Kerala rains: ಕೇರಳದಲ್ಲಿ ಭಾರೀ ಮಳೆಯಿಂದಾಗಿ 39 ಸಾವು, ಪುನರ್ವತಿ ಶಿಬಿರಗಳಲ್ಲಿವೆ 3851 ಕುಟುಂಬಗಳು: ಪಿಣರಾಯಿ ವಿಜಯನ್

| Updated By: ರಶ್ಮಿ ಕಲ್ಲಕಟ್ಟ

Updated on: Oct 20, 2021 | 5:48 PM

Kerala Floods "ನಾಲ್ಕು ದಿನಗಳ ಧಾರಾಕಾರ ಮಳೆ, ಪ್ರವಾಹ ಮತ್ತು ಭೂಕುಸಿತದಲ್ಲಿ 39 ಜನರು ಸಾವನ್ನಪ್ಪಿದ್ದಾರೆ. ದುರಂತವು ಅವರ ಕುಟುಂಬ ಸದಸ್ಯರಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

Kerala rains: ಕೇರಳದಲ್ಲಿ ಭಾರೀ ಮಳೆಯಿಂದಾಗಿ 39 ಸಾವು, ಪುನರ್ವತಿ ಶಿಬಿರಗಳಲ್ಲಿವೆ 3851 ಕುಟುಂಬಗಳು: ಪಿಣರಾಯಿ ವಿಜಯನ್
ಕೇರಳದಲ್ಲಿ ಪ್ರವಾಹ
Follow us on

ತಿರುವನಂತಪುರಂ: ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕುಸಿತಗಳು (landslides) ಮತ್ತು ದಿಢೀರ್ ಪ್ರವಾಹಗಳಲ್ಲಿ (flash floods) ಒಟ್ಟು 39 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 217 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ನಾಪತ್ತೆಯಾದ ಕನಿಷ್ಠ ಆರು ಜನರನ್ನು ಇನ್ನೂ ಪತ್ತೆ ಮಾಡಬೇಕಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಹೇಳಿದ್ದಾರೆ.  ಮಳೆ ಸಂಬಂಧಿತ ಅನಾಹುತಗಳ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ವಿಜಯನ್, ಅನಿರೀಕ್ಷಿತ ದುರಂತವು ಸಂತ್ರಸ್ತರ ಕುಟುಂಬ ಸದಸ್ಯರಿಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ದುಃಖ ತಂದಿದೆ ಎಂದು ಹೇಳಿದರು. “ನಾಲ್ಕು ದಿನಗಳ ಧಾರಾಕಾರ ಮಳೆ, ಪ್ರವಾಹ ಮತ್ತು ಭೂಕುಸಿತದಲ್ಲಿ 39 ಜನರು ಸಾವನ್ನಪ್ಪಿದ್ದಾರೆ. ದುರಂತವು ಅವರ ಕುಟುಂಬ ಸದಸ್ಯರಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಸದನವು ಆ ನೋವನ್ನು ಹಂಚಿಕೊಳ್ಳುತ್ತಿದೆ” ಎಂದು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಹೇಳಿದರು . ರಾಜ್ಯ ಸರ್ಕಾರವು ಸಂತ್ರಸ್ತ ಕುಟುಂಬಗಳನ್ನು ಕೈಬಿಡುವುದಿಲ್ಲ ಮತ್ತು ರಕ್ಷಣಾ ಮತ್ತು ಪರಿಹಾರ ಕ್ರಮಗಳ ಮೂಲಕ ತನ್ನ ಕಾಳಜಿ ಮತ್ತು ಪರಿಗಣನೆಯನ್ನು ತೋರಿಸುತ್ತದೆ. ಜೀವನೋಪಾಯಕ್ಕೆ ಮತ್ತೆ ದಾರಿ ಮಾಡಿಕೊಡುತ್ತದೆ ಎಂದು ಪಿಣರಾಯಿ ಹೇಳಿದ್ದಾರೆ.

ಅಕ್ಟೋಬರ್ 11 ರಿಂದ ಕೇರಳವು ಅತಿಯಾದ ಮಳೆಯಿಂದ ತತ್ತರಿಸಿದೆ. ಅಕ್ಟೋಬರ್ 18 ಮತ್ತು 19 ರಂದು ಅದರ ತೀವ್ರತೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ ಎಂದು ಸಿಎಂ ಹೇಳಿದರು. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ಲಕ್ಷದ್ವೀಪದ ಕರಾವಳಿಯಲ್ಲಿ ಅಕ್ಟೋಬರ್ 13-17ರವರೆಗೆ ರೂಪುಗೊಂಡ ಕಡಿಮೆ ಒತ್ತಡದ ಪ್ರದೇಶಗಳಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ ಎಂದು ಅವರು ಹೇಳಿದರು.
ನಿನ್ನೆಯವರೆಗೆ (ಅಕ್ಟೋಬರ್ 19), ರಾಜ್ಯದಲ್ಲಿ ಸಾವಿನ ಸಂಖ್ಯೆ 39 ಮತ್ತು ಕಾಣೆಯಾದವರ ಸಂಖ್ಯೆ ಆರು. ರಾಜ್ಯದಾದ್ಯಂತ 3,851 ಕುಟುಂಬಗಳನ್ನು 304 ಪುನರ್ವಸತಿ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿಜಯನ್ ಹೇಳಿದರು.

