ಮಳೆಗೆ ಉಕ್ಕಿ ಹರಿಯುತಿದೆ ಕೃಷ್ಣಾ ನದಿ: ಪ್ರವಾಹ ಎದುರಿಸಲು ಟೊಂಕ ಕಟ್ಟಿ ನಿಂತ ಬಾಗಲಕೋಟೆ ಜಿಲ್ಲಾಡಳಿತ
ಮಹಾರಾಷ್ಟ್ರದಲ್ಲಿ ಸುರಿದ ಅಬ್ಬರದ ಮಳೆಗೆ ಕೃಷ್ಣಾ ನದಿ ಉಕ್ಕಿ ಹರಿಯುತಿದೆ. ಹಿಪ್ಪರಗಿ ಬ್ಯಾರೇಜ್ನಿಂದ ಬೊರ್ಗರೆದು ಹರಿಯುತ್ತಿದೆ. ನಿರಂತರ ಮಳೆಗೆ ರೈತರು ಕಟ್ಟಿಸಿದ ಶ್ರಮಬಿಂದು ಸಾಗರ ಬ್ಯಾರೇಜ್ ಮುಳುಗಿದೆ. ಇದರ ಬೆನ್ನಲ್ಲೇ ಅಲರ್ಟ್ ಆದ ಬಾಗಲಕೋಟೆ ಜಿಲ್ಲಾಡಳಿತ ಪ್ರವಾಹ ಭೀತಿ ಎದುರಿಸಲು ಸಜ್ಜಾಗಿದೆ.
ಬಾಗಲಕೋಟೆ, ಜುಲೈ 20: ಉತ್ತರ ಕನ್ನಡ, ಉಡುಪಿ ಭಾಗದಲ್ಲಿ ಮಳೆ ಅವಾಂತರ ಕರ್ನಾಟಕವನ್ನು ಬೆಚ್ಚಿ ಬೀಳಿಸಿದೆ. ಇನ್ನೊಂದು ಕಡೆ ಮಹಾರಾಷ್ಟ್ರದ ಮಹಾ ಮಳೆಗೆ (Rain) ಕೃಷ್ಣಾ ನದಿ (Krishna River) ಉಕ್ಕಿ ಹರಿಯುತ್ತಿದೆ. ಇದರಿಂದ ಜಿಲ್ಲಾಡಳಿತ ಈಗಾಗಲೇ ಪ್ರವಾಹ ಎದುರಿಸಲು ಸಿದ್ದವಾಗಿ ನಿಂತಿದೆ. ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಮೂರು ನದಿಗಳು ಹರಿಯತ್ತವೆ. 2007, 2009, 2019 ಮತ್ತು 2020 ರಲ್ಲಿ ಜಿಲ್ಲೆ ಭೀಕರ ಪ್ರವಾಹ ಎದುರಿಸಿದೆ.
ಪ್ರವಾಹ ಆತಂಕದಲ್ಲಿ 203 ಹಳ್ಳಿಗಳು
ಇನ್ನು ಕರಾವಳಿಯಲ್ಲಿ ಈಗಾಗಲೆ ಮಳೆ ಬಲಿ ಪಡೆದುಕೊಂಡಿದೆ. ಇತ್ತ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದ ಕೃಷ್ಣಾ ನದಿ ಬೊರ್ಗರೆದು ಹರಿಯುತ್ತಿದೆ. 2019-2020ರ ಪ್ರವಾಹ ಪರದಾಟ ತಪ್ಪಿಸಲು ಜಿಲ್ಲಾಡಳಿತ ಸಕಲ ಸಿದ್ದಗೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಮೂರು ನದಿಗಳ ವ್ಯಾಪ್ತಿಯಲ್ಲಿ 203 ಹಳ್ಳಿಗಳು ಪ್ರವಾಹಕ್ಕೆ ಒಳಗಾಗುತ್ತವೆ. ಅದರಲ್ಲಿ 131 ಪೂರ್ಣ ಹಾನಿಗೊಳಗಾಗುತ್ತವೆ. 72 ಭಾಗಶಃ ಹಾನಿಯಾಗುತ್ತವೆ.
ಇದನ್ನೂ ಓದಿ: ಘಟಪ್ರಭಾ ನದಿಯಲ್ಲಿ ಬಲೆಗೆ ಬಿದ್ದ ಬೃಹತ್ ಗಾತ್ರದ ಮೀನು; ಅಚ್ಚರಿಗೊಂಡ ಗ್ರಾಮಸ್ಥರು
ಸದ್ಯ ಅಪಾಯ ಇಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ಡಿಸಿ, ಪ್ರತಿ ತಾಲ್ಲೂಕಿಗೆ ಒಬ್ಬರಂತೆ ಒಂಬತ್ತು ತಾಲ್ಲೂಕಿಗೆ ಒಂಬತ್ತು ನೋಡಲ್ ಅಧಿಕಾರಿ ನೇಮಿಸಲು ಸೂಚಿಸಿದ್ದಾರೆ. ಅಷ್ಟೆ ಅಲ್ಲದೆ 216 ಕಾಳಜಿ ಕೇಂದ್ರ ಗುರುತು ಮಾಡಿದ್ದಾರೆ.
