ಜಿಟಿ ಮಾಲ್ಗೆ ಬೀಗ ಜಡಿಯಲು ಪಾಲಿಕೆ ಮೀನಾಮೇಷ: ಸೂಕ್ತ ಕಾರಣ ಸಿಗದೇ ಗೊಂದಲಕ್ಕೆ ಸಿಲುಕಿದ ಬಿಬಿಎಂಪಿ
ಪಂಚೆಯ ವಿಚಾರ ವಿಧಾನಸಭೆಯ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ. ಜಿಟಿ.ಮಾಲ್ ಮುಚ್ಚಿಸುವಂತೆ ಸದನದಲ್ಲಿ ಬಹುತೇಕ ಶಾಸಕರು ಒತ್ತಾಯಿಸಿದ್ದಾರೆ. ಆದರೆ ಮಾಲ್ಗೆ ಬೀಗ ಜಡಿಯಲು ಸೂಕ್ತ ಕಾರಣ ಸಿಗದ ಹಿನ್ನೆಲೆ ಬಿಬಿಎಂಪಿಯಿಂದ ಮೀನಾಮೇಷ ಮಾಡಲಾಗುತ್ತಿದೆ. ಕೇವಲ ಅಂಗಡಿಗಳಿಗೆ ನೋಟಿಸ್ ನೀಡಲು ಪ್ಲ್ಯಾನ್ ಮಾಡಲಾಗುತ್ತಿದೆ.
ಬೆಂಗಳೂರು, ಜುಲೈ 18: ನಿನ್ನೆಯಷ್ಟೇ ನಗರದ ಜಿಟಿ ಮಾಲ್ನಲ್ಲಿ (GT Mall) ಪಂಚೆ ಧರಿಸಿದ್ದಾರೆ ಎನ್ನುವ ಕಾರಣಕ್ಕೆ, ಮಾಲ್ನ ಒಳಗೆ ರೈತನನ್ನ ಬಿಟ್ಟಿರಲಿಲ್ಲ. ಇದೇ ವಿಚಾರವಾಗಿ ಆಕ್ರೋಶಭುಗಿಲೆದ್ದಿತ್ತು. ಇದೀಗ ಪಂಚೆ ಫೈಟ್ ಜಿಟಿ ಮಾಲ್ನಿಂದ ವಿಧಾನಸೌಧದವರೆಗೂ ಹೋಗಿದ್ದು, ಮಾಲ್ಗೂ ಬೀಗ ಜಡಿಯುವ ಪರಿಸ್ಥಿತಿ ಬಂದಿದೆ. ಆದರೆ ಸೂಕ್ತ ಕಾರಣ ಸಿಗದ ಹಿನ್ನೆಲೆ ಮಾಲ್ಗೆ ಬೀಗ ಜಡಿಯಲು ಬಿಬಿಎಂಪಿಯಿಂದ (BBMP) ಮೀನಾಮೇಷ ಮಾಡಲಾಗುತ್ತಿದೆ.
