ಮದ್ಯ ಹಗರಣ: ಎಫ್ಐಆರ್ ದಾಖಲಿಸಿದ ಸಿಬಿಐ; ಮನೀಶ್ ಸಿಸೋಡಿಯಾ ಆರೋಪಿ ನಂಬರ್ 1

| Updated By: ವಿವೇಕ ಬಿರಾದಾರ

Updated on: Aug 20, 2022 | 10:53 PM

ಮದ್ಯದ ವ್ಯಾಪಾರಿ ಸಮೀರ್ ಮಹೇಂದ್ರು ಅವರು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಹಚರರಿಗೆ 5 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ 2021-22ರ ಅಬಕಾರಿ ನೀತಿ ರಚನೆ ಮತ್ತು ಅನುಷ್ಠಾನದ ಅಡಿ ಎಫ್‌ಐಆರ್​ ದಾಖಲಿಸಿದೆ.

ಮದ್ಯ ಹಗರಣ: ಎಫ್ಐಆರ್ ದಾಖಲಿಸಿದ ಸಿಬಿಐ; ಮನೀಶ್ ಸಿಸೋಡಿಯಾ ಆರೋಪಿ ನಂಬರ್ 1
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ
Follow us on

ನವದೆಹಲಿ: ಮದ್ಯದ ವ್ಯಾಪಾರಿ ಸಮೀರ್ ಮಹೇಂದ್ರು ಅವರು ದೆಹಲಿ (Delhi) ಉಪಮುಖ್ಯಮಂತ್ರಿ (Deputy Chief Minister) ಮನೀಶ್ ಸಿಸೋಡಿಯಾ (Manish Sisodia)  ಅವರ ಸಹವರ್ತಿಗೆ 5 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ (CBI) 2021-22ರ ಅಬಕಾರಿ ನೀತಿ ರಚನೆ ಮತ್ತು ಅನುಷ್ಠಾನದ ಅಡಿ ಎಫ್‌ಐಆರ್​ ದಾಖಲಿಸಿದೆ. ಸಮೀರ್ ಮಹೇಂದ್ರು ಅವರು, ರಾಧಾ ಇಂಡಸ್ಟ್ರೀಸ್‌ನ ಯುಸಿಒ ಬ್ಯಾಂಕ್​ ಖಾತೆ ಸಂಖ್ಯೆ 10220210004647 ಗೆ 1 ಕೋಟಿ ರೂಗಳನ್ನು ಜಮಾ ಮಾಡಿದ್ದಾರೆ. ರಾಧಾ ಇಂಡಸ್ಟ್ರೀಸ್​ನನ್ನು ಮನೀಶ್ ಸಿಸೋಡಿಯಾ ಅವರ ಸಹಚರ ದಿನೇಶ್​ ಅರೋರಾ ಎಂಬುವರು ನಿರ್ವಹಿಸುತ್ತಿದ್ದಾರೆಂದು ಸಿಬಿಐ ಹೇಳಿದೆ.

ಎಫ್ಐಆರ್ ಪ್ರಕಾರ ಆರೋಪಿ ವಿಜಯ್ ನಾಯರ್ ಪರವಾಗಿ ಮನಿಶ್ ಸಿಸೋಡಿಯಾ ಸಹವರ್ತಿ ಅರ್ಜುನ್ ಪಾಂಡೆ ಅವರು ಮಹೇಂದ್ರು ಅವರಿಂದ 2-4 ಕೋಟಿ ರೂಪಾಯಿಯನ್ನು ಕ್ಯಾಶ್ನಲ್ಲಿ ಪಡೆದಿದ್ದಾರೆ ಎನ್ನಲಾಗಿದೆ. ಸಿಬಿಐ ಶುಕ್ರವಾರ (ಆ 19) ರಂದು ಸಿಸೋಡಿಯಾ ಅವರ ಅಧಿಕೃತ ನಿವಾಸ, ಗುರುಗ್ರಾಮ್, ಚಂಡೀಗಢ, ಮುಂಬೈ, ಹೈದರಾಬಾದ್, ಲಕ್ನೋ ಮತ್ತು ಬೆಂಗಳೂರು ಸೇರಿದಂತೆ ದೆಹಲಿಯಾದ್ಯಂತ 31 ಸ್ಥಳಗಳಲ್ಲಿ ದಾಳಿ ಮಾಡಿದೆ. ದಾಳಿ ವೇಳೆ ದೋಷಾರೋಪಣೆಯ ದಾಖಲೆಗಳು, ಡಿಜಿಟಲ್ ದಾಖಲೆಗಳು ಇತ್ಯಾದಿಗಳನ್ನು ವಶಪಡಿಸಿಕೊಂಡಿದೆ.

