ಲಾಲೂ ಕೌಟುಂಬಿಕ ಬಿಕ್ಕಟ್ಟು; ಮಗಳು ರೋಹಿಣಿ ಹೆಸರಿಸಿದ ರಮೀಜ್ ಖಾನ್ ಯಾರು?

Lalu Prasad Yadav family fight: ಲಾಲೂ ಪ್ರಸಾದ್ ಯಾದವ್ ಅವರ ಏಳು ಹೆಣ್ಮಕ್ಕಳಲ್ಲಿ ಒಬ್ಬರಾದ ರೋಹಿಣಿ ಆಚಾರ್ಯ ಅವರು ಕುಟುಂಬದಿಂದ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ಅವರ ಮೂವರು ಸಹೋದರಿಯರೂ ಕೂಡ ಪಾಟ್ನಾ ಮನೆಯಿಂದ ಹೊರ ಹೋಗಿದ್ದಾರೆ. ರೋಹಿಣಿ ಆಚಾರ್ಯ ಅವರು ತಾನು ಮನೆಯಿಂದ ಹೊರಹೋಗಲು ಕಾರಣವೆಂದು ಇಬ್ಬರು ಹೆಸರು ಹೇಳಿದ್ದಾರೆ. ಅದರಲ್ಲಿ ರಮೀಜ್ ಎನ್ನುವವರ ಹೆಸರೂ ಇದೆ.

ಲಾಲೂ ಕೌಟುಂಬಿಕ ಬಿಕ್ಕಟ್ಟು; ಮಗಳು ರೋಹಿಣಿ ಹೆಸರಿಸಿದ ರಮೀಜ್ ಖಾನ್ ಯಾರು?
ಲಾಲೂ ಕುಟುಂಬ

Updated on: Nov 16, 2025 | 6:36 PM

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಕುಟುಂಬದ ಜಗಳ (Lalu Prasad Yadav family fight) ಮತ್ತಷ್ಟು ಬಟಾಬಯಲಾಗಿದೆ. ಲಾಲೂ ಅವರ ಏಳು ಪುತ್ರಿಯರಲ್ಲಿ ಒಬ್ಬರಾದ ರೋಹಿಣಿ ಆಚಾರ್ಯ (Rohini Acharya) ಅವರು ತಮ್ಮ ತಂದೆಯ ಮನೆಯಿಂದ ಹೊರಬಿದ್ದಿದ್ದಾರೆ. ಆರ್​ಜೆಡಿ ಪಕ್ಷ ಹಾಗೂ ತವರಿನ ಸಂಬಂಧವನ್ನು ಕಡಿದುಕೊಂಡಿರುವುದಾಗಿ ಅವರು ಹೇಳಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಅವರು ಸಹೋದರ ತೇಜಸ್ವಿ ಯಾದವ್ ಅವರನ್ನು ದೂರಿದ್ದಾರೆ. ಹಾಗೆಯೇ, ಸಂಜಯ್ ಯಾದವ್ ಹಾಗು ರಮೀಜ್ ಖಾನ್ (Rameez Nemat Khan) ಎಂಬಿಬ್ಬರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ರೋಹಿಣಿ ಅವರು ಮನೆಯಿಂದ ಹೊರ ಹೋಗಲು ಕಾರಣರಾದರೆನ್ನಲಾದ ರಮೀಜ್ ಯಾರು?

ರಮೀಜ್ ಖಾನ್ ಯಾರು?

ರಮೀಜ್ ನೇಮತ್ ಖಾನ್ ಅವರು ತೇಜಸ್ವಿ ಯಾದವ್ ಅವರ ಆಪ್ತ ಸ್ನೇಹಿತ. ತೇಜಸ್ವಿ ಅವರ ಪರಮಾಪ್ತ ವಲಯದಲ್ಲಿರುವ ವ್ಯಕ್ತಿ. ಕ್ರಿಕೆಟ್ ಮೈದಾನದಿಂದ ಶುರುವಾದ ಅವರ ಗೆಳೆತನ ಈಗ ರಾಜಕೀಯ ಪಡಸಾಲೆಯವರೆಗೂ ಛಾಪು ಮೂಡಿಸಿದೆ. ತೇಜಸ್ವಿ ಯಾದವ್ ಹಾಗೂ ಆರ್​ಜೆಡಿ ಪಕ್ಷದ ಸೋಷಿಯಲ್ ಮೀಡಿಯಾ ಪ್ರಚಾರ ಹಾಗೂ ಅಭಿಯಾನ ತಂಡಗಳ ಉಸ್ತುವಾರಿಯನ್ನು 39 ವರ್ಷದ ರಮೀಜ್ ಹೊತ್ತು ನಿಭಾಯಿಸುತ್ತಾರೆ. ರಮೀಜ್ ತಂದೆ ನೇಮತುಲ್ಲಾ ಖಾನ್ ಅವರು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯಲ್ಲಿ ಪ್ರೊಫೆಸರ್ ಆಗಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ ಸಿಎಂ ಗಾದಿಗೆ ಟಿಕೆಟ್ ವಿತರಣೆ ಸೂತ್ರ? ಜೆಡಿಯುಗೆ ಸಿಎಂ; ಬಿಜೆಪಿ, ಎಲ್​ಜೆಪಿಗೆ ಡಿಸಿಎಂ ಸ್ಥಾನ?