ಒಟ್ಟು 11 ಎನ್‌ಡಿಆರ್‌ಎಫ್ ತಂಡಗಳು ವಿವಿಧ ಜಿಲ್ಲೆಗಳಲ್ಲಿ ಮೊಕ್ಕಾಂ ಹೂಡುತ್ತಿರುವುದನ್ನು ತಿಳಿಸಿದ ಅವರು, ಭಾರತೀಯ ಸೇನೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ವಾಯುಪಡೆ ಮತ್ತು ನೌಕಾಪಡೆಯ ಹೆಲಿಕಾಪ್ಟರ್‌ಗಳು ಯಾವುದೇ ಕಾರ್ಯಾಚರಣೆಗೆ ಸಜ್ಜಾಗಿವೆ ಎಂದು ಹೇಳಿದರು.
ಅಕ್ಟೋಬರ್ 20 ರಿಂದ ಕೇರಳ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಎರಡು-ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ, ಅದಕ್ಕೆ ತಕ್ಕಂತೆ ಎಚ್ಚರಿಕೆಗಳನ್ನು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

ಇದರ ನಿರೀಕ್ಷೆಯಲ್ಲಿ, ಜಿಲ್ಲಾಡಳಿತ ಮತ್ತು ಆಯಾ ಪ್ರದೇಶಗಳಲ್ಲಿ ಸ್ಥಳೀಯ ನಿವಾಸಿಗಳಿಗೆ ತಿಳಿಸಿದ ನಂತರ ಅಣೆಕಟ್ಟುಗಳಲ್ಲಿ ನೀರನ್ನು ನಿಯಂತ್ರಿತ ರೀತಿಯಲ್ಲಿ ಬಿಡಲಾಗುತ್ತಿದೆ. ಧಾರಾಕಾರ ಮಳೆಯನ್ನು ಎದುರಿಸಲು ಎಲ್ಲರ ಬೆಂಬಲವನ್ನು ಸಿಎಂ ಪಿಣರಾಯಿ ಕೋರಿದ್ದಾರೆ.

ಏತನ್ಮಧ್ಯೆ ವಿರೋಧ ಪಕ್ಷದ ಪ್ರತಿನಿಧಿಯಾಗಿ ಸದನದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಕೆ ಬಾಬು, ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಪದೇ ಪದೇ ನೈಸರ್ಗಿಕ ವಿಪತ್ತುಗಳು ಮರುಕಳಿಸುತ್ತಿದ್ದರೂ, ರಾಜ್ಯದಲ್ಲಿ ಎಚ್ಚರಿಕೆಯ ವ್ಯವಸ್ಥೆಯು ವಿಫಲವಾಗಿದೆ ಎಂದು ಅವರು ಆರೋಪಿಸಿದರು. ಸರ್ಕಾರ ಸಂತ್ರಸ್ತ ವ್ಯಕ್ತಿಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸಿದರು.|

ಏತನ್ಮಧ್ಯೆ, ಪ್ರವಾಹ ಸಂತ್ರಸ್ತರಿಗೆ ಗೌರವ ಸಲ್ಲಿಸಿದ ನಂತರ ಮತ್ತು ಸಂತ್ರಸ್ತ ಕುಟುಂಬಗಳಿಗೆ ಎಲ್ಲಾ ಬೆಂಬಲವನ್ನು ನೀಡಿದ ನಂತರ, ಸ್ಪೀಕರ್ ಎಂಬಿ ರಾಜೇಶ್ ಅವರು ಸದನವನ್ನು ಇಂದು ಮುಂದೂಡಲಾಗಿದೆ ಎಂದು ಘೋಷಿಸಿದರು. ಭಾರೀ ಮಳೆಯಿಂದಾಗಿ ಕೇರಳದ ಹಲವು ಪ್ರದೇಶಗಳಲ್ಲಿ 304 ಪುನರ್ವಸತಿ ಶಿಬಿರಗಳನ್ನು ತೆರೆಯಲಾಗಿದೆ ಎಂದು ಪಿಣರಾಯಿ ಹೇಳಿದ್ದಾರೆ. ಮುಂದಿನ ಎರಡು ದಿನಗಳ ವಿಧಾನಸಭೆ ಅಧಿವೇಶನವನ್ನು ರದ್ದುಗೊಳಿಸಲಾಗಿದೆ ಏಕೆಂದರೆ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಪ್ರವಾಹ ಪರಿಹಾರ ಕಾರ್ಯಕ್ರಮಗಳನ್ನು ಸಂಯೋಜಿಸಬೇಕು. ಅಕ್ಟೋಬರ್ 25 ರಿಂದ ಮತ್ತೆ ಸದನ ಸಭೆ ನಡೆಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ನೀವೇನು ಕೆಲಸ ಮಾಡಿದ್ದೀರಿ ಎಂದು ಕೇಳಿದ ವ್ಯಕ್ತಿಯ ಕಪಾಳಕ್ಕೆ ಹೊಡೆದ ಪಂಜಾಬ್ ಕಾಂಗ್ರೆಸ್ ಶಾಸಕ