ಕೇರಳ ವಿದ್ಯಾರ್ಥಿ ಆತ್ಮಹತ್ಯೆ; ಸಾಯುವ ಮುನ್ನ 29 ಗಂಟೆ ನಿರಂತರ ಹಲ್ಲೆ? ಸಿಬಿಐಗಿನ್ನೂ ಹಸ್ತಾಂತರವಾಗಿಲ್ಲವಾ ದಾಖಲೆಗಳು?

|

Updated on: Apr 07, 2024 | 4:57 PM

Kerala Veterinary Student Suicide Case: ಫೆಬ್ರುವರಿ ಮೂರನೇ ವಾರದಲ್ಲಿ ಕೇರಳದ ವಯನಾಡ್​ನ ವೆಟರ್ನರಿ ಕಾಲೇಜಿನ ಹಾಸ್ಟಲ್​ನಲ್ಲಿ 20 ವರ್ಷದ ವಿದ್ಯಾರ್ಥಿ ಸಿದ್ಧಾರ್ಥನ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮತ್ತೆ ಸದ್ದು ಮಾಡಿದೆ. ಈತ ಸಾಯುವ ಮುನ್ನ ಸಹಪಾಠಿಗಳು, ಸೀನಿಯರ್ ಸ್ಟುಡೆಂಟ್​ಗಳು ಸೇರಿ 29 ಗಂಟೆ ಕಾಲ ನಿರಂತರವಾಗಿ ಹಲ್ಲೆ ಎಸಗಿದ್ದರು. ಇದರಿಂದ ಆತ ಆತ್ಮಹತ್ಯೆ ಮಾಡಿಕೊಂಡ ಎಂದು ಪೊಲೀಸ್ ಎಫ್​ಐಆರ್ ವರದಿಯಲ್ಲಿ ಹೇಳಿರುವುದು ಬೆಳಕಿಗೆ ಬಂದಿದೆ. ಇದೀಗ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದ್ದರೂ ಪೊಲೀಸರಿಂದ ಪೂರ್ಣ ದಾಖಲೆಗಳು ಇನ್ನೂ ಹಸ್ತಾಂತರವಾಗಿಲ್ಲ ಎನ್ನಲಾಗಿದೆ.

ಕೇರಳ ವಿದ್ಯಾರ್ಥಿ ಆತ್ಮಹತ್ಯೆ; ಸಾಯುವ ಮುನ್ನ 29 ಗಂಟೆ ನಿರಂತರ ಹಲ್ಲೆ? ಸಿಬಿಐಗಿನ್ನೂ ಹಸ್ತಾಂತರವಾಗಿಲ್ಲವಾ ದಾಖಲೆಗಳು?
ಸಿದ್ಧಾರ್ಥನ್
Follow us on

ನವದೆಹಲಿ, ಏಪ್ರಿಲ್ 7: ಕೇರಳದ ವಯನಾಡ್​ನಲ್ಲಿ ಪಶು ವೈದ್ಯಕೀಯ ಕಾಲೇಜಿನ ಹಾಸ್ಟೆಲ್​ವೊಂದರಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ (Kerala student suicide case) ಮಾಡಿಕೊಂಡಿದ್ದ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ಫೆಬ್ರುವರಿ 18ರಂದು ಜೆಎಸ್ ಸಿದ್ಧಾರ್ಥನ್ ಎಂಬ ವಿದ್ಯಾರ್ಥಿಯ ಶವ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಬಂದಿರುವ ಹೊಸ ಮಾಹಿತಿ ಪ್ರಕಾರ ಸಿದ್ಧಾರ್ಥನ್ ಸಾಯುವ ಮುನ್ನ ನಿರಂತರ 29 ಗಂಟೆ ಕಾಲ ಹಿಂಸಾಚಾರಕ್ಕೆ ಒಳಗಾಗಿದ್ದನೆನ್ನಲಾಗಿದೆ. ಆ ಯುವಕನ ಕುಟುಂಬದವರು ಆರೋಪಿಸಿರುವ ಪ್ರಕಾರ ಸಿದ್ಧಾರ್ಥನ್ ಮೇಲೆ ಇತರ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿದ್ದಾರೆ. ಆತನ ಸಹಪಾಠಿಗಳು, ಸೀನಿಯರ್ ವಿದ್ಯಾರ್ಥಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಂದಿದ್ದು, ಹಲ್ಲೆ ಎಸಗಿದ ಕೆಲ ವಿದ್ಯಾರ್ಥಿಗಳು ಸಿಪಿಐಎಂನ ವಿದ್ಯಾರ್ಥಿ ಸಂಘಟನೆಯಾದ ಎಸ್​ಎಫ್​ಐನ ಕಾರ್ಯಕರ್ತರೂ ಇದ್ದಾರೆ ಎಂದು ಹೇಳಲಾಗುತ್ತಿದೆ.

