ಕೋಲ್ಕತ್ತಾ ಸೆಪ್ಟೆಂಬರ್ 03: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ ‘ಅಪರಾಜಿತಾ’ ಅತ್ಯಾಚಾರ ವಿರೋಧಿ ಮಸೂದೆ (Aparajita anti-rape bill) ಕುರಿತು ಮಾತನಾಡಿದ್ದು, ಈ ಮಸೂದೆಯನ್ನು “ಮಾದರಿ ಮತ್ತು ಐತಿಹಾಸಿಕ” ಎಂದು ಶ್ಲಾಘಿಸಿದ್ದಾರೆ. ‘ಅಪರಾಜಿತಾ ಮಹಿಳೆ ಮತ್ತು ಮಕ್ಕಳ ಮಸೂದೆ (ಪಶ್ಚಿಮ ಬಂಗಾಳ ಕ್ರಿಮಿನಲ್ ಕಾನೂನುಗಳು ಮತ್ತು ತಿದ್ದುಪಡಿ) ಮಸೂದೆ 2024’ ಎಂಬ ಮಸೂದೆ ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಹೊಸ ನಿಬಂಧನೆಗಳನ್ನು ಪರಿಷ್ಕರಿಸುವ ಮತ್ತು ಪರಿಚಯಿಸುವ ಮೂಲಕ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಅತ್ಯಾಚಾರವು ಮಾನವೀಯತೆಯ ವಿರುದ್ಧದ ಶಾಪ. ಅಂತಹ ಅಪರಾಧಗಳನ್ನು ತಡೆಯಲು ಅಗತ್ಯವಿರುವ ಸಾಮಾಜಿಕ ಸುಧಾರಣೆಗಳು ಬೇಕು. ಅಪರಾಜಿತಾ ಮಸೂದೆಗೆ ಸಹಿ ಹಾಕುವಂತೆ ಪ್ರತಿಪಕ್ಷಗಳು ರಾಜ್ಯಪಾಲ ಸಿವಿ ಆನಂದ ಬೋಸ್ ಅವರನ್ನು ಕೇಳಬೇಕು. ಅದರ ನಂತರ ಅದನ್ನು ಜಾರಿಗೊಳಿಸುವುದು ನಮ್ಮ ಜವಾಬ್ದಾರಿ ಎಂದು ಮಮತಾ ಬ್ಯಾನರ್ಜಿ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಮಹಿಳೆಯರ ರಕ್ಷಣೆಗಾಗಿ ಪರಿಣಾಮಕಾರಿ ಕಾನೂನುಗಳನ್ನು ಜಾರಿಗೊಳಿಸಲು ವಿಫಲವಾಗಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಲ್ಲಿ ಇತ್ತೀಚೆಗೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಘಟನೆಗಳು ವರದಿಯಾದ ರಾಜ್ಯಗಳ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಈ ಮಸೂದೆಯ ಮೂಲಕ, ನಾವು ಕೇಂದ್ರ ಶಾಸನದಲ್ಲಿ ಇರುವ ಲೋಪದೋಷಗಳನ್ನು ತೋರಿಸಲು ಪ್ರಯತ್ನಿಸಿದ್ದೇವೆ. ಯುಪಿ, ಗುಜರಾತ್‌ನಂತಹ ರಾಜ್ಯಗಳಲ್ಲಿ ಮಹಿಳೆಯರ ವಿರುದ್ಧ ಹೆಚ್ಚಿನ ಅಪರಾಧಗಳು ನಡೆಯುತ್ತವೆ. ಆದರೆ ಬಂಗಾಳದಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪ್ರತಿಪಕ್ಷಗಳು ಇದಕ್ಕೆ ಸಂಪೂರ್ಣ ಬೆಂಬಲ ನೀಡಿದ ನಂತರ ಪಶ್ಚಿಮ ಬಂಗಾಳ ವಿಧಾನಸಭೆಯು ಅತ್ಯಾಚಾರ-ವಿರೋಧಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಆದಾಗ್ಯೂ, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮಂಡಿಸಿದ ಮಸೂದೆಗೆ ಪ್ರಸ್ತಾವಿತ ತಿದ್ದುಪಡಿಗಳನ್ನು ಸದನವು ಅಂಗೀಕರಿಸಲಿಲ್ಲ.
ಇದನ್ನೂ ಓದಿ: ಬಹರೈಚ್ನಲ್ಲಿ ತೋಳಗಳ ದಾಳಿಯಿಂದ 34 ಮಂದಿಗೆ ಗಾಯ; ‘ಆಪರೇಷನ್ ಭೇಡಿಯಾ’ ಆರಂಭಿಸಿದ ಉತ್ತರ ಪ್ರದೇಶ ಸರ್ಕಾರ
ಕರಡು ಶಾಸನವು ಅತ್ಯಾಚಾರದ ಅಪರಾಧಿಗಳಿಗೆ ಮರಣದಂಡನೆಯನ್ನು ಬಯಸುತ್ತದೆ. ಕೃತ್ಯವು ಸಂತ್ರಸ್ತರ ಸಾವಿಗೆ ಕಾರಣವಾದರೆ ಅಥವಾ ಕೋಮಾದಂಥ ಸ್ಥಿತಿಗೆ ಕಾರಣವಾದರೆ ಇದೇ ಶಿಕ್ಷೆಯನ್ನು ಅಪರಾಧಿಗೆ ವಿಧಿಸಲಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