ಬಹರೈಚ್​​ನಲ್ಲಿ ತೋಳಗಳ ದಾಳಿಯಿಂದ 34 ಮಂದಿಗೆ ಗಾಯ; ‘ಆಪರೇಷನ್‌ ಭೇಡಿಯಾ’ ಆರಂಭಿಸಿದ ಉತ್ತರ ಪ್ರದೇಶ ಸರ್ಕಾರ

ದಾಳಿ ನಡೆಸುವ ತೋಳಗಳನ್ನು ಪತ್ತೆ ಹಚ್ಚಲು ಉತ್ತರ ಪ್ರದೇಶ ಪೊಲೀಸರು ಮತ್ತು ಅರಣ್ಯ ಇಲಾಖೆ ‘ಆಪರೇಷನ್ ಭೇಡಿಯಾ’ ಆರಂಭಿಸಿದೆ. ನಾಲ್ಕು ತೋಳಗಳನ್ನು ಈಗಾಗಲೇ ಸೆರೆಹಿಡಿಯಲಾಗಿದೆ, ಆದರೆ ಅದೇ ಪ್ಯಾಕ್‌ನ ಭಾಗವೆಂದು ನಂಬಲಾದ ಇನ್ನೂ ಎರಡು ತೋಳಗಳಿಗಾಗಿ ಹುಡುಕಾಟ ಮುಂದುವರೆದಿದೆ.

ಬಹರೈಚ್​​ನಲ್ಲಿ ತೋಳಗಳ ದಾಳಿಯಿಂದ 34 ಮಂದಿಗೆ ಗಾಯ; 'ಆಪರೇಷನ್‌ ಭೇಡಿಯಾ' ಆರಂಭಿಸಿದ ಉತ್ತರ ಪ್ರದೇಶ ಸರ್ಕಾರ
ಯೋಗಿ ಆದಿತ್ಯನಾಥ್
Follow us
|

Updated on:Sep 03, 2024 | 2:35 PM

ಬಹರೈಚ್‌ ಸೆಪ್ಟೆಂಬರ್ 03: ಉತ್ತರ ಪ್ರದೇಶದ (Uttar Pradesh) ಬಹರೈಚ್‌ ಜಿಲ್ಲೆಯಲ್ಲಿ ತೋಳಗಳ ದಾಳಿ (wolf attacks) ಹೆಚ್ಚಳವಾಗಿದ್ದು, ಇವುಗಳ ನಿಯಂತ್ರಣಕ್ಕೆ ಕಂಡಲ್ಲಿ ಗುಂಡಿಕ್ಕುವುದೇ ಕೊನೆಯ ಉಪಾಯ ಎಂದು ಸಿಎಂ ಯೋಗಿ ಆದಿತ್ಯನಾಥ್  (Yogi Adityanath) ಹೇಳಿದ್ದಾರೆ.  ತೀರಾ ಇತ್ತೀಚಿನ ದಾಳಿ ಸೋಮವಾರ ರಾತ್ರಿ ಸಂಭವಿಸಿದ್ದು, ಐದು ವರ್ಷದ ಬಾಲಕಿ ತನ್ನ ಅಜ್ಜಿಯ ಪಕ್ಕದಲ್ಲಿ ತನ್ನ ಮನೆಯಲ್ಲಿ ಮಲಗಿದ್ದಾಗ ತೋಳ ಎಳೆದೊಯ್ದಿದೆ. ಬಾಲಕಿಯ ಮನೆಯವರು ಮತ್ತು ನೆರೆಹೊರೆಯವರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಆಕೆಯ ಪ್ರಾಣ ಉಳಿದಿದೆ. ಅದೇ ಹೊತ್ತಲ್ಲಿ ದಾಳಿ ಮಾಡಿದ ತೋಳ ತಪ್ಪಿಸಿಕೊಂಡಿದೆ.

ಬಾಲಕಿಯ ನೆರೆಹೊರೆಯವರಲ್ಲಿ ಒಬ್ಬರಾದ ಕಲೀಮ್, ತಮ್ಮ ಗ್ರಾಮಕ್ಕೆ ತೋಳ ಬಂದಿದ್ದು ಇದೇ ಮೊದಲ ಬಾರಿ ಎಂದು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ. ಬಾಲಕಿ ಪ್ರಸ್ತುತ ಮಹಾಸಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿಎಚ್‌ಸಿ) ಚಿಕಿತ್ಸೆ ಪಡೆಯುತ್ತಿದ್ದು, ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಒಟ್ಟು 34 ಜನರು ಗಾಯಗೊಂಡಿದ್ದಾರೆ ಎಂದು ಮಹಾಸಿ ಸಿಎಚ್‌ಸಿಯ ಅಧೀಕ್ಷಕ ಡಾ ಆಶಿಶ್ ವರ್ಮಾ ಖಚಿತಪಡಿಸಿದ್ದಾರೆ.

ಎಲ್ಲರಿಗೂ ಚಿಕಿತ್ಸೆ ನೀಡಲಾಗಿದ್ದು, ಇಬ್ಬರನ್ನು ಬಹರೈಚ್‌ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿಗಳ ಕಚೇರಿಯ ಆದೇಶದ ಮೇರೆಗೆ ಆ್ಯಂಟಿ ರೇಬೀಸ್ ಲಸಿಕೆಗಳು (ಎಆರ್‌ವಿ) ಮತ್ತು ಹಾವಿನ ವಿಷ (ಎಎಸ್‌ವಿ) ಯ ಸಮರ್ಪಕ ಪೂರೈಕೆಯೊಂದಿಗೆ ಸಿಎಚ್‌ಸಿಯು ಅಂತಹ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸುಸಜ್ಜಿತವಾಗಿದೆ ಎಂದು ಡಾ ವರ್ಮಾ ಭರವಸೆ ನೀಡಿದರು.

