ಕೇರಳದ ಚುನಾವಣೆಯಲ್ಲಿ ಬಿಜೆಪಿ ಸೋಲು ಬಗ್ಗೆ ವ್ಯಂಗ್ಯ ವಿಡಿಯೊ ಪೋಸ್ಟ್ ಮಾಡಿದ ಕವಿ ಸಚ್ಚಿದಾನಂದನ್ ಫೇಸ್​ಬುಕ್ ಖಾತೆ ಬ್ಲಾಕ್

|

Updated on: May 09, 2021 | 4:24 PM

ಏಪ್ರಿಲ್ 21ರಂದು ನಾನು ಮೋದಿ ವಿರುದ್ಧ ಪೋಸ್ಟ್ ಹಾಕಿ ಮೋದಿ ರಾಜೀನಾಮೆ ನೀಡಬೇಕು ಎಂದು ಬರೆದಾಗ ಫೇಸ್​ಬುಕ್​​ನಿಂದ ಎಚ್ಚರಿಕೆ ಬಂದಿತ್ತು. ಇದು ಕೇಂದ್ರ ಸರ್ಕಾರ ಮತ್ತು ಫೇಸ್​ಬುಕ್​ನ ಸಂಚು ಎಂದು ಕವಿ ಕೆ. ಸಚ್ಚಿದಾನಂದನ್ ಹೇಳಿದ್ದಾರೆ.

ಕೇರಳದ ಚುನಾವಣೆಯಲ್ಲಿ ಬಿಜೆಪಿ ಸೋಲು ಬಗ್ಗೆ ವ್ಯಂಗ್ಯ ವಿಡಿಯೊ ಪೋಸ್ಟ್  ಮಾಡಿದ ಕವಿ ಸಚ್ಚಿದಾನಂದನ್  ಫೇಸ್​ಬುಕ್ ಖಾತೆ ಬ್ಲಾಕ್
ಕವಿ ಕೆ. ಸಚ್ಚಿದಾನಂದನ್ (ಕೃಪೆ: ಫೇಸ್​ಬುಕ್)
Follow us on

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡಿರುವ ಬಗ್ಗೆ ವ್ಯಂಗ್ಯದ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಕ್ಕೆ ಕೇರಳದ ಖ್ಯಾತ ಕವಿ ಕೆ.ಸಚ್ಚಿದಾನಂದನ್ ಅವರ ಫೇಸ್​ಬುಕ್ ಖಾತೆಯನ್ನು ಫೇಸ್​ಬುಕ್  ಸಂಸ್ಥೆ ಶುಕ್ರವಾರ 24 ಗಂಟೆಗಳ ಕಾಲ ಬ್ಲಾಕ್ ಮಾಡಿತ್ತು. ನನಗೆ ವಾಟ್ಸ್ ಆಪ್ ಮೂಲಕ ಸಿಕ್ಕಿದ ವಿಡಿಯೊವನ್ನು ನಾನು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದೆ ಎಂದು ಸಚ್ಚಿದಾನಂದನ್ ಹೇಳಿದ್ದು, ಈಘಟನೆಯಲ್ಲಿ ಬಿಜೆಪಿ ಕೈವಾಡ ಇಲ್ಲ ಎಂದು ಪಕ್ಷ ಹೇಳಿದೆ.

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ವ್ಯಂಗ್ಯದ ವಿಡಿಯೊವೊಂದನ್ನು ನಾನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದ್ದ ವಿಡಿಯೊ ಆಗಿತ್ತು ಅದು. ಈ ವಿಡಿಯೊ ಪೋಸ್ಟ್ ಮಾಡಿದ ನಂತರ ನನಗೆ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಕಾಮೆಂಟ್ ಮಾಡಲು ಫೇಸ್​ಬುಕ್ ಸಂಸ್ಥೆ ನಿರ್ಬಂಧ ವಿಧಿಸಿತ್ತು ಎಂದು ಎನ್​ಡಿಟಿವಿ ಜತೆ ಮಾತನಾಡಿದ ಸಚ್ಚಿದಾನಂದನ್ ಹೇಳಿದ್ದಾರೆ.

