ಒಡೆದ ತೆಂಗಿನಕಾಯಿ ಹೀಗೆ ಸಂಗ್ರಹಿಸಿಟ್ಟರೆ ತಿಂಗಳುಗಟ್ಟಲೇ ಫ್ರೆಶ್ ಆಗಿರುತ್ತೆ
ತೆಂಗಿನಕಾಯಿಯನ್ನು ದಿನನಿತ್ಯ ಅಡುಗೆಯಲ್ಲಿ ಬಳಸಲಾಗುತ್ತದೆ. ಆದರೆ ಹಬ್ಬ ಹರಿದಿನಗಳಲ್ಲಿ ಹೆಚ್ಚು ತೆಂಗಿನಕಾಯಿಗಳನ್ನು ಒಡೆಯಬೇಕಾಗುತ್ತದೆ. ಹೀಗೆ ಉಳಿದ ತೆಂಗಿನಕಾಯಿ ಸರಿಯಾಗಿ ಶೇಖರಿಸಿಟ್ಟರೆ ಮಾತ್ರ ಅದು ಕೆಡುವುದಿಲ್ಲ. ಅಡುಗೆಗಾಗಿ ಒಡೆದ ತೆಂಗಿನ ಕಾಯಿಯನ್ನು ಒಂದೇ ದಿನಕ್ಕೆ ಖಾಲಿ ಮಾಡಲು ಸಾಧ್ಯವಾಗದೇ ಇದ್ದಲ್ಲಿ ಈ ರೀತಿ ಶೇಖರಿಸಿಡಿ. ಈ ತೆಂಗಿನಕಾಯಿ ತಾಜಾವಾಗಿ ಸಂಗ್ರಹಿಸಿಡಲು ಇಲ್ಲಿದೆ ಸಿಂಪಲ್ ಟಿಪ್ಸ್
ಭಾರತೀಯ ಅಡುಗೆ ಮನೆಯಲ್ಲಿ ತೆಂಗಿನಕಾಯಿ ಇಲ್ಲದೇ ಯಾವ ಅಡುಗೆಯು ರುಚಿಸುವುದಿಲ್ಲ. ಹೀಗಾಗಿ ಸಾಂಬಾರ್ ಪದಾರ್ಥಗಳಿಂದ ಹಿಡಿದು ಸಿಹಿ ತಿಂಡಿಗಳ ತಯಾರಿಕೆಯಲ್ಲಿಯೂ ಈ ತೆಂಗಿನಕಾಯಿ ಬಳಸಲಾಗುತ್ತದೆ. ಕೆಲವೊಮ್ಮೆ ಒಡೆದ ತೆಂಗಿನಕಾಯಿ ಉಳಿದುಬಿಟ್ಟರೆ ಅದನ್ನು ಶೇಖರಿಸಿ ಇಡುವುದು ತುಂಬಾನೇ ಕಷ್ಟ, ಹಾಗೆ ಇಟ್ಟರೆ ಲೋಳೆ ಬರುತ್ತದೆ. ಹೀಗಾಗಿ ಸರಿಯಾದ ವಿಧಾನದಲ್ಲಿ ಒಡೆದ ತೆಂಗಿನಕಾಯಿ ಸಂಗ್ರಹಿಸಿ ಕೆಡದಂತೆ ದೀರ್ಘಕಾಲದವರೆಗೆ ಶೇಖರಿಸಿಡುವುದು ಬಹಳ ಮುಖ್ಯ.
- ಒಡೆದ ತೆಂಗಿನಕಾಯಿ ತಾಜಾವಾಗಿರಬೇಕೆಂದರೆ, ತೆಂಗಿನಕಾಯಿ ತುರಿದು ಫ್ರಿಡ್ಜ್ ನಲ್ಲಿಟ್ಟರೆ ಒಂದು ವಾರದವರೆಗೆ ಕೆಡುವುದಿಲ್ಲ. ಆದರೆ ತೆಂಗಿನತುರಿಯನ್ನು ಗಾಳಿಯಾಡದ ಕಂಟೈನರ್ ನಲ್ಲಿ ಇಡುವುದು ಒಳ್ಳೆಯದು.
- ಒಡೆದ ತೆಂಗಿನಕಾಯಿ ಉಳಿದಿದ್ದರೆ ಅದನ್ನು ಬಿಸಿಲಿದ್ದರೆ ಒಣಗಿಸಿಡಿ. ಬಿಸಿಲಿನಲ್ಲಿ ಒಣಗಿಸಿದರೆ ಲೋಳೆಯು ಬರುವುದಿಲ್ಲ. ಮರುದಿನ ಇದನ್ನು ಅಡುಗೆಗೆ ಬಳಸಬಹುದು.
- ತೆಂಗಿನಕಾಯಿ ತುರಿಯನ್ನು ಫ್ರಿಜ್ನಲ್ಲಿ ಶೇಖರಿಸಿಡಬಹುದು. ಇಲ್ಲವಾದರೆ, ಕಾಯಿ ತುರಿಯನ್ನು ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಸ್ವಲ್ಪ ಬೆಚ್ಚಗೆ ಮಾಡಿ ಗಾಜಿನ ಕಂಟೈನರ್ ನಲ್ಲಿ ಸಂಗ್ರಹಿಸಿಡಬಹುದು. ಅಡುಗೆಗೆ ಬಳಸುವ ಮುನ್ನ ಸ್ವಲ್ಪ ಹುರಿದುಕೊಂಡರೆ ಅಡುಗೆಯ ರುಚಿಯು ಹೆಚ್ಚಾಗುತ್ತದೆ.
- ತೆಂಗಿನಕಾಯಿ ಹಾಳಾಗದಂತೆ ಸಂಗ್ರಹಿಸಿಡುವ ಮತ್ತೊಂದು ವಿಧಾನಗಳಲ್ಲಿ ಉಪ್ಪಿನ ಪಾತ್ರೆಯಲ್ಲಿ ಹಾಕಿಡುವುದು ಕೂಡ ಒಂದು. ಒಡೆದ ಕಾಯಿಯನ್ನು ಉಪ್ಪಿನ ಪಾತ್ರೆಯಲ್ಲಿ ಇಟ್ಟರೆ ಒಂದೆರಡು ದಿನಗಳು ಕೆಡುವುದಿಲ್ಲ, ಆ ಬಳಿಕ ಅಡುಗೆಗೆ ಬಳಸಬಹುದು.
- ಭತ್ತದ ಹುಲ್ಲಿನೊಳಗೆ ಕಾಯಿಯನ್ನು ಇಡುವುದು ಶೇಖರಿಸಿಡುವ ಅತ್ಯುತ್ತಮ ವಿಧಾನಗಳಲ್ಲಿ ಒಂದು. ಈ ಹುಲ್ಲಿನಲ್ಲಿರುವ ಉಷ್ಣಾಂಶವು ಕಾಯಿ ಹಾಳಾಗದಂತೆ ತಾಜಾವಾಗಿರಿಸುತ್ತದೆ.
- ಒಡೆದ ಕಾಯಿಗೆ ಇದ್ದರೆ ಅದಕ್ಕೆ ಸ್ವಲ್ಪ ಅರಿಶಿನವನ್ನು ಹಚ್ಚಿಡುವುದರಿಂದ ಕಾಯಿಯು ಹಾಳಾಗುವುದಿಲ್ಲ. ಈ ವಿಧಾನದ ಮೂಲಕ ಒಂದೆರಡು ದಿನಗಳ ಕಾಲ ಸಂಗ್ರಹಿಸಿಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:18 pm, Wed, 15 January 25