ಕೃಷ್ಣಾ ನದಿ ನೀರಿನ ಪ್ರಮಾಣ ಹೆಚ್ಚಳ
ಜಿಲ್ಲೆಯಲ್ಲಿ 82 ಗ್ರಾಪಂ ವ್ಯಾಪ್ತಿಯಲ್ಲಿ 203 ಗ್ರಾಮಗಳು ಪ್ರವಾಹಕ್ಕೆ ಈಡಾಗುತ್ತವೆ. 120427 ಪ್ರವಾಹಬಾಧೆಗೆ ಈಡಾಗುತ್ತಾರೆ. 27945 ಪ್ರವಾಹಬಾಧೆಗೆ ಒಳಗಾಗುವ ಕುಟುಂಬ ಎಂದು ಗುರುತಿಸಲಾಗಿದೆ. ಪ್ರವಾಹ ವ್ಯಾಪ್ತಿಯಲ್ಲಿ 64339 ಜಾನುವಾರುಗಳಿವೆ. ಇದು ಜಿಲ್ಲಾದ್ಯಂತ ಪ್ರವಾಹ ನಿಯಂತ್ರ ಬಗ್ಗೆ ವಿವರವಾಗಿದೆ. ಆದರೆ ಸದ್ಯ ಮಹಾರಾಷ್ಟ್ರ ಮಳೆಯಿಂದ ಕೃಷ್ಣಾ ನದಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಇದರಿಂದ ಜಮಖಂಡಿ, ರಬಕವಿ-ಬನಹಟ್ಟಿ, ತೇರದಾಳ, ವ್ಯಾಪ್ತಿಯಲ್ಲಿ ಪ್ರವಾಹ ಆತಂಕ ಎದುರಾಗಲಿದೆ.
ಇದನ್ನೂ ಓದಿ: ಕೃಷ್ಣಾ ತೀರದಲ್ಲಿ ಒಂದೇ ತಿಂಗಳಲ್ಲಿ ಐದು ಮೃತದೇಹಗಳು ಪತ್ತೆ: ನದಿಗೆ ಶವಗಳ ಸ್ಪಾಟ್ ಎಂಬ ಕಳಂಕ?
ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ಕೃಷ್ಣಾ ನದಿಗೆ ಸಂಬಂಧಿಸಿದಂತೆ 9 ಗ್ರಾಮಗಳು, ಘಟಪ್ರಭಾ ನದಿಗೆ ಸಂಬಂಧಿಸಿದಂತೆ 3 ಗ್ರಾಮಗಳನ್ನು ಗುರುತಿಸಲಾಗಿದೆ. ಜಮಖಂಡಿ ತಾಲ್ಲೂಕಿನಲ್ಲಿ ಕೃಷ್ಣಾ ನದಿಗೆ 23 ಗ್ರಾಮಗಳು, ಮುಧೋಳ ತಾಲ್ಲೂಕಿನಲ್ಲಿ ಕೃಷ್ಣಾ ನದಿಗೆ 2 ಗ್ರಾಮ, ಘಟಪ್ರಭಾ ನದಿಗೆ 36 ಗ್ರಾಮಗಳು, ಬೀಳಗಿ ತಾಲ್ಲೂಕಿನಲ್ಲಿ ಕೃಷ್ಣಾ ನದಿಗೆ 11, ಘಟಪ್ರಭಾ ನದಿಗೆ 9 ಗ್ರಾಮಗಳು ಪ್ರವಾಹ ಬಾಧೆಗೆ ಒಳಗಾಗುತ್ತವೆ. ಇದರಿಂದ ಜಮಖಂಡಿ ಎಸಿ ಅವರು ಈ ಮೇಲ್ಕಂಡ ಗ್ರಾಮಸ್ಥರಿಗೆ ಮುನ್ಸೂಚನೆ ನೀಡಿದ್ದಾರೆ. ನಾಲ್ಕು ತಾಲ್ಲೂಕಿನಲ್ಲೂ ಎಸಿ ಅವರು ಸಭೆ ಮಾಡಿ, ಅಧಿಕಾರಿ ಸಿಬ್ಬಂದಿಗೆ ಪ್ರವಾಹ ಬಗ್ಗೆ ಜಾಗರೂಕರಾಗಿರಲು ಸೂಚನೆ ನೀಡಿದ್ದು, ವಾಹಕ್ಕೆ ಎದುರಿಸಲು ಸಕಲ ಸಿದ್ದರಾಗಿದ್ದಾರೆ.
ಮಹಾರಾಷ್ಟ್ರ ಮಳೆಗೆ ಸದ್ಯ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಮಳೆ ಹೀಗೆ ಮುಂದುವರೆದರೆ ಘಟಪ್ರಭಾ, ಮಲಪ್ರಭಾ ನದಿ ಕೂಡ ಭರ್ತಿಯಾಗಲಿದ್ದು, ಜಿಲ್ಲಾಡಳಿತ ಪ್ರವಾಹ ಎದುರಿಸಲು ಈಗಿಂದಲೇ ಮುಂಜಾಗೃತೆಯಲ್ಲಿ ತೊಡಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.