ಆಗಸ್ಟ್ 17 ರಂದು ದಾಖಲಿಸಲಾದ ಎಫ್‌ಐಆರ್‌ನಲ್ಲಿ ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ 15 ಜನರನ್ನು ಹೆಸರಿಸಲಾಗಿದೆ. ಅಬಕಾರಿ ನೀತಿಯಲ್ಲಿನ ಮಾರ್ಪಾಡುಗಳು, ಪರವಾನಗಿದಾರರಿಗೆ ಅನಪೇಕ್ಷಿತ ಅನುಕೂಲಗಳನ್ನು ವಿಸ್ತರಿಸುವುದು, ಪರವಾನಗಿ ಶುಲ್ಕದಲ್ಲಿ ಮನ್ನಾ ಅಥವಾ ಕಡಿತ, ಅನುಮೋದನೆಯಿಲ್ಲದೆ ಎಲ್ -1 ಪರವಾನಗಿ ವಿಸ್ತರಣೆ ಇತ್ಯಾದಿ ಸೇರಿದಂತೆ ಅಕ್ರಮಗಳನ್ನು ಎಸಗಲಾಗಿದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಎಫ್‌ಐಆರ್‌ನಲ್ಲಿ ಉಪ ಮುಖ್ಯಮಂತ್ರಿಯನ್ನು ಆರೋಪಿ ನಂಬರ್ 1 ಎಂದು ಹೆಸರಿಸಲಾಗಿದ್ದು, ಮಧ್ಯವರ್ತಿಗಳು ಅಕ್ರಮ ಎಸಗಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಮಾಜಿ ಅಬಕಾರಿ ಆಯುಕ್ತ ಅರ್ವ ಗೋಪಿ ಕೃಷ್ಣ, ಅಬಕಾರಿ ಉಪ ಆಯುಕ್ತ ಆನಂದ್ ತಿವಾರಿ, ಮತ್ತು ಮಾಜಿ ಅಬಕಾರಿ ಸಹಾಯಕ ಕಮಿಷನರ್ ಪಂಕಜ್ ಭಟ್ನಾಗರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಸಿಲುಕಿರುವ ಅಮಿತ್ ಅರೋರಾ, ದಿನೇಶ್ ಅರೋರಾ ಮತ್ತು ಅರುಣ್ ಪಾಂಡೆ ಮದ್ಯದ ವ್ಯಾಪಾರಿಗಳಿಂದ ಕಮಿಷನ್ ಪಡೆಯುತ್ತಿದ್ದರು. ಕಮಿಷನ್ ಹಣಕ್ಕಾಗಿ ಅವರಿಗೆ ಪರವಾನಗಿ ನೀಡಲಾಗಿತ್ತು. ಈ ಎಲ್ಲಾ ಆರೋಪಿಗಳು ಮನೀಶ್ ಸಿಸೋಡಿಯಾ ಅವರಿಗೆ ಆಪ್ತರು ಎನ್ನಲಾಗಿದೆ. ಹೀಗಾಗಿಯೇ ಮನೀಶ್ ಸಿಸೋಡಿಯಾ ಬಗ್ಗೆ ಸಿಬಿಐಗೆ ಅನುಮಾನ ಮೂಡಿದೆ.

Published On - 10:41 pm, Sat, 20 August 22