Kullu Cloudburst: ಹಿಮಾಚಲದ ಕುಲುವಿನಲ್ಲಿ ಮೇಘಸ್ಫೋಟ; ಪ್ರವಾಹದಲ್ಲಿ ಕೊಚ್ಚಿ ಹೋಯ್ತು ಅಂಗಡಿ, ವಾಹನಗಳು

| Updated By: ಸುಷ್ಮಾ ಚಕ್ರೆ

Updated on: Aug 11, 2022 | 12:42 PM

ನೋಡನೋಡುತ್ತಿದ್ದಂತೆ ಉಕ್ಕಿ ಹರಿಯುತ್ತಿದ್ದ ನದಿಯ ದಡದಲ್ಲಿದ್ದ ಅಂಗಡಿಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.

Kullu Cloudburst: ಹಿಮಾಚಲದ ಕುಲುವಿನಲ್ಲಿ ಮೇಘಸ್ಫೋಟ; ಪ್ರವಾಹದಲ್ಲಿ ಕೊಚ್ಚಿ ಹೋಯ್ತು ಅಂಗಡಿ, ವಾಹನಗಳು
ಕುಲುವಿನಲ್ಲಿ ಪ್ರವಾಹ
Follow us on

ಮನಾಲಿ: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಮೇಘಸ್ಫೋಟ (Cloudburst) ಸಂಭವಿಸಿದ್ದು, ಪ್ರವಾಹದ (Flood) ನೀರಿನಲ್ಲಿ 10 ಅಂಗಡಿಗಳು, ಮೂರು ವಾಹನಗಳು ಕೊಚ್ಚಿಕೊಂಡು ಹೋಗಿವೆ. ನೋಡನೋಡುತ್ತಿದ್ದಂತೆ ಉಕ್ಕಿ ಹರಿಯುತ್ತಿದ್ದ ನದಿಯ ದಡದಲ್ಲಿದ್ದ ಅಂಗಡಿಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಆಘಾತಕಾರಿ ವಿಡಿಯೋ (Shocking Video) ವೈರಲ್ ಆಗಿದೆ. ಭಾರೀ ಪ್ರವಾಹ, ಭೂಕುಸಿತದಿಂದ ಚಂಡೀಗಢ-ಮನಾಲಿ ಹೆದ್ದಾರಿ ಬಂದ್ ಆಗಿದೆ. ಮಂಡಿ ಪಟ್ಟಣದಿಂದ ಕುಲು ಮಾರ್ಗದಲ್ಲಿ ಭಾರೀ ಭೂಕುಸಿತದಿಂದಾಗಿ ಮಂಡಿ ಮತ್ತು ಕುಲು ಜಿಲ್ಲೆಗಳ ನಡುವಿನ ಸಂಚಾರಕ್ಕೆ ಇಂದು ನಿರ್ಬಂಧ ವಿಧಿಸಲಾಗಿದೆ.

ಪೊಲೀಸರ ಪ್ರಕಾರ, ಈ ಪ್ರದೇಶದಲ್ಲಿ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ಕಾರ್ಯ ನಡೆಯುತ್ತಿದ್ದು, ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಲಘು ವಾಹನಗಳ ಸಂಚಾರಕ್ಕೆ ಮಂಡಿ ಮತ್ತು ಕುಲು ನಡುವಿನ ಕಟೌಲಾ ಮೂಲಕ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: BIG NEWS: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಓರ್ವ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ಕುಲು ಜಿಲ್ಲೆಯ ಅನಿ ಪ್ರದೇಶದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಮೇಘಸ್ಫೋಟದಿಂದ ಭಾರೀ ಹಾನಿ ಉಂಟಾಗಿದೆ. ಪೊಲೀಸರ ಪ್ರಕಾರ, ಚೋವೈ ಪ್ರದೇಶದ ಖಾಡೆಡ್ ಗ್ರಾಮದಲ್ಲಿ ಮನೆ ಕುಸಿದು 60 ವರ್ಷದ ಮಹಿಳೆ ಮತ್ತು 16 ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ. ದೇವುತಿ ಗ್ರಾಮದಲ್ಲಿ ಉಂಟಾದ ಪ್ರವಾಹದಲ್ಲಿ 5 ವಾಹನಗಳು ಕೊಚ್ಚಿ ಹೋಗಿವೆ. ಅನಿಯಲ್ಲಿನ 10 ಅಂಗಡಿಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ.

ಭಾರೀ ಮಳೆಯಿಂದಾಗಿ ಬಿಯಾಸ್ ನದಿ ಮತ್ತು ಅದರ ಉಪನದಿಗಳು ಉಕ್ಕಿ ಹರಿಯುತ್ತಿವೆ. ಕುಲು ಮತ್ತು ಮಂಡಿ ಆಡಳಿತಗಳು ನದಿಗಳ ಸಮೀಪಕ್ಕೆ ಹೋಗದಂತೆ ಜನರಿಗೆ ಮನವಿ ಮಾಡಿವೆ. ಕುಲು ಮತ್ತು ಮಂಡಿಯ ಹಲವು ಸಂಪರ್ಕ ರಸ್ತೆಗಳು ಭೂಕುಸಿತದಿಂದ ಬಂದ್ ಆಗಿವೆ. ಮೇಘಸ್ಫೋಟದಲ್ಲಿ ಇದುವರೆಗೆ ಪ್ರಾಣಹಾನಿ ಉಂಟಾಗಿಲ್ಲ. ಆದರೆ, ಮನೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ದೇವುತಿಯಲ್ಲಿರುವ ಹಳೆ ಬಸ್ ನಿಲ್ದಾಣ ಹಾಗೂ ಪಂಚಾಯಿತಿ ಕಟ್ಟಡವೂ ಕೊಚ್ಚಿಹೋಗುವ ಭೀತಿ ಎದುರಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:41 pm, Thu, 11 August 22