ಮಾರ್ಚ್ 18 ರಿಂದ ಒಟ್ಟು 10 ಜನರು, ಹೆಚ್ಚಾಗಿ ಮಕ್ಕಳು, ತೋಳಗಳ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಸಾವಿಗೀಡಾದವರಲ್ಲಿ ಒಂಬತ್ತು ಮಂದಿ ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 55 ವರ್ಷ ವಯಸ್ಸಿನ ಮಹಿಳೆಯಾಗಿದ್ದಾರೆ.

ದಾಳಿ ನಡೆಸುವ ತೋಳಗಳನ್ನು ಪತ್ತೆ ಹಚ್ಚಲು ಉತ್ತರ ಪ್ರದೇಶ ಪೊಲೀಸರು ಮತ್ತು ಅರಣ್ಯ ಇಲಾಖೆ ‘ಆಪರೇಷನ್ ಭೇಡಿಯಾ’ ಆರಂಭಿಸಿದೆ. ನಾಲ್ಕು ತೋಳಗಳನ್ನು ಈಗಾಗಲೇ ಸೆರೆಹಿಡಿಯಲಾಗಿದೆ, ಆದರೆ ಅದೇ ಪ್ಯಾಕ್‌ನ ಭಾಗವೆಂದು ನಂಬಲಾದ ಇನ್ನೂ ಎರಡು ತೋಳಗಳಿಗಾಗಿ ಹುಡುಕಾಟ ಮುಂದುವರೆದಿದೆ. ಪ್ರದೇಶವನ್ನು ಏಳು ವಲಯಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದನ್ನು ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡಗಳು ಮೇಲ್ವಿಚಾರಣೆ ಮಾಡುತ್ತವೆ.

ಪ್ರತಿ ಗ್ರಾಮ ಪಂಚಾಯಿತಿಗೂ ಪೊಲೀಸ್ ತಂಡವನ್ನು ನೀಡಲಾಗಿದೆ. ಖಂಡಿತವಾಗಿಯೂ ನಾವು ಶೀಘ್ರದಲ್ಲಿ ಯಶಸ್ವಿಯಾಗುತ್ತೇವೆ ಎಂದು ಗೋರಖ್‌ಪುರ ವಲಯದ ಎಡಿಜಿ ಕೆ.ಎಸ್.ಪ್ರತಾಪ್ ಕುಮಾರ್ ಹೇಳಿದರು. ಇತ್ತೀಚಿನ ದಾಳಿಯ ಒಂದು ದಿನದ ಮೊದಲು, ಇದೇ ರೀತಿಯ ಘಟನೆಯಲ್ಲಿ ಮೂರು ವರ್ಷದ ಬಾಲಕಿ ಸಾವಿಗೀಡಾಗಿದ್ದು ಇಬ್ಬರು ಮಹಿಳೆಯರು ಗಾಯಗೊಂಡರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೀಡಿತ ಜಿಲ್ಲೆಗಳಲ್ಲಿ ಕ್ಯಾಂಪ್ ಮಾಡಲು ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು ಹಿರಿಯ ಅರಣ್ಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಇದನ್ನೂ ಓದಿ: ಗ್ರೇಟರ್ ನೋಯ್ಡಾದ ಸೂಪರ್‌ಟೆಕ್ ಇಕೋ ವಿಲೇಜ್​​ನಲ್ಲಿ ಕಲುಷಿತ ನೀರು ಕುಡಿದು 200 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಪರಿಶೀಲನಾ ಸಭೆಯಲ್ಲಿ, ಪ್ರಾಣಿಗಳಿಗೆ ಗುಂಡು ಹಾರಿಸುವುದು ಕೊನೆಯ ಉಪಾಯವಾಗಬೇಕು, ರಕ್ಷಣಾ ಪ್ರಯತ್ನಗಳು ವಿಫಲವಾದರೆ ಮಾತ್ರ ಇದನ್ನು ಪರಿಗಣಿಸಬೇಕು ಎಂದು ಮುಖ್ಯಮಂತ್ರಿ ಒತ್ತಿ ಹೇಳಿದರು. ಅರಣ್ಯ, ಪೊಲೀಸ್, ಸ್ಥಳೀಯ ಆಡಳಿತ, ಸ್ಥಳೀಯ ಪಂಚಾಯತ್ ಮತ್ತು ಕಂದಾಯ ಇಲಾಖೆಗಳ ನಡುವೆ ಸಮನ್ವಯತೆಯನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಜನರು ತಮ್ಮ ಸುರಕ್ಷತೆಗಾಗಿ ಘಟನೆಗಳು ಮತ್ತು ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಆದಿತ್ಯನಾಥ್ ಹೇಳಿದ್ದಾರೆ.

ಹೆಚ್ಚಿದ ಮನುಷ್ಯ-ಪ್ರಾಣಿ ಸಂಘರ್ಷಕ್ಕೆ ಮೂಲ ಕಾರಣಗಳ ವಿಶ್ಲೇಷಣೆಗೂ ಸಿಎಂ ಆದೇಶಿಸಿದ್ದಾರೆ . ಬಹರೈಚ್‌, ಲಖಿಂಪುರ ಖೇರಿ, ಮೊರಾದಾಬಾದ್ ಮತ್ತು ಪಿಲಿಭಿತ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅರಣ್ಯ ಸಚಿವರು ಮತ್ತು ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:06 pm, Tue, 3 September 24