ದೆಹಲಿ: ಗಾಜಾದಿಂದ ನಡೆದ ರಾಕೆಟ್ ದಾಳಿಯಲ್ಲಿ ಕೇರಳ ಮೂಲದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಕೇರಳದ ಇಡುಕ್ಕಿ ಜಿಲ್ಲೆಯ ನಿವಾಸಿ 31ರ ಹರೆಯದ ಸೌಮ್ಯ ಸಂತೋಷ್ ಇಸ್ರೇಲ್ನ ಅಶ್ಕೆಲೊನ್ ನಗರದಲ್ಲಿ ಕೆಲಸ ಮಾಡುತ್ತಿದ್ದರು. ಕೇರಳದಲ್ಲಿರುವ ಗಂಡನ ಜತೆ ವಿಡಿಯೊ ಕರೆ ಮಾಡುತ್ತಿದ್ದಾಗಲೇ ದಾಳಿ ನಡೆದಿದ್ದು ಸೌಮ್ಯ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.
ವಿಡಿಯೊ ಕರೆಯಲ್ಲಿದ್ದಾಗಲೇ ನನ್ನ ಸಹೋದರನಿಗೆ ದೊಡ್ಡ ಸದ್ದು ಕೇಳಿಸಿತು, ತಕ್ಷಣವೇ ಫೋನ್ ಕರೆ ಸಂಪರ್ಕ ಕಡಿದುಕೊಂಡಿತು. ಕೂಡಲೇ ನಾವು ಆಕೆಯ ಜತೆ ಕೆಲಸ ಮಾಡುತ್ತಿದ್ದ ಇತರ ಮಲಯಾಳಿ ಸಿಬ್ಬಂದಿಗೆ ಕರೆಮಾಡಿದಾಗ ಅಲ್ಲಿ ನಡೆದ ಸಂಗತಿ ಗೊತ್ತಾಗಿದ್ದು ಎಂದು ಸಂತೋಷ್ ಅವರ ಸಹೋದರ ಸಜಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಇಡುಕ್ಕಿ ಜಿಲ್ಲೆಯ ಕೀರಿತ್ತೋಡು ನಿವಾಸಿಯಾಗಿದ್ದ ಸೌಮ್ಯ ಕಳೆದ ಏಳು ವರ್ಷಗಳಿಂದ ಇಸ್ರೇಲ್ ನಲ್ಲಿ ಕೇರ್ ಗೀವರ್ (ಪರಿಚಾರಕಿ) ಆಗಿ ಕೆಲಸ ಮಾಡುತ್ತಿದ್ದಾರೆ. ಸಂತೋಷ್ ಅವರು ದಕ್ಷಿಣ ಇಸ್ರೇಲ್ನ ಕರಾವಳಿ ಪ್ರದೇಶವಾದ ಅಶ್ಕೆಲೋನ್ ನಲ್ಲಿ ಹಿರಿಯ ಮಹಿಳೆಯೊಬ್ಬರ ಪರಿಚಾರಕರಾಗಿ ಕೆಲಸ ಮಾಡುತ್ತಿದ್ದರು.ಸೌಮ್ಯ-ಸಂತೋಷ್ ದಂಪತಿಗೆ 9 ವರ್ಷದ ಮಗನಿದ್ದಾನೆ. ಗಂಡ ಮತ್ತು ಮಗ ಕೇರಳದಲ್ಲಿದ್ದಾರೆ.
ಸೌಮ್ಯ ಅವರ ಸಾವಿಗೆ ಸಂತಾಪ ಸೂಚಿಸಿದ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ವಿ.ಮುರಳೀಧರನ್, ನಾನು ಸೌಮ್ಯ ಅವರ ಕುಟುಂಬದ ಜತೆ ಮಾತನಾಡಿದ್ದೇನೆ ಎಂದಿದ್ದಾರೆ.
Spoke with the family of Ms Soumya Santhosh to convey my deep condolences at her tragic demise during the rocket attacks from Gaza today. Assured all possible assistance.
We have condemned these attacks and the violence in Jerusalem, and urged restraint by both sides.
