ತಿರುವನಂತಪುರಂ: ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಮುಖ ಹೆಜ್ಜೆಯಲ್ಲಿ ಕೇರಳ ಸೋಮವಾರ ದ್ರವೀಕೃತ ನೈಸರ್ಗಿಕ ಅನಿಲದಿಂದ (liquefied natural gas-LNG) ಚಲಿಸುವ ಮೊದಲ ಸಾರ್ವಜನಿಕ ಬಸ್ ಸೇವೆಗೆ ಚಾಲನೆ ನೀಡಿದೆ.
ಸಾರಿಗೆ ಸಚಿವ ಆಂಟನಿ ರಾಜು ಅವರು ತಿರುವನಂತಪುರಂ ಸೆಂಟ್ರಲ್ ಬಸ್ ನಿಲ್ದಾಣದಿಂದ ಹಸಿರು ಬಸ್ ಸೇವೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ಬಸ್ ತಿರುವನಂತಪುರಂ-ಎರ್ನಾಕುಲಂ ಮತ್ತು ಎರ್ನಾಕುಲಂ-ಕೋಯಿಕೋಡ್ ಮಾರ್ಗಗಳಲ್ಲಿ ಚಲಿಸಲಿದೆ.
ಹಣದ ಕೊರತೆಯಿರುವ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಎರಡು ಉದ್ದೇಶಗಳಿಂದ ಈ ಬಸ್ ಗಳಿಗೆ ಚಾಲನೆ ನೀಡಿದೆ. ಅದೇನೆಂದರೆ ಅಗ್ಗದ ಇಂಧನಕ್ಕೆ ಬದಲಾಗುವುದರ ಮೂಲಕ ಹೆಚ್ಚುತ್ತಿರುವ ಕಾರ್ಯಾಚರಣೆಯ ನಷ್ಟವನ್ನು ಕಡಿತಗೊಳಿಸುವುದು ಮತ್ತು ಪರಿಸರಕ್ಕೆ ಹಾನಿಕಾರಕವೆಂದು ಪರಿಗಣಿಸಲಾದ ಇಂಧನ ಮೂಲವನ್ನು ಉತ್ತೇಜಿಸುವುದು ಆಗಿದೆ.
ಇದು ಕೆಎಸ್ಆರ್ಟಿಸಿಯು ತನ್ನ ಸಂಪೂರ್ಣ ಫ್ಲೀಟ್ ಅನ್ನು ಕೂಲಂಕಷವಾಗಿ ಪರಿಶೀಲಿಸುವ, ಪ್ರಸ್ತುತ ಡೀಸೆಲ್ನಲ್ಲಿ ಚಾಲನೆಯಲ್ಲಿರುವ ಮತ್ತು ಅವುಗಳನ್ನು ಎಲ್ಎನ್ಜಿ ಮತ್ತು ಕಂಪ್ರೆಸ್ಡ್ ನೈಸರ್ಗಿಕ ಅನಿಲಕ್ಕೆ (ಸಿಎನ್ಜಿ) ಬದಲಾಯಿಸುವ ಯೋಜನೆಗಳ ಒಂದು ಭಾಗವಾಗಿದೆ. ತನ್ನ ಹಳೆಯ ಡೀಸೆಲ್ ಚಾಲಿತ 400 ಬಸ್ಗಳನ್ನು ಎಲ್ಎನ್ಜಿಗೆ ಪರಿವರ್ತಿಸುವ ಯೋಜನೆಯನ್ನು ಕೆಎಸ್ಆರ್ಟಿಸಿ ಈಗಾಗಲೇ ಪ್ರಕಟಿಸಿದೆ.
ದಶಕಗಳಿಂದ ನಷ್ಟದಲ್ಲಿ ಸಾಗುತ್ತಿರುವ ಬಸ್ ಕಂಪನಿ, ಪೆಟ್ರೋನೆಟ್ ಎಲ್ಎನ್ಜಿಯಿಂದ ಎರಡು ಎಲ್ಎನ್ಜಿ ಚಾಲಿತ ಬಸ್ಗಳನ್ನು ಮೂರು ತಿಂಗಳ ಕಾಲ ಗುತ್ತಿಗೆಗೆ ನೀಡಿದೆ. ಅಂತಹ ಬಸ್ಗಳನ್ನು ದೀರ್ಘ, ನಗರಗಳೊಳಗೆ ವಾಣಿಜ್ಯಿಕವಾಗಿ ಚಾಲನೆ ಮಾಡುವ ಆರ್ಥಿಕ ಮತ್ತು ತಾಂತ್ರಿಕ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಲು ಅಧ್ಯಯನಗಳನ್ನು ನಡೆಸುವ ಉದ್ದೇಶದಿಂದ ರಸ್ತೆಗಿಳಿಸಲಾಗಿದೆ.
ಹೊಸ ಎಲ್ಎನ್ಜಿ ಬಸ್ ಸೇವೆಯನ್ನು ಮೊದಲ ಹಂತದಲ್ಲಿ ಪ್ರಮುಖ ನಗರಗಳ ನಡುವೆ ನಡೆಸಲಾಗುವುದು. ಆನಂತರ ಅದರ ಕಾರ್ಯಾಚರಣೆಯ ದಕ್ಷತೆಯನ್ನು ಅಳೆಯಲು ಮುನ್ನಾರ್ನಂತಹ ಉನ್ನತ-ಶ್ರೇಣಿಯ ಪ್ರದೇಶಗಳಿಗೆ ಕರೆದೊಯ್ಯಲಾಗುವುದು ಎಂದು ಸಾರಿಗೆ ಸಚಿವರು ಹೇಳಿದರು.