ಫೆಬ್ರುವರಿ 18ರಂದು ಸಂಭವಿಸಿದ್ದ ಈ ಘಟನೆಯ ತನಿಖೆಯನ್ನು ಕೇರಳ ಪೊಲೀಸ್ ನಡೆಸಿದೆ. ಸಹಪಾಠಿಗಳು ಹಾಗು ಹಿರಿಯ ವಿದ್ಯಾರ್ಥಿಗಳು ಸೇರಿಕೊಂಡು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧಾರ್ಥನ್ ಮೇಲೆ ಚಿತ್ರವಧೆ ಮಾಡಿದ್ದಾರೆ. 29 ಗಂಟೆ ಕಾಲ ನಿರಂತರವಾಗಿ ಹಲ್ಲೆ ಮಾಡಿದ್ದಾರೆ ಎಂದು ಕೇರಳದ ಪೊಲೀಸರು ವರದಿ ಮಾಡಿದ್ದಾರೆ.

ಸದ್ಯ ಸಿಬಿಐ ಏಪ್ರಿಲ್ 5ರಂದು ವಯನಾಡ್​ನ ವೈಥಿರಿ ಪೊಲೀಸ್ ಠಾಣೆಯಲ್ಲಿ ಮತ್ತೊಮ್ಮೆ ಎಫ್​ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ. ಕೇರಳ ಪೊಲೀಸರಿಂದಲೂ ಮಾಹಿತಿ ಕಲೆ ಹಾಕುತ್ತಿದೆ. ಆದರೆ, ಪ್ರಕರಣದ ಕೆಲ ಪ್ರಮುಖ ದಾಖಲೆಗಳು ಸಿಬಿಐಗೆ ಹಸ್ತಾಂತರವಾಗಿಲ್ಲ ಎಂದು ಬಿಜೆಪಿ ಪಕ್ಷ ಆರೋಪಿಸುತ್ತಿದೆ.

ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟವು ಭ್ರಷ್ಟ ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳ ಅಡಗುತಾಣವಾಗಿದೆ: ನರೇಂದ್ರ ಮೋದಿ

‘ಫೆಬ್ರುವರಿ 16ರ ಬೆಳಗ್ಗೆ 9ಗಂಟೆಗೆ ಶುರುವಾಗಿ ಮರುದಿನ ಮಧ್ಯಾಹ್ನ 2 ಗಂಟೆಯವರೆಗೆ ಸಿದ್ಧಾರ್ಥನ್ ಮೇಲೆ ದುಷ್ಕರ್ಮಿಗಳು ಕೈಗಳಿಂದ ಮತ್ತು ಬೆಲ್ಟ್​ನಿಂದ ಹೊಡೆದಿದ್ದಾರೆ. ಇದರಿಂದ ಆತ ಮಾನಿಸಿಕ ವೇದನೆಗೆ ಸಿಲುಕಿದ್ದಾನೆ. ಓದು ಮುಂದುವರಿಸಲು ಆಗದೆ, ಮನೆಗೆ ವಾಪಸ್ ಹೋಗಲೂ ಆಗದೇ ಒತ್ತಡಕ್ಕೆ ಒಳಗಾದ ಆತ ಆತ್ಮಹತ್ಯೆ ನಿರ್ಧಾರ ತಳೆಯುವಂತಾಯಿತು. ಫೆಬ್ರುವರಿ 18, ಮಧ್ಯಾಹ್ನ 12:30ರಿಂದ 1:45ರ ವೇಳೆಯಲ್ಲಿ ಹಾಸ್ಟಲ್​ನ ಬಾತ್​ರೂಮ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ,’ ಎಂದು ಪೊಲೀಸ್​ನ ಎಫ್​ಐಆರ್​ನಲ್ಲಿ ಹೇಳಲಾಗಿದೆ.

ಇದು ಮಾತ್ರವಲ್ಲ, ತಮ್ಮ ಮಗ ಸಾಯುವ ಮುನ್ನ ಎಂಟು ತಿಂಗಳ ಕಾಲ ದುಷ್ಕರ್ಮಿಗಳು ಕಿರುಕುಳ ನೀಡಿದ್ದಾರೆ. ಎಸ್​ಎಫ್​ಐ ನಾಯಕರು ಕಾಲೇಜಿನಲ್ಲಿ ಹಲವು ತಿಂಗಳುಗಳಿಂದಲೂ ಬೀಡುಬಿಟ್ಟಿದ್ದು, ತಮ್ಮ ಮಗನ ಬಟ್ಟೆ ಬಿಚ್ಚಿಸಿ, ಮಂಡಿಯೂರಿ ಕೂರುವಂತೆ ಮಾಡಿಸುತ್ತಿದ್ದರು ಎಂದು ಸಿದ್ಧಾರ್ಥನ್ ತಂದೆ ಜಯಪ್ರಕಾಶ್ ಹೇಳಿದ್ದಾರೆ.

ಇದನ್ನೂ ಓದಿ: ಪಂಜಾಬ್: ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ದುರುಳರು

ಕೇರಳ ಮುಖ್ಯಮಂತ್ರಿ ಪಿಣಾರಯಿ ವಿಜಯನ್ ಅವರು ಮಾರ್ಚ್ ಎರಡನೇ ವಾರದಲ್ಲೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರುವುದಾಗಿ ಭರವಸೆ ನೀಡಿದ್ದರು. ಆದರೆ, ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಲೆಂದು ಸಿಬಿಐಗೆ ತನಿಖೆ ವಹಿಸುವುದನ್ನು ವಿಳಂಬ ಮಾಡಲಾಗಿದೆ ಎಂದು ಮೃತ ವಿದ್ಯಾರ್ಥಿಯ ಕುಟುಂಬದವರು ಆರೋಪಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