ಈವರೆಗೆ ಪಾಲಿಕೆಗೆ ಸರ್ಕಾರದಿಂದ ಯಾವುದೇ ಲಿಖಿತ ಆದೇಶ ಬಂದಿಲ್ಲ. ಹೀಗಾಗಿ ಕೇವಲ ಅಂಗಡಿಗಳಿಗೆ ನೋಟಿಸ್ ನೀಡಲು ಬಿಬಿಎಂಪಿ ಪ್ಲ್ಯಾನ್ ಮಾಡಿದೆ. ಜಿಟಿ ಮಾಲ್ಗೆ ಬೀಗ ಹಾಕಲು ಬಲವಾದ ಕಾರಣ ಇಲ್ಲ. ಹಿರಿಯ ಅಧಿಕಾರಿಗಳು ಕೂಡ ಯಾವುದೇ ಮಾಹಿತಿ ನೀಡಿಲ್ಲ. ಈ ಹಿನ್ನೆಲೆ ಮಾಲ್ನಲ್ಲಿನ ಕೆಲ ಅಂಗಡಿಗಳಿಗೆ ನೋಟಿಸ್ ನೀಡಲು ಪ್ಲ್ಯಾನ್ ಮಾಡುತ್ತಿರುವುದಾಗಿ ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ರೈತನಿಗೆ ಅಪಮಾನ: 7 ದಿನ ಜಿಟಿ ಮಾಲ್ ಬಂದ್, ಸರ್ಕಾರ ಆದೇಶ
ಬೀಗ ಹಾಕುವ ಮುನ್ನ ನೋಟಿಸ್ ನೀಡಿರಬೇಕು. ಆದರೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಅಲ್ಲದೇ ಮಾಲ್ ಮಾಲೀಕರ ಗಮನಕ್ಕೂ ತಂದಿಲ್ಲ. ಹಾಗಾಗಿ ಏಕಾಏಕಿ ಬೀಗ ಹಾಕಲು ಸಕಾರಣ ಇಲ್ಲದೇ ಪಾಲಿಕೆ ಪೇಚಿಗೆ ಸಿಲುಕಿದೆ. ಸದ್ಯ ಜಂಟಿ ಆಯುಕ್ತರ ಆಗಮನಕ್ಕೆ ಪಾಲಿಕೆ ಸಿಬ್ಬಂದಿ ಕಾಯುತ್ತಿದ್ದಾರೆ. ಇತ್ತ ಮಾಲ್ ಮಾಲೀಕರು ಕೋರ್ಟ ಮೊರೆ ಹೋದರೆ ಏನು ಉತ್ತರ ಕೊಡುವುದು ಅಂತಾ ಚಿಂತಿಸುತ್ತಿದ್ದಾರೆ. ಈ ಹಿನ್ನೆಲೆ ಏನು ಮಾಡಲು ತೋಚದೇ ಸುಮ್ಮನೆ ಪಾಲಿಕೆ ಅಧಿಕಾರಿಗಳು ಓಡಾಡಿಕೊಂಡಿದ್ದಾರೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಜಿಟಿ ಮಾಲ್
ಈ ಪ್ರಕರಣ ಒಂದು ಕಡೆಯಾದರೆ ಇದೀಗ ಜಿಟಿ ಮಾಲ್ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಕಳೆದ ಎರಡು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಇಂದು ಮಧ್ಯಾಹ್ನ 1.30ಕ್ಕೆ ವರದಿ ಪಾಲಿಕೆಯ ಕೈ ಸೇರಲಿದೆ.
ಇದನ್ನೂ ಓದಿ: ಜಿಟಿ ಮಾಲ್ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಿಸಬೇಕು: ಶರಣಗೌಡ ಕಂದ್ಕೂರ್
ಕೋರ್ಟ್ ಮೆಟ್ಟಿಲೇರಿದ್ದರಿಂದ ಮಧ್ಯಾಹ್ನದ ಬಳಿಕ ಪಾಲಿಕೆಗೆ ಕೋರ್ಟ್ ಸೂಚನೆ ನೀಡಲಿದೆ. ಸದ್ಯ ದಿನಾಂಕ 31ರ ವರೆಗೆ ಬಾಕಿ ಪಾವತಿಗೆ ಅವಕಾಶ ಇದೆ. ಆದರೆ ತೆರಿಗೆ ಬಾಕಿ ಮಧ್ಯೆ ಇದೀಗ ಪಂಚೆ ಸಂಕಷ್ಟ ಎದುರಾಗಿತ್ತು. ಈ ಎಲ್ಲಾ ಕಾರಣಗಳಿಂದ ಮಾಲ್ಗೆ ಬಹುತೇಕ ಬೀಗ ಬೀಳುವುದು ಫಿಕ್ಸ್ ಎಂದು ಬಿಬಿಎಂಪಿ ಅಧಿಕಾರಿಗಳಿಂದ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.