ಸಿನಿಮಾವೊಂದರ ದೃಶ್ಯದ ತುಣುಕು ಅದಾಗಿದ್ದು , ಸೋಲಿನ ನಂತರ ಹಿಟ್ಲರ್ ತನ್ನ ಸೈನಿಕರನ್ನುದ್ದೇಶಿಸಿ ಮಾತನಾಡುವ ಸಂಭಾಷಣೆಯ ಬದಲು ಮಲಯಾಳಂ ಸಂಭಾಷಣೆ ಬಳಸಿ ಅಮಿತ್ ಶಾ ಕೇರಳದ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ, ಸೋಲಿನ ಬಗ್ಗೆ ಮಾತನಾಡುವಂತೆ ಡಬ್ ಮಾಡಲಾಗಿತ್ತು. ಈ ಪೋಸ್ಟ್ ವ್ಯಂಗ್ಯವಾಗಿತ್ತು, ವಿಮರ್ಶಾತ್ಮಕವಾಗಿತ್ತು ಆದರೆ ಯಾರನ್ನೂ ಕೆಟ್ಟ ಪದಗಳಿಂದ ಬಯ್ಯುವುದಾಗಲೀ ಇರಲಿಲ್ಲ ಎಂದು ಸಚ್ಚಿದಾನಂದನ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಪೋಸ್ಟ್ ಹಾಕಿದಾಗ ನನಗೆ ಫೇಸ್​ಬುಕ್​ನಿಂದ ಎಚ್ಚರಿಕೆ ಬಂದಿತ್ತು. ಏಪ್ರಿಲ್ 21ರಂದು ನಾನು ಮೋದಿ ವಿರುದ್ಧ ಪೋಸ್ಟ್ ಹಾಕಿ ಮೋದಿ ರಾಜೀನಾಮೆ ನೀಡಬೇಕು ಎಂದು ಬರೆದಾಗ ಫೇಸ್​ಬುಕ್​​ನಿಂದ ಎಚ್ಚರಿಕೆ ಬಂದಿತ್ತು. ಇದು ಕೇಂದ್ರ ಸರ್ಕಾರ ಮತ್ತು ಫೇಸ್​ಬುಕ್​ನ ಸಂಚು . ಯಾಕೆಂದರೆ ಭಾರತದಲ್ಲಿ ಫೇಸ್ ಬುಕ್ ಬಳಕೆದಾರರು ಜಾಸ್ತಿ ಇದ್ದಾರೆ. ಬಿಜೆಪಿಗೆ ದೊಡ್ಡದಾಗ ಐಟಿ ಸೆಲ್ ಇದೆ, ಅವರು ನಮ್ಮನ್ನು ಗಮನಿಸುತ್ತಿರಬಹುದು.  ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾದ ನಡೆ. ನಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಲು ನಮ್ಮ ಟೀಕೆಗಳನ್ನು ವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮ ಅನುಮತಿಸಬೇಕು. ಇದು ದಬ್ಬಾಳಿಕೆ ಎಂದು ಸಚ್ಚಿದಾನಂದನ್ ಹೇಳಿದ್ದಾರೆ.

