿಲ್ಲವೆಂಬುದು ಶುದ್ಧ ಸುಳ್ಳು. ಈ ಹಿಂದೆಯೂ ಹಲವು ಗ್ರಾಹಕರು ಪಂಚೆ ಧರಿಸಿ ಮಾಲ್ಗೆ ಬಂದಿದ್ದಾರೆ. ಇಂತಹ ಘಟನೆ ಮರುಕಳಿಸುವುದಿಲ್ಲವೆಂದು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಏನಿದು ಘಟನೆ
ಜುಲೈ 17 ರಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್ಗೆ ಹಾವೇರಿ ಮೂಲದ ಕುಟುಂಬವೊಂದು ಕಲ್ಕಿ ಸಿನಿಮಾ ವೀಕ್ಷಣೆಗೆ ಬಂದಿತ್ತು. ಅದರಲ್ಲಿ ಫಕೀರಪ್ಪ ಎಂಬ ವೃದ್ಧರೊಬ್ಬರು ಪಂಚೆ ಧರಿಸಿ ಬಂದಿದ್ದರು. ಪಂಚೆ ಧರಿಸಿದ್ದಾರೆ ಎಂಬ ಏಕಮಾತ್ರ ಕಾರಣಕ್ಕೆ ಜಿ.ಟಿ.ಮಾಲ್ನ ಸೆಕ್ಯೂರಿಟಿ ಪ್ರವೇಶಕ್ಕೆ ನಿರಾಕರಣೆ ಮಾಡಿದ್ದರು.
ವೃದ್ಧನನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಮಾಲ್ ಮುಂದೆ ಕೂರಿಸಿದ್ದರು. ಇದರಿಂದ ತೀವ್ರ ಅವಮಾನಕ್ಕೊಳಗಾದ ಫಕೀರಪ್ಪನವರ ಪುತ್ರ ನಾಗರಾಜ್ ಮಾಲ್ನವರಿಗೆ ಒಳಗೆ ಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಮಾಲ್ನವನು ಯಾವಾಗ ಪ್ರವೇಶವನ್ನು ನೀರಾಕರಣೆ ಮಾಡಿದ ನಾಗರಾಜ್ ವಿಡಿಯೋ ಮಾಡಿ ತಮ್ಮ ನೋವು ತೋಡಿಕೊಂಡರು.
ಇದನ್ನೂ ಓದಿ: ಮತ್ತೊಮ್ಮೆ ಕ್ಷಮೆಯಾಚಿಸಿ ಸ್ವಯಂಪ್ರೇರಿತವಾಗಿ ಜಿಟಿ ಮಾಲ್ ಬಂದ್ ಮಾಡಿದ ಮಾಲೀಕ
ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಯ ಕಾರ್ಯಕರ್ತರು ಪಂಚೆ ಉಟ್ಟು ಜಿಟಿ ಮಾಲ್ ಮುಂದೆ ಪ್ರತಿಭಟನೆ ಮಾಡಿದರು. ಸಂಘಟನೆಗಳ ಹೋರಾಟಕ್ಕೆ ಬಗ್ಗಿದ ಜಿಟಿ ಮಾಲ್ ಆಡಳಿತ ಮಂಡಳಿ ರೈತ ಫಕೀರಪ್ಪ ಅವರಿಗೆ ಕ್ಷಮೆಯಾಚಿಸಿ, ಸನ್ಮಾನ ಮಾಡಿದರು.
ರೈತ ಫಕೀರಪ್ಪ ಜೊತೆ ಮಾಲ್ ವೀಕ್ಷಿಸಿದ ಶಾಸಕ
ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ ಪ್ರಕಾಶ್ ಕೋಳಿವಾಡ ಅವರು ಶುಕ್ರವಾರ ರೈತ ಫಕೀರಪ್ಪ ಅವರೊಂದಿಗೆ ಬೆಂಗಳೂರಿನ ಮಾಲ್ ಆಫ್ ಏಷ್ಯಾಕ್ಕೆ ತೆರಳಿ, ಕೆಲ ಸಮಯ ಅವರೊಂದಿಗೆ ಮಾಲ್ ವೀಕ್ಷಿಸಿ, ಚಹಾ ಕುಡಿದರು.
7 ದಿನ ಮಾಲ್ ಬಂದ್
ರೈತ ಫಕೀರಪ್ಪ ಅವರಿಗೆ ಅವಮಾನ ಮಾಡಿದ ವಿಚಾರ ಸದನದಲ್ಲೂ ಚರ್ಚೆಯಾಯಿತು. ಮೂರನೇ ದಿನ ಸದನ ಆರಂಭದಲ್ಲಿ ಓರ್ವ ರೈತರಿಗೆ ಅಪಮಾನ ಮಾಡಿದ ಜಿಟಿ ಮಾಲ್ ವಿಚಾರ ಮುನ್ನಲೆಗೆ ಬಂತು. ಈ ಚರ್ಚೆ ವೇಳೆ ಪಕ್ಷಾತೀತವಾಗಿ ಎಲ್ಲ ಶಾಸಕರು ಒಕ್ಕೋರಲಿನಿಂದ ಜಿಟಿ ಮಾಲ್ ಬಂದ್ ಮಾಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದರು. ಶಾಸಕರ ಒತ್ತಡಕ್ಕೆ ಮಣಿದ ಸರ್ಕಾರ 7 ದಿನಗಳ ಕಾಲ ಜಿಟಿ ಮಾಲ್ ಬಂದ್ ಮಾಡಿಸುವುದಾಗಿ ಆದೇಶ ಹೊರಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 am, Fri, 19 July 24