ನವದೆಹಲಿ, ನವೆಂಬರ್ 4: ಕ್ರಿಕೆಟ್ ವಿಶ್ವಕಪ್ ಫೈನಲ್ ದಿನ, ಅಂದರೆ ನವೆಂಬರ್ 19ರಂದು ಏರ್ ಇಂಡಿಯಾ ವಿಮಾನಗಳು ಹಾರಾಡುವಂತಿಲ್ಲ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು (Gurpatwant Singh Pannun) ಬೆದರಿಕೆ ಹಾಕಿದ್ದಾನೆ. ಸಿಖ್ಸ್ ಫಾರ್ ಜಸ್ಟಿಸ್ ವಾಟರ್‌ಮಾರ್ಕ್ ಹೊಂದಿರುವ ವೀಡಿಯೊದಲ್ಲಿ ಗುರುಪತ್ವಂತ್ ಸಿಂಗ್ ಪನ್ನು ಮಾತನಾಡುತ್ತಿರುವುದನ್ನು ಸಾಮಾಜಿಕ ಮಾಧ್ಯಮ ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದಾರೆ.
ನವೆಂಬರ್ 19 ರಂದು ಏರ್ ಇಂಡಿಯಾ ವಿಮಾನಗಳ ಸಂಚಾರಕ್ಕೆ ಅಡ್ಡಿಪಡಿಸುವುದಾಗಿ ಅತ ಬೆದರಿಕೆ ಹಾಕಿದ್ದಾನೆ. ನವೆಂಬರ್ 19 ರಂದು ಜಾಗತಿಕ ದಿಗ್ಬಂಧನದ ಭಾಗವಾಗಿ, ನಾವು ಏರ್ ಇಂಡಿಯಾವನ್ನು ಕಾರ್ಯನಿರ್ವಹಿಸಲು ಅನುಮತಿಸುವುದಿಲ್ಲ. ನಾವು ನವೆಂಬರ್ 19 ರಿಂದ ಏರ್ ಇಂಡಿಯಾ ಸೇವೆಗಳನ್ನು ಬಳಸದಂತೆ ಸಿಖ್ ಸಮುದಾಯದ ಎಲ್ಲಾ ಸದಸ್ಯರಿಗೆ ಸಲಹೆ ನೀಡುತ್ತೇವೆ. ಹಾಗೆ ಮಾಡಿದಲ್ಲಿ, ಅದು ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಪನ್ನು ಬೆದರಿಕೆಯೊಡ್ಡಿದ್ದಾನೆ.
ನವೆಂಬರ್ 19 ರಂದು ಇಂದಿರಾ ಗಾಂಧಿ ವಿಮಾನ ನಿಲ್ದಾಣವನ್ನು ಮುಚ್ಚಬೇಕು ಎಂದೂ ಆತ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾನೆ. ಈ ನವೆಂಬರ್ 19 ‘ವಿಶ್ವ ಭಯೋತ್ಪಾದಕ ಕಪ್‌ನ ಫೈನಲ್’ಗೆ ಹೊಂದಿಕೆಯಾಗುತ್ತದೆ ಎಂದು ಆತ ‘ಕ್ರಿಕೆಟ್ ವಿಶ್ವಕಪ್ 2023’ ರ ಫೈನಲ್ ಅನ್ನು ಉಲ್ಲೇಖಿಸಿ ಪ್ರಸ್ತಾಪಿಸಿದ್ದಾನೆ. ಕ್ರಿಕೆಟ್ ವಿಶ್ವಕಪ್ ಫೈನಲ್ ಅಹಮದಾಬಾದ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ: ವಿಡಿಯೋ ನೋಡಿ: ದೆಹಲಿಯಲ್ಲಿ ಡಿಟಿಸಿ ಬಸ್ ಭೀಕರ ಅಪಘಾತ, ತಪ್ಪಿದ ಭಾರೀ ಅನಾಹುತ
‘ಅಂದು, ಸಿಖ್ ಸಮುದಾಯದ ಮೇಲೆ ಭಾರತದ ದಬ್ಬಾಳಿಕೆಗೆ ಜಗತ್ತು ಸಾಕ್ಷಿಯಾಗಲಿದೆ. ಪಂಜಾಬ್ ಸ್ವಾತಂತ್ರ್ಯ ಸಾಧಿಸಿದ ನಂತರ ವಿಮಾನ ನಿಲ್ದಾಣದ ಹೆಸರನ್ನು ಶಾಹಿದ್ ಬಿಯಾಂತ್ ಸಿಂಗ್, ಶಾಹಿದ್ ಸತ್ವಂತ್ ಸಿಂಗ್ ಖಲಿಸ್ತಾನ್ ವಿಮಾನ ನಿಲ್ದಾಣ ಎಂದು ಬದಲಾಯಿಸಲಾಗುತ್ತದೆ’ ಎಂದು ಆತ ಹೇಳಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