ಮುಂಬೈ: ಇಂದು ವಿಘ್ನ ವಿನಾಯಕ ಗಣೇಶನ ಹಬ್ಬ. ಅದರಲ್ಲೂ ಮಹಾರಾಷ್ಟ್ರದ ಮುಂಬೈನಲ್ಲಿ ಗಣೇಶ ಚರ್ತುಥಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಕೊರೊನಾ ಸಂಕಷ್ಟದಿಂದಾಗಿ ಈ ಬಾರಿ ಸಂಕಷ್ಟಹರ ಗಣಪನ ಹಬ್ಬಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಹೀಗಾಗಿ, ದೇಶದ ವಾಣಿಜ್ಯ ರಾಜಧಾನಿಯಾದ ಮುಂಬೈನಲ್ಲಿ ಕೆಲವರು ಈ ಬಾರಿ ಹಬ್ಬವನ್ನು ಬೇರೆ ರೀತಿಯಲ್ಲಿ ಆಚರಿಸಲು ಮುಂದಾಗಿದ್ದಾರೆ.
ನಗರದ ಪ್ರತಿಷ್ಠಿತ ಲಾಲ್ ಬಾಗ್ ಚಾ ರಾಜ ಗಣಪತಿ ಮಂಡಳಿಯು ಹಬ್ಬಕ್ಕೆ ಪೆಂಡಾಲ್ ಹಾಕುವ ಬದಲು ಸೋಂಕಿನಿಂದ ಗುಣಮುಖರಾದವರಿಗಾಗಿ ರಕ್ತ ಮತ್ತು ಪ್ಲಾಸ್ಮಾ ದಾನ ಶಿಬಿರವನ್ನ ಏರ್ಪಡಿಸಿದೆ. ಗಣೇಶೋತ್ಸವದ ಪ್ರಯುಕ್ತ ಆರೋಗ್ಯ ಉತ್ಸವ ಎಂಬ ಹೆಸರಿನಲ್ಲಿ ಪ್ಲಾಸ್ಮಾ ಮತ್ತು ರಕ್ತದಾನ ಶಿಬಿರ ಆಯೋಜನೆ ಮಾಡಿದೆ. ಸೋಂಕಿನಿಂದ ಗುಣಮುಖರಾದವರ ಪ್ಲಾಸ್ಮಾದಿಂದ ಇತರೆ ಸೋಂಕಿತರನ್ನು ಗುಣಮುಖಪಡಿಸುವ ನಿಟ್ಟಿನಲ್ಲಿ ಮಂಡಳಿ ಈ ಕಾರ್ಯಕ್ಕೆ ಮುಂದಾಗಿದೆ.
ಕೊರೊನಾ ಕಾರಣದಿಂದಾಗಿ ಪ್ಲಾಸ್ಮಾ ಮತ್ತು ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿದ್ದೇವೆ. ಈ ಮೂಲಕ ಗಣೇಶ ಉತ್ಸವವನ್ನು ಆರೋಗ್ಯ ಉತ್ಸವವನ್ನಾಗಿ ಆಚರಿಸುತ್ತಿದ್ದೇವೆ ಎಂದು ಮಂಡಳಿ ಅಧ್ಯಕ್ಷ ತಿಳಿಸಿದ್ರು.
Published On - 1:03 pm, Sat, 22 August 20