— V. Muraleedharan (@MOS_MEA) May 11, 2021
ನ್ಯಾಷನಲಿಸ್ಟ್ ಕಾಂಗ್ರೆಸ್ ಕೇರಳದ ನಾಯಕ,ಶಾಸಕ ಮಾಣಿ.ಸಿ.ಕಾಪ್ಪನ್ ಈ ಘಟನೆಯನ್ನು ಖಂಡಿಸಿದ್ದಾರೆ. ಪಾಲಾ ವಿಧಾನಸಭಾ ಕ್ಷೇತ್ರದ ಪ್ರತಿನಿಧಿಯಾಗಿರುವ ಕಾಪ್ಪನ್, ಇಸ್ರೇಲ್ ನಲ್ಲಿರವ ಸಾವಿರಾರು ಮಲಯಾಳಿಗಳು ಭಯದಿಂದ ಬದುಕು ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಇಸ್ರೇಲ್ ಸರ್ಕಾರ ಮತ್ತು ಹಮಾಸ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಎರಡೂ ಕಡೆಯವರು ಶೆಲ್ ದಾಳಿಯಲ್ಲಿ ತೊಡಗಿದ್ದಾರೆ. ವರದಿಗಳ ಪ್ರಕಾರ, ಗಾಜಾದಲ್ಲಿ 10 ಮಕ್ಕಳು ಸೇರಿದಂತೆ 32 ಪ್ಯಾಲೆಸ್ತೀನಿಯಾದವರು ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ನಲ್ಲಿ ಕೇರಳದ ಮಹಿಳೆ ಸೇರಿದಂತೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಪ್ರಸ್ತುತ ಹಿಂಸಾಚಾರವು ಮುಸ್ಲಿಂ ಉಪವಾಸದ ರಂಜಾನ್ ಮಾಸದ ವೇಳೆ ನಡೆದಿದ್ದು, ಇದು ಧಾರ್ಮಿಕ ಭಾವನೆಗಳನ್ನು ಮತ್ತಷ್ಟು ಕೆರಳಿಸಿದೆ. ಜೆರುಸಲೆಮ್ ಓಲ್ಡ್ ಸಿಟಿ ಮತ್ತು ಫ್ಲ್ಯಾಷ್ ಪಾಯಿಂಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ರೇಲಿ ಪೊಲೀಸ್ ಕ್ರಮಗಳು ಅಶಾಂತಿಗೆ ಕಾರಣವಾಗಿದೆ. ಶೇಕ್ ಜರ್ರಾದ ಸಮೀಪವಿರುವ ಪೂರ್ವ ಜೆರುಸಲೆಮ್ ನಲ್ಲಿ ಪ್ಯಾಲೆಸ್ಟೀನಿಯಾದವರು ಯಹೂದಿ ವಸಾಹತುಗಾರರಿಂದ ಹೊರಹಾಕಲ್ಪಡುವ ಭೀತಿಯಲ್ಲಿದ್ದಾರೆ.
ಕಳೆದ ವಾರಾಂತ್ಯದಲ್ಲಿ ಅಲ್-ಅಕ್ಸಾ ಮಸೀದಿ ಕಾಂಪೌಂಡ್‌ನಲ್ಲಿ ಘರ್ಷಣೆಗಳು ಭುಗಿಲೆದ್ದವು, ಇದು ಇಸ್ಲಾಮಿನ ಮೂರನೇ ಪವಿತ್ರ ತಾಣ ಮತ್ತು ಜುದಾಯಿಸಂನ ಪವಿತ್ರ ತಾಣವಾಗಿದೆ. ನಾಲ್ಕು ದಿನಗಳಲ್ಲಿ,ಇಸ್ರೇಲಿ ಪೊಲೀಸರು ಪ್ಯಾಲೆಸ್ತೀನಿಯದವರ ಮೇಲೆ ಅಶ್ರುವಾಯು ಮತ್ತು ಸ್ಟನ್ ಗ್ರೆನೇಡ್ ದಾಳಿನಡೆಸಿದ್ದರು. ಸೇನಾ ಪಡೆಗಳ ಮೇಲೆ ಕಲ್ಲು ಮತ್ತು ಕುರ್ಚಿಗಳನ್ನು ಎಸೆದರು. ಅದೇ ಹೊತ್ತಲ್ಲಿ ಕಾರ್ಪೆಟ್ ಮಸೀದಿಗೆ ಪೊಲೀಸರು ಸ್ಟನ್ ಗ್ರೆನೇಡ್ ಗಳನ್ನು ಹಾರಿಸಿ ದಾಳಿ ಮಾಡಿದರು.
ಸೋಮವಾರ ಸಂಜೆ, ಹಮಾಸ್ ಗಾಜಾದಿಂದ ರಾಕೆಟ್ ಹಾರಿಸಲು ಪ್ರಾರಂಭಿಸಿತು. ಅಲ್ಲಿಂದ ಸಂಘರ್ಷ ಮತ್ತಷ್ಟು ತೀವ್ರವಾಯಿತು. ಈ ಪ್ರದೇಶದ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆ ಈ ಹಿಂದೆ ಕಳವಳ ವ್ಯಕ್ತಪಡಿಸಿತ್ತು. ಮಂಗಳವಾರ ವಿಶ್ವಸಂಸ್ಥೆಯ ಮಧ್ಯಪ್ರಾಚ್ಯ ಶಾಂತಿ ಪ್ರಕ್ರಿಯೆಯ ವಿಶೇಷ ಸಂಯೋಜಕ ಟಾರ್ ವೆನ್ನೆಸ್ಲ್ಯಾಂಡ್ ಎರಡೂ ಕಡೆಯಿಂದ ಕದನ ವಿರಾಮವನ್ನು ಘೋಷಿಸುವಂತೆ ಟ್ವಿಟರ್ ನಲ್ಲಿ ಮನವಿ ಮಾಡಿದ್ದರು .