ಈ ಘಟನೆಯಲ್ಲಿ ಬಿಜೆಪಿ ತಮ್ಮದೇನೂ ಪಾತ್ರವಿಲ್ಲ ಎಂದು ಹೇಳಿದೆ. ಕವಿ ಸಚ್ಚಿದಾನಂದನ್ ಅವರ ಪೋಸ್ಟ್ ಡಿಲೀಟ್ ಆಗಿರುವ ಬಗ್ಗೆ ಅಥವಾ ಫೇಸ್​ಬುಕ್ ಕ್ರಮ ಕೈಗೊಂಡಿರುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿಯ ಕೈವಾಡವಿಲ್ಲ. ಇದಕ್ಕೆಲ್ಲ ಫೇಸ್​ಬುಕ್ ವಿವರಣೆ ನೀಡಬೇಕು ಎಂದು ಎನ್​ಡಿಎ ರಾಜ್ಯ ಸಂಚಾಲಕ ಪಿ.ಕೆ. ಕೃಷ್ಣದಾಸ್ ಹೇಳಿದ್ದಾರೆ.
ಇತ್ತೀಚಿನ ಕೇರಳ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ್ದಕ್ಕಾಗಿ ಪ್ರಮುಖ ಸಮಕಾಲೀನ ಮಲಯಾಳಂ ಕವಿ ಮತ್ತು ರಾಷ್ಟ್ರೀಯ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಸಚಿದಾನಂದನ್ ಅವರ ಫೇಸ್​ಬುಕ್ ಖಾತೆಗೆ ನಿರ್ಬಂಧ ವಿಧಿಸಲಾಗಿದೆ. ಒಂದು ಅತ್ಯಂತ ಶೋಚನೀಯ ಕೃತ್ಯ ಎಂದು ಕೇರಳದ ವಿತ್ತ ಸಚಿವ ಥಾಮಸ್ ಐಸಾಕ್ ಟ್ವೀಟಿಸಿದ್ದಾರೆ.


ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಶ್ರೀ ಸಚ್ಚಿದಾನಂದನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು ರಾಜ್ಯದ “ಶ್ರೇಷ್ಠ ಜೀವಂತ ಕವಿ” ಎಂದು ಹೇಳಿದ್ದಾರೆ. “ನಾವು ನಮ್ಮ ರಾಜಕೀಯಕ್ಕೆ ಸೆನ್ಸಾರ್ ಶಿಪ್ ಅನ್ನು ಅನುಮತಿಸಬಾರದು” ಎಂದು ತರೂರ್ ಟ್ವೀಟ್ ಮಾಡಿದ್ದಾರೆ.


ಇದೀಗ  ಸಚ್ಚಿದಾನಂದನ್ ಅವರ ಫೇಸ್ ಬುಕ್ ಖಾತೆ  ಸಕ್ರಿಯವಾಗಿದೆ. ಖಾತೆ  ಅನ್ ಬ್ಲಾಕ್ ಆದ ನಂತರ ಪೋಸ್ಟ್ ಮಾಡಿದ ಕವಿ   12 ವರ್ಷಗಳ  ಕಾವ್ಯ ಮತ್ತು ಪ್ರತಿಭಟನೆಯನ್ನು  ಫೇಸ್​ಬುಕ್​ನಿಂದ  12 ಗಂಟೆಗಳಲ್ಲಿ ಅಳಿಸಿ ಹಾಕಲಾಗುವುದಿಲ್ಲ ಎಂದಿದ್ದಾರೆ.

ಸಚ್ಚಿದಾನಂದನ್ ಅವರ ಪೋಸ್ಟ್

ಕೇರಳದಲ್ಲಿ 40 ವರ್ಷಗಳ ನಂತರ ಎಲ್ಡಿ​ಎಫ್ ಎರಡನೇ ಬಾರಿ ಅಧಿಕಾರಕ್ಕೇರಿ ದಾಖಲೆ ಬರೆದಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 99 ಸೀಟುಗಳನ್ನು ಗೆದ್ದು ಎಲ್​ಡಿಎಫ್ ಅಧಿಕಾರಕ್ಕೇರಿದ್ದು, ಯುಡಿಎಫ್ 41 ಸೀಟುಗಳನ್ನು ಗೆದ್ದಿದೆ. ಬಿಜೆಪಿ ನೇತೃತ್ವದ ಎನ್​ಡಿಎ ಯಾವುದೇ ಸೀಟು ಗೆಲ್ಲಲಿಲ್ಲ.

ಇದನ್ನೂ ಓದಿ:  ಫಲಿತಾಂಶ ವಿಶ್ಲೇಷಣೆ: 40 ವರ್ಷಗಳ ನಂತರ ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ಪಿಣರಾಯಿ ವಿಜಯನ್

(Kerala Poet K Satchidanandan Alleges Facebook Account Suspended For satirical video Over BJP Loss in Kerala Assembly elections 2021)