ಮಾಜಿ ಸಂಸದನ ಅಳಿಯ ರಮೀಜ್ ವಿರುದ್ದ ಇವೆ ಹಲವು ಪ್ರಕರಣಗಳು

ಉತ್ತರಪ್ರದೇಶದಲ್ಲಿ ಎರಡು ಬಾರಿ ಸಂಸದರಾಗಿರುವ ಮತ್ತು ಈಗ ಮಾಜಿ ಸಂಸದರಾಗಿರುವ ರಿಜ್ವಾನ್ ಜಹೀರ್ ಅವರ ಮಗಳಾದ ಝೀಬಾ ರಿಜ್ವಾನ್ ಅವರನ್ನು ರಮೀಜ್ ನೇಮತ್ ಖಾನ್ ವಿವಾಹವಾಗಿದ್ದಾರೆ. ಝೀಬಾ ಕೂಡ ರಾಜಕೀಯದಲ್ಲಿದ್ದಾರೆ. ರಮೀಜ್ ನೇಮತ್ ಖಾನ್ ವಿರುದ್ಧ ಹಲ್ಲೆ ಪ್ರಕರಣ ಇದೆ. ಅಷ್ಟೇ ಅಲ್ಲ, ಇವರ ಪತ್ನಿ ಝೀಬಾ ಹಾಗು ಮಾವ ರಿಜ್ವಾನ್, ಈ ಮೂವರ ವಿರುದ್ಧ ತುಳಸಿಪುರ್ ನಗರ್ ಪಂಚಾಯತ್​ನ ಮಾಜಿ ಅಧ್ಯಕ್ಷ ಫಿರೋಜ್ ಪಪ್ಪು ಹತ್ಯೆ ಪ್ರಕರಣದಲ್ಲಿ ಆರೋಪ ಇದೆ. ರಮೀಜ್ ಖಾನ್ ವಿರುದ್ಧ 9ಕ್ಕೂ ಹೆಚ್ಚು ಪ್ರಕರಣಗಳಿವೆ. ಕೊಲೆ, ಹಲ್ಲೆ, ಕೊಲೆಯತ್ನ ಪ್ರಕರಣಗಳಲ್ಲಿ ಅವರು ಆರೋಪಿಯಾಗಿದ್ದಾರೆ. ಆದರೆ, ರೋಹಿಣಿ ಆಚಾರ್ಯ ಅವರು ಮನೆ ಬಿಟ್ಟುಹೋಗಲು ರಮೀಜ್ ಖಾನ್ ಹೇಗೆ ಕಾರಣರಾದರು ಎಂಬ ಮಾಹಿತಿ ಬೆಳಕಿಗೆ ಬಂದಿಲ್ಲ.

ಲಾಲೂ ಕುಟುಂಬದಲ್ಲಿ ಯಾರು ಯಾರ ವಿರುದ್ಧ?

ಲಾಲೂ ಪ್ರಸಾದ್ ಯಾದವ್ ಅವರದ್ದು ತುಂಬಿದ ಕುಟುಂಬ. ಇಬ್ಬರು ಗಂಡು ಮಕ್ಕಳು ಮತ್ತು ಏಳು ಹೆಣ್ಮಕ್ಕಳು. ಮೀಸಾ ಭಾರ್ತಿ, ರೋಹಿಣಿ ಆಚಾರ್ಯ, ಚಂದಾ ಸಿಂಗ್, ರಾಗಿಣಿ ಯಾದವ್, ಹೇಮಾ ಯಾದವ್, ಅನುಷ್ಕಾ ರಾವ್, ತೇಜ್ ಪ್ರತಾಪ್ ಯಾದವ್, ರಾಜಲಕ್ಷ್ಮೀ ಸಿಂಗ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರು ಲಾಲೂ ಅವರ ಮಕ್ಕಳು. ಈ ಪೈಕಿ ತೇಜ್ ಪ್ರತಾಪ್ ಯಾದವ್ 7ನೆಯವರಾದರೆ, ತೇಜಸ್ವಿ ಯಾದವ್ ಕಿರಿಯ ಪುತ್ರ.

ಇದನ್ನೂ ಓದಿ: ಕೊಳಕು ಮೂತ್ರಪಿಂಡಕ್ಕೆ ಬದಲಾಗಿ ಚುನಾವಣಾ ಟಿಕೆಟ್, ಆರೋಪಗಳ ಬಗ್ಗೆ ರೋಹಿಣಿ ಆಚಾರ್ಯ ಬೇಸರ

ಪಾಟ್ನಾದಲ್ಲಿರುವ ಕುಟುಂಬದ ಮನೆಯಿಂದ ರೋಹಿಣಿ ಆಚಾರ್ಯ ಅವರು ಹೊರಬಿದ್ದ ಬೆನ್ನಲ್ಲೇ ರಾಜಲಕ್ಷ್ಮೀ, ರಾಗಿಣಿ ಮತ್ತು ಚಾಂದ ಅವರೂ ಕೂಡ ಹೊರನೆಡೆದಿದ್ದಾರೆ. ಇವರಿಂದ ಯಾವುದೇ ಹೇಳಿಕೆ ಬಂದಿಲ್ಲ. ಈ ಹಿಂದೆ ಪಕ್ಷ ಹಾಗೂ ಕುಟುಂಬದಿಂದ ಉಚ್ಛಾಟಿತರಾಗಿದ್ದ ತೇಜ್ ಪ್ರತಾಪ್ ಯಾದವ್ ಅವರು ಪ್ರತಿಕ್ರಿಯಿಸಿದ್ದಾರೆ. ತನಗೂ ಕೂಡ ಅನ್ಯಾಯವಾಗಿದೆ. ಆದರೆ, ಅಕ್ಕಳಾದ ರೋಹಿಣಿ ವಿಚಾರ ಕೇಳಿ ಇನ್ನೂ ಹೆಚ್ಚಿನ ಬೇಸರವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