ರೈತನಿಗೆ ಅಪಮಾನ: 7 ದಿನ ಜಿಟಿ ಮಾಲ್ ಬಂದ್, ಸರ್ಕಾರ ಆದೇಶ
ಕರ್ನಾಟಕ ವಿಧಾನ ಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು, ಅಧಿವೇಶನ ಆರಂಭದಲ್ಲೇ ಜಿಟಿ ಮಾಲ್ ವಿಚಾರವಾಗಿ ಚರ್ಚೆ ನಡೆಯಿತು. ರೈತನನ್ನು ಒಳಗಡೆ ಬಿಡದೆ ಅವಮಾನ ಮಾಡಿದ ಜಿಟಿ ಮಾಲ್ ಅನ್ನು ಏಳು ದಿನ ಮುಚ್ಚಿಸಲಾಗುವುದು ಎಂದು ಅಧಿವೇಶನಕ್ಕೆ ಸಚಿವರು ತಿಳಿಸಿದರು.
ಕರ್ನಾಟಕ ವಿಧಾನಮಂಡಲ (Karnataka legislative Assembly Session) ಮುಂಗಾರು ಅಧಿವೇಶನ ಆರಂಭವಾಗಿದ್ದು, ಮೂರನೇ ದಿನಕ್ಕೆ ಕಾಲಿಟ್ಟಿದೆ. ಮೂರನೇ ದಿನವಾದ ಇಂದು (ಜುಲೈ.18) ಅಧಿವೇಶನ ಆರಂಭವಾಗಿದೆ. ಅಧಿವೇಶನ ಆರಂಭದಲ್ಲೇ ಜಿಟಿ ಮಾಲ್ ವಿಚಾರವಾಗಿ ಚರ್ಚೆ ನಡೆಯಿತು. ಬೆಂಗಳೂರಿನ ಜಿಟಿ ಮಾಲ್ ಒಳಗಡೆ ಓರ್ವ ರೈತರಿಗೆ ಬಿಡದೆ ಅವಮಾನ ಮಾಡಿರುವ ಇರುವ ವಿಚಾರವಾಗಿ ಚರ್ಚೆ ನಡೆಯಿತು. ರೈತನನ್ನು ಮಾಲ್ ಒಳಗಡೆ ಬಿಡದೆ ಅವಮಾನಿಸಲಾಗಿದೆ ಎಂದು ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಒಕ್ಕೊರಲಿನಿಂದ ಧ್ವನಿ ಎತ್ತಿದರು. ಶಾಸಕರ ಒತ್ತಾಯಾಕ್ಕೆ ಮಣಿದ ಸರ್ಕಾರ ಮಾಗಡಿ ರಸ್ತೆಯಲ್ಲಿರುವ ಜಿ.ಟಿ.ಮಾಲ್ ಅನ್ನು ಏಳು ದಿನ ಮುಚ್ಚಿಸಲಾಗುವುದು ಎಂದು ಸಚಿವರು ಅಧಿವೇಶಕ್ಕೆ ತಿಳಿಸಿದರು.
ಸರ್ಕಾರದ ಮೇಲೆ ಶಾಸಕರ ಒತ್ತಡ
ಮಾಲ್ ಸೆಕ್ಯುರಿಟಿ ಏಜೆನ್ಸಿ ಮೇಲೆ ಕ್ರಮ ಆಗಬೇಕು. ಮಾಲ್ ಮಾಲೀಕರ ಮೇಲೆ ಎಫ್ಐಆರ್ ಆಗಬೇಕು ಎಂದು ಗುರುಮಿಠಕಲ್ ಕಾಂಗ್ರೆಸ್ ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು. ಬಳಿಕ ಮಾತನಾಡಿದ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ವರದಿ ತರಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಇದಕ್ಕೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಆಕ್ಷೇಪ ವ್ಯಕ್ತಪಡಿಸಿದ್ದು “ವರದಿ ತರಿಸಿಕೊಂಡು ಏನು ಕ್ರಮ ಕೈಗೊಳ್ಳುತ್ತೀರಿ? ಸಚಿವರಾಗಿ ಈ ರೀತಿ ಮಾತಾಡಬೇಡಿ. ಇದು ರೈತರ ವಿಚಾರ ಗಂಭೀರವಾಗಿ ಪರಿಗಣಿಸಿ. ಕೂಡಲೆ ಮಾಲ್ಗೆ ಒಂದು ವಾರ ವಿದ್ಯುತ್ ಸರಬರಾಜು ಬಂದ್ ಮಾಡಿ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಒತ್ತಾಯಿಸಿದರು.
ಬಳಿಕ ವಿಧಾನಸಭೆ ಸಭಾಪತಿ ಯುಟಿ ಖಾದರ್, ಸರ್ಕಾರ ಏನು ಕ್ರಮ ಕೈಗೊಳ್ಳುತ್ತೆ ಎಂದು ಸ್ಪಷ್ಟಪಡಿಸಿ ಎಂದು ಸಚಿವರಿಗೆ ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ “ಈಗಾಗಲೇ ಬಿಬಿಎಂಪಿ ಮುಖ್ಯ ಆಯುಕ್ತರ ಜೊತೆ ಚರ್ಚೆ ಮಾತಾಡಿದ್ದೇವೆ. 7 ದಿನ ಜಿ.ಟಿ.ಮಾಲ್ ಮುಚ್ಚಿಸಲಾಗುತ್ತದೆ. ಕಾನೂನಿನಲ್ಲಿ ಅವಕಾಶ ಇದೆ ಎಂದಿದ್ದಾರೆ” ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

