ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ ವ್ಯಕ್ತಿಯನ್ನು ಬೂಟುಗಾಲಿನಿಂದ ಒದೆದ ಕೇರಳ ಪೊಲೀಸ್ ಅಮಾನತು

ನೆಲದಲ್ಲಿ ಅಸಹಾಯಕವಾಗಿ ಕುಳಿತ ಪ್ರಯಾಣಿನ ಮೇಲೆ ಪೊಲೀಸ್ ದರ್ಪ ತೋರಿಸುವಾಗ ಇನ್ನೊಬ್ಬ ಪೊಲೀಸ್ ಮತ್ತು ರೈಲ್ವೆ ಅಧಿಕಾರಿ ಅಲ್ಲೇ ನಿಂತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ.

ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ ವ್ಯಕ್ತಿಯನ್ನು ಬೂಟುಗಾಲಿನಿಂದ ಒದೆದ ಕೇರಳ ಪೊಲೀಸ್ ಅಮಾನತು
ಪ್ರಯಾಣಿಕನ ಮೇಲೆ ಪೊಲೀಸ್ ದರ್ಪ
Updated By: ರಶ್ಮಿ ಕಲ್ಲಕಟ್ಟ

Updated on: Jan 04, 2022 | 11:35 AM

ತಿರುವನಂತಪುರಂ: ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಎಂದು ಆರೋಪಿಸಲಾದ ಪ್ರಯಾಣಿಕರೊಬ್ಬರನ್ನು ಪೊಲೀಸ್ ಪದೇ ಪದೇ ಬೂಟುಗಾಲಿನಿಂದ ಒದೆಯುತ್ತಿರುವುದನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ(Social Media) ವೈರಲ್ ಆಗಿದೆ. ಕೇರಳದಲ್ಲಿ(Kerala) ಈ ಘಟನೆ ನಡೆದಿದ್ದು ಸುಮಾರು 20 ಸೆಕೆಂಡುಗಳ ವಿಡಿಯೊದಲ್ಲಿ, ಕೋಪಗೊಂಡ ಪೋಲೀಸ್ ನೆಲದ ಮೇಲೆ ಅಸಹಾಯಕನಾಗಿ ಕುಳಿತಿದ್ದ ಪ್ರಯಾಣಿಕನನ್ನು ಬೂಟುಗಾಲಿನಿಂದ ಒದೆಯುತ್ತಿರುವುದು ಕಾಣಿಸುತ್ತದೆ. ಪೊಲೀಸರ ಈ ಅಮಾನವೀಯ ವರ್ತನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ತಪ್ಪಿತಸ್ಥ ಪೊಲೀಸ್​​ನ್ನು ಅಮಾನತು ಮಾಡಲಾಗಿದೆ. ನೆಲದಲ್ಲಿ ಅಸಹಾಯಕವಾಗಿ ಕುಳಿತ ಪ್ರಯಾಣಿನ ಮೇಲೆ ಪೊಲೀಸ್ ದರ್ಪ ತೋರಿಸುವಾಗ ಇನ್ನೊಬ್ಬ ಪೊಲೀಸ್ ಮತ್ತು ರೈಲ್ವೆ ಅಧಿಕಾರಿ ಅಲ್ಲೇ ನಿಂತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ. ಭಾನುವಾರ ಮಾವೇಲಿ ಎಕ್ಸ್‌ಪ್ರೆಸ್‌ನಲ್ಲಿ( Maveli Express) ಈ ಘಟನೆ ನಡೆದಿದೆ. ಟಿಕೇಟ್ ಪರಿಶೀಲಿಸಲು ಪೊಲೀಸರು ಕಣ್ಣೂರಿನಿಂದ ರೈಲು ಹತ್ತಿದ್ದಾರೆ ಎಂದು ವರದಿಯಾಗಿದೆ. ಟಿಕೆಟ್ ಕೊಡಲು ಸಾಧ್ಯವಾಗದಿದ್ದಾಗ ವ್ಯಕ್ತಿಯನ್ನು ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವ್ಯಕ್ತಿ ಮದ್ಯಪಾನ ಮಾಡಿದ್ದನು ಎಂದು ಪೊಲೀಸರು ಭಾವಿಸಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಈ ಘಟನೆಯನ್ನು ನೋಡಿ ನಿಂತವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.


“ನಿನ್ನೆ ಮಾವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರನ್ನು ಪೊಲೀಸರು ಅಮಾನುಷವಾಗಿ ಥಳಿಸಿದ್ದರು. ಘಟನೆಯನ್ನು ನೋಡಿದ ಟಿಟಿಇಯನ್ನು ಸೇವೆಯಿಂದ ವಜಾಗೊಳಿಸಿ. ಅವರು ಇದನ್ನು ನೋಡಿಯೂ ಪೊಲೀಸರನ್ನು ತಡೆಯಲಿಲ್ಲ ಎಂದು ಟ್ವೀಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ರಾಜಕೀಯ ವಿರೋಧಿಗಳು ರಾಜ್ಯ ಸರ್ಕಾರವನ್ನೂ ಟೀಕಿಸಿದರು. “ಪಿಣರಾಯಿ ಪೋಲೀಸರ ತಲೆಕೆಟ್ಟಿದೆಯೇ? ಅವರು ಕ್ರಿಮಿನಲ್‌ಗಳಿಂದ ದೂರ ಓಡುತ್ತಾರೆ ಜನಸಾಮಾನ್ಯರನ್ನು ಥಳಿಸುತ್ತಾರೆ. ಮಾವೇಲಿ ಎಕ್ಸ್‌ಪ್ರೆಸ್ ನಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸಿದ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದು ಅಕ್ಷ್ಯಮ್ಯ ಅಪರಾಧ . ಈ ಸಮಸ್ಯೆಯನ್ನು ಕಾನೂನುಬದ್ಧವಾಗಿ ನಿಭಾಯಿಸುವ ಬದಲು ಕೇರಳ ಪೊಲೀಸ್ ಸಾಮಾನ್ಯ ಜನರ ಮೇಲೆ ಬಲಪ್ರಯೋಗ ಮಾಡಿದ್ದಾರೆ ಎಂದು ಕೇರಳ ಬಿಜೆಪಿ ನಾಯಕ ಎಸ್ ಸುರೇಶ್ ಹೇಳಿದರು.

ಕಣ್ಣೂರಿನಲ್ಲಿ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ ನಡೆಸಿತು. ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್, ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿ, ಪೊಲೀಸ್ ಅಧಿಕಾರಿಗಳಿಗಿಂತ ಪಕ್ಷದವರೇ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ವಾರ ರಾಜ್ಯ ಪೊಲೀಸರ ತಂಡವು ಹೊಸ ವರ್ಷದ ದಿನಾಚರಣೆಗಾಗಿ ಸರ್ಕಾರಿ ಸ್ವಾಮ್ಯದ ಮದ್ಯದ ಅಂಗಡಿಯಿಂದ ವಿದೇಶಿಯರು ಖರೀದಿಸಿದ ಖಾಲಿ ಮದ್ಯದ ಬಾಟಲಿಯನ್ನು ಅಲ್ಲೇ ಖಾಲಿ ಮಾಡುವಂತೆ ಹೇಳಿತ್ತು. ಈ ವಿಡಿಯೊ ಕೂಡಾ ವೈರಲ್ ಆಗಿತ್ತು. ಈ ಘಟನೆಗಳ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ.

ಇದನ್ನೂ ಓದಿ: ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ: ಮೇಘಾಲಯ ಗವರ್ನರ್ ಸತ್ಯಪಾಲ್ ಮಲಿಕ್