ಕೃಷ್ಣ ಜನ್ಮಾಷ್ಟಮಿ ವೇಳೆ ನೂಕುನುಗ್ಗಲು; ಮಥುರಾದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಉಸಿರುಗಟ್ಟಿ ಇಬ್ಬರು ಭಕ್ತರು ಸಾವು

ಮಥುರಾದ ಬಂಕೆ ಬಿಹಾರಿ ದೇವಸ್ಥಾನದ ಒಳಗೆ ಭಾರೀ ಜನಸಂದಣಿ ಇದ್ದುದರಿಂದ ಅನೇಕ ಭಕ್ತರು ಉಸಿರಾಡಲು ಪರದಾಡಿದರು. ಈ ಘಟನೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ

ಕೃಷ್ಣ ಜನ್ಮಾಷ್ಟಮಿ ವೇಳೆ ನೂಕುನುಗ್ಗಲು; ಮಥುರಾದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಉಸಿರುಗಟ್ಟಿ ಇಬ್ಬರು ಭಕ್ತರು ಸಾವು
ಮಥುರಾದಲ್ಲಿ ಕೃಷ್ಣ ಜನ್ಮಾಷ್ಟಮಿ ವೇಳೆ ನೂಕುನುಗ್ಗಲು
Edited By:

Updated on: Aug 20, 2022 | 8:46 AM

ಮಥುರಾ: ದೇಶಾದ್ಯಂತ ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು (Krishna Janmashtami) ಆಚರಿಸಲಾಗಿದೆ. ಆದರೆ, ಉತ್ತರ ಪ್ರದೇಶದ ಮಥುರಾದಲ್ಲಿ (Mathura) ಜನ್ಮಾಷ್ಟಮಿ ಆಚರಣೆಯ ಸಂದರ್ಭದಲ್ಲಿ ಬಂಕೆ ಬಿಹಾರಿ ದೇವಸ್ಥಾನದಲ್ಲಿ (Banke Bihari Temple) ಭಕ್ತರ ಸಂಖ್ಯೆ ಜಾಸ್ತಿ ಇದ್ದುದರಿಂದ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ವೇಳೆ 6 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಥುರಾದ ದೇವಸ್ಥಾನದಲ್ಲಿ ಮಧ್ಯರಾತ್ರಿಯ ಸಂಭ್ರಮಾಚರಣೆ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಥುರಾದ ಬಂಕೆ ಬಿಹಾರಿ ದೇವಸ್ಥಾನದ ಒಳಗೆ ಭಾರೀ ಜನಸಂದಣಿ ಇತ್ತು. ಸೆಖೆ ಮತ್ತು ಗಾಳಿಯಿಲ್ಲದೆ ದೇವಸ್ಥಾನದ ಆವರಣದೊಳಗೆ ಅನೇಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. “ಮಥುರಾದ ಬಂಕೆ ಬಿಹಾರಿಯಲ್ಲಿ ಮಂಗಳಾರತಿ ಸಮಯದಲ್ಲಿ ದೇವಸ್ಥಾನದ ನಿರ್ಗಮನ ದ್ವಾರದಲ್ಲಿ ಭಕ್ತರೊಬ್ಬರು ಮೂರ್ಛೆ ತಪ್ಪಿ ಬಿದ್ದರು. ಇದರಿಂದಾಗಿ ಭಕ್ತರ ಸಂಚಾರವನ್ನು ನಿರ್ಬಂಧಿಸಲಾಗಿದೆ. ಭಾರೀ ಜನಸಂದಣಿ ಇದ್ದುದರಿಂದ ಆವರಣದೊಳಗೆ ಅನೇಕ ಭಕ್ತರು ಉಸಿರಾಡಲು ಪರದಾಡಿದರು. ಈ ಘಟನೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಮಥುರಾ ಎಸ್‌ಎಸ್‌ಪಿ ತಿಳಿಸಿದ್ದಾರೆ.

ಇದನ್ನೂ ಓದಿ: Krishna Janmabhoomi case ಮಥುರಾ ಶ್ರೀಕೃಷ್ಣ ಜನ್ಮಭೂಮಿ ವಿವಾದ ಪ್ರಕರಣ: 4 ತಿಂಗಳಲ್ಲಿ ಎಲ್ಲಾ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಸೂಚನೆ

ಶುಕ್ರವಾರ ನಡೆದ ಮಂಗಳಾ ಆರತಿಯ ಸಂದರ್ಭದಲ್ಲಿ ನೋಯ್ಡಾದಿಂದ ಬಂದಿದ್ದ ಮಹಿಳೆಯೊಬ್ಬರು ಜನಸಂದಣಿಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. 65 ವರ್ಷ ವಯಸ್ಸಿನ ಜಬಲ್ಪುರದ ಇನ್ನೊಬ್ಬ ವ್ಯಕ್ತಿ ಪ್ರಜ್ಞೆ ಕಳೆದುಕೊಂಡಿದ್ದು, ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ದೇವಸ್ಥಾನದ ಗೇಟ್ ನಂ.4ರಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡಿರುವ ದೇವಸ್ಥಾನದ ಭಕ್ತರನ್ನು ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೃತ ಮಹಿಳೆಯ ಕುಟುಂಬದವರು ಮರಣೋತ್ತರ ಪರೀಕ್ಷೆ ನಡೆಸದೆ ಆಕೆಯ ಶವವನ್ನು ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