ನಾವು ಪೂರ್ಣ ಪ್ರಮಾಣದ ಯುದ್ಧದತ್ತ ಸಾಗುತ್ತಿದ್ದೇವೆ. ಈ ಉದ್ವಿಗ್ನತೆಯ ಸಂಪೂರ್ಣ ಜವಾಬ್ದಾರಿಯನ್ನು ಎಲ್ಲಾ ಕಡೆಯ ನಾಯಕರು ತೆಗೆದುಕೊಳ್ಳಬೇಕಾಗಿದೆ. ಗಾಜಾದಲ್ಲಿ ಯುದ್ಧದ ಪರಿಣಾಮವು ವಿನಾಶಕಾರಿಯಾಗಿದೆ ಮತ್ತು ಅದನ್ನು ಸಾಮಾನ್ಯ ಜನರು ತೆರುತ್ತಿದ್ದಾರೆ. ವಿಶ್ವ ಸಂಸ್ಥೆ ಎಲ್ಲಾ ಕಡೆಯೂ ಕೆಲಸ ಮಾಡುತ್ತಿದೆ ಶಾಂತಿ ಪುನಃಸ್ಥಾಪಿಸಿ. ಈಗ ಹಿಂಸಾಚಾರವನ್ನು ನಿಲ್ಲಿಸಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
Stop the fire immediately. We’re escalating towards a full scale war. Leaders on all sides have to take the responsibility of deescalation. The cost of war in Gaza is devastating & is being paid by ordinary people. UN is working w/ all sides to restore calm. Stop the violence now
— Tor Wennesland (@TWennesland) May 11, 2021
ಏತನ್ಮಧ್ಯೆ, ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಮಂಗಳವಾರ ವಿಡಿಯೊ ಮೂಲಕ ನೀಡಿದ ಭಾಷಣದಲ್ಲಿ ಇಸ್ರೇಲ್ ಹಿರಿಯ ಕಮಾಂಡರ್ ಗಳು ಸೇರಿದಂತೆ ಡಜನ್ ಗಟ್ಟಲೆ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದೆ ಮತ್ತು ದೇಶವು ಅದನ್ನು ಮುಂದುವರಿಸಲಿದೆ ಎಂದು ಹೇಳಿದರು.
אנחנו בעיצומה של מערכה כבדה – מבצע “שומר החומות”.
צה”ל תקף אתמול והיום מאות מטרות טרור של החמאס והג’יהאד האיסלאמי ברצועת עזה.
חיסלנו עשרות מחבלים, כולל מפקדים בכירים, הפצצנו מפקדות של החמאס, מוטטנו בניינים ומגדלים שמשמשים את ארגוני הטרור. אנחנו ממשיכים לתקוף בכל העוצמה.
— Benjamin Netanyahu (@netanyahu) May 11, 2021
ಇಸ್ರೇಲ್ ನಾದ್ಯಂತ ಅರಬ್ ಸಮುದಾಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಅಲ್ಲಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಸಂಘರ್ಷ ನಡೆಸಿ ಹಲವಾರು ವಾಹನಗಳನ್ನು ಬೆಂಕಿಯಿಟ್ಟರು.
2014 ರ ಬೇಸಿಗೆ ಕಾಲದಲ್ಲಿ 50 ದಿನಗಳ ಯುದ್ಧದ ನಂತರ ಇಸ್ರೇಲ್ ಮತ್ತು ಹಮಾಸ್ ನಡುವಿನ ಹೋರಾಟವು ಅತ್ಯಂತ ತೀವ್ರವಾಗಿತ್ತು. ಕೇವಲ 24 ಗಂಟೆಗಳ ಅವಧಿಯಲ್ಲಿ, ಪ್ರಸ್ತುತ ಹಿಂಸಾಚಾರವು ಜೆರುಸಲೆಮ್ ನಗರದಲ್ಲಿ ಧಾರ್ಮಿಕ ಉದ್ವಿಗ್ನತೆಗೆ ಕಾರಣವಾಗಿದ್ದು ಆ ವಿನಾಶಕಾರಿ ಯುದ್ಧವನ್ನು ಹೋಲುತ್ತಿದೆ.
ಇದನ್ನೂ ಓದಿ: ಕೊರೊನಾ ಅಟ್ಟಹಾಸಕ್ಕೆ ನಲುಗಿದ್ದ ಕೋಲಾರ ಜಿಲ್ಲೆಗೊಂದು ಹೊಸ ಆಶಾಕಿರಣ.. ಉಸಿರಿಗೆ ಉಸಿರು ನೀಡಲು ಬಂತು ಇಸ್ರೇಲ್ ಆಕ್ಸಿಜನ್!
Published On - 1:05 pm, Wed, 12